ಭೀಮಣ್ಣ ಗಜಾಪುರ
ತಾಲೂಕಿನ 19 ಹಳ್ಳಿಗಳನ್ನು ಸಮಸ್ಯಾತ್ಮಕ ಎಂದು ಗುರುತಿಸಲಾಗಿದೆ. ನೀರಿನ ಸಮಸ್ಯೆ ನೀಗಿಸಲು ಜಿಲ್ಲಾ, ತಾಲೂಕು ಆಡಳಿತಗಳ ಪೂರಕ ಕ್ರಮಗಳ ನಡುವೆಯೂ ಈ ಬಾರಿ ನೀರಿಗಾಗಿ ಒದ್ದಾಟ ಎದುರಾಗುವ ಲಕ್ಷಣಗಳಿವೆ.
ಪ್ರತಿ ವರ್ಷ ಮಾರ್ಚ್ ತಿಂಗಳಲ್ಲೇ ಕುಡಿಯುವ ನೀರಿನ ಹಾಹಾಕಾರ ಆಗುತ್ತಿತ್ತು. ಜನ- ಜಾನುವಾರುಗಳು ಹನಿ ನೀರಿಗೂ ಹರಸಾಹಸ ಪಡಬೇಕಾಗಿತ್ತು. ಆದರೆ ಕಳೆದ ವರ್ಷ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿದ್ದರಿಂದ ಜನ- ಜಾನುವಾರುಗಳಿಗೆ ಬೇಸಿಗೆ ಸಂದರ್ಭ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಆದರೂ ಈಗಾಗಲೇ ತಾಲೂಕಿನ ಗುಡೇಕೋಟೆ ಹಾಗೂ ಹೊಸಹಳ್ಳಿ ಭಾಗದಲ್ಲಿ ಆರು ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಯ ಬಿಸಿ ತಟ್ಟಿದೆ.ತಾಲೂಕಿನಲ್ಲಿ 25 ಗ್ರಾಪಂ, 156 ಹಳ್ಳಿಗಳಿವೆ. 6 ಹಳ್ಳಿಗಳಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇದೆ. ಇನ್ನು, ಪಟ್ಟಣದ ಕೆಲ ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಈ ಸಲದ ಬೇಸಿಗೆಯಲ್ಲಿ 19 ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಬಹುದೆಂದು ಅಂದಾಜಿಸಲಾಗಿದೆ.
ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾ, ಹುರುಳಿಹಾಳು ಮ್ಯಾಸರಹಟ್ಟಿ, ಪೂಜಾರಹಳ್ಳಿ, ಕಾತ್ರಿಕೆಹಟ್ಟಿ, ಮಾಳೇಹಳ್ಳಿ, ಕಾನಮಡುಗು, ಪಿಚ್ಚಾರಹಟ್ಟಿ, ಕಾನಹೊಸಹಳ್ಳಿ, ಸಿದ್ದಾಪುರ ವಡ್ಡರಹಟ್ಟಿ, ಚೌಡಾಪುರ, ಬಡೇಲಡುಕು, ಚಂದ್ರಶೇಖರಪುರ, ಗಂಡಬೊಮ್ಮನಹಳ್ಳಿ, ಕೆ.ದಿಬ್ಬದಹಳ್ಳಿ, ಚಿರತಗುಂಡು, ಗುಡೇಕೋಟೆ, ಕಸಾಪುರ ಸೇರಿ 19 ಹಳ್ಳಿಗಳಲ್ಲಿ ಈ ಸಲದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದೆಂದು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವುದಕ್ಕೆ ಈಗಾಗಲೇ ಗ್ರಾಪಂ ಪಿಡಿಒಗಳಿಗೆ ಅಲರ್ಟ್ ಆಗಿರಲು ತಿಳಿಸಿದೆ.
ಮುಂಜಾಗ್ರತಾ ಸಭೆ:
ಕೂಡ್ಲಿಗಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಈಗಾಗಲೇ ಸಭೆ ನಡೆಸಿ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಗಿದೆ. ಸಮಸ್ಯೆಯಾಗುವ ಹಳ್ಳಿಗಳಲ್ಲಿ ಖಾಸಗಿ ಬೋರ್‌ವೆಲ್‌ನಿಂದ ನೀರು ಪೂರೈಸಲು ಸೂಚಿಸಲಾಗಿದೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್.
ಕಳೆದೆರಡು ವರ್ಷಗಳ ಹಿಂದೆ ಬೇಸಿಗೆಯಲ್ಲಿ ನಮ್ಮೂರಿನಲ್ಲಿ ಕುಡಿವ ನೀರಿನ ಸಮಸ್ಯೆ ಸಾಕಷ್ಟಿತ್ತು. ಈ ಸಲ ಹೆಚ್ಚಿನ ಬಿಸಿಲು ಇರುವುದರಿಂದ ಮತ್ತೆ ಜನ-ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆಯಾಗುವ ಆತಂಕವಿದೆ ಎನ್ನುತ್ತಾರೆ ಗುಡೇಕೋಟೆ ಬೇಕರಿ ಸುರೇಶ್.