ಚರಂಡಿ ಅವ್ಯವಸ್ಥೆ, ಟಾಟಾಮಣ್ಣೂರ ಗ್ರಾಮಸ್ಥರ ನರಕಯಾತನೆ

KannadaprabhaNewsNetwork |  
Published : Mar 30, 2026, 03:30 AM IST
ಹಾವೇರಿ ತಾಲೂಕಿನ ಟಾಟಾ ಮಣ್ಣೂರ ಗ್ರಾಮದಲ್ಲಿ ಚರಂಡಿ ನೀರು ಮನೆಗಳ ಎದುರು ನಿಂತಿರುವುದು. | Kannada Prabha

ಸಾರಾಂಶ

ಗುತ್ತಲ ಸಮೀಪದ ಟಾಟಾ ಮಣ್ಣೂರ ಗ್ರಾಮದಲ್ಲಿ ಚರಂಡಿಗಳ ಅವ್ಯವಸ್ಥೆಯಿಂದ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದ್ದು, ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಗ್ರಾಮದಲ್ಲಿ ದುರ್ವಾಸನೆ ಹೆಚ್ಚಾಗಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.

ಗುತ್ತಲ: ಸಮೀಪದ ಟಾಟಾ ಮಣ್ಣೂರ ಗ್ರಾಮದಲ್ಲಿ ಚರಂಡಿಗಳ ಅವ್ಯವಸ್ಥೆಯಿಂದ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುವಂತಾಗಿದ್ದು, ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಗ್ರಾಮದಲ್ಲಿ ದುರ್ವಾಸನೆ ಹೆಚ್ಚಾಗಿದ್ದು, ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಕೋಣತಂಬಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಾಟಾ ಮಣ್ಣೂರ ಗ್ರಾಮದಲ್ಲಿ ಚರಂಡಿಗಳು ತುಂಬಿ ತುಳುಕುತ್ತಿದ್ದರೂ ಸಂಬಂಧಪಟ್ಟ ಗ್ರಾಪಂ ಸಿಬ್ಬಂದಿ ಚರಂಡಿಗಳನ್ನು ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ನಿವಾಸಿಗಳು ಪರದಾಡುವಂತಾಗಿದೆ. ವರದಾ ನದಿ ತೀರದಲ್ಲಿದ್ದ ಈ ಗ್ರಾಮವು ಪ್ರತಿವರ್ಷ ಪ್ರವಾಹಕ್ಕೆ ತುತ್ತಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 2009ರಲ್ಲಿ ಈ ಗ್ರಾಮವನ್ನು ಸ್ಥಳಾಂತರಿಸಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಆದರೆ ಈಗ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಹಾಳಾಗಿದ್ದು, ಕೊಳಚೆ ನೀರು ಸರಾಗವಾಗಿ ಹಿರಿದು ಹೋಗದೇ ಗ್ರಾಮದ ರಸ್ತೆಗಳ ಮೇಲೆ ಹರಿಯುತ್ತಿದೆ. ಇನ್ನು ಕೆಲವು ಕಡೆ ಮನೆಗಳ ಎದುರು ನಿಲ್ಲುತ್ತಿದೆ. ಹೀಗಾಗಿ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಮಣ್ಣೂರ ಗ್ರಾಮ ಸ್ಥಳಾಂತರಗೊಂಡ ವೇಳೆ ಗ್ರಾಮದಲ್ಲಿ ಸುಸಜ್ಜಿತ ಮನೆಗಳು, ರಸ್ತೆ, ಚರಂಡಿ, ಉದ್ಯಾನವನ ನಿರ್ಮಿಸಲಾಗಿತ್ತು. ಆದರೆ ಕೊಳಚೆ ನೀರು ಗ್ರಾಮದಿಂದ ಹೊರಗಡೆ ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಗ್ರಾಮಕ್ಕೆ ಹೊಂದಿಕೊಂಡ ಜಮೀನುಗಳಿಗೆ ಕೊಳಚೆ ನೀರು ಹರಿದು ಹೋಗುತ್ತಿತ್ತು. ನಿತ್ಯ ಕೊಳಚೆ ನೀರು ಜಮೀನುಗಳಿಗೆ ಹಾಯುತ್ತಿದ್ದರಿಂದ ಬೆಳೆಗಳು ಹಾಳಾಗುತ್ತವೆ ಎಂದು ರೈತರು ಕೊಳಚೆ ನೀರು ಜಮೀನಿಗೆ ಬಾರದಂತೆ ತಡೆದಿದ್ದರಿಂದ ಗ್ರಾಮದ ಚರಂಡಿ ನೀರು ಹರಿದು ಹೋಗಲು ಸ್ಥಳವೇ ಇಲ್ಲದಂತಾಗಿ ಸಮಸ್ಯೆಯಾಗಿದೆ. ಚರಂಡಿಗಳ ಸ್ವಚ್ಛತೆಗೆ ನಿರ್ಲಕ್ಷ್ಯ: ಗ್ರಾಮದಲ್ಲಿ ನಿರ್ಮಿಸಿರುವ ಚರಂಡಿಗಳ ಗಾತ್ರ ಸಣ್ಣದಾಗಿದ್ದು, ಅವುಗಳು ಕೂಡ ಹಾಳಾಗಿವೆ. ಹೀಗಾಗಿ ಗ್ರಾಮದಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆಯೇ ಇಲ್ಲದಂತಾಗಿದೆ. ಅಲ್ಲದೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅವರು ಕಾಲಕಾಲಕ್ಕೆ ಚರಂಡಿ ಸ್ವಚ್ಛಗೊಳಿಸದ ಹಿನ್ನಲೆ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿವೆ. ಈ ಬಗ್ಗೆ ಗ್ರಾಪಂಗೆ ಮಾಹಿತಿ ನೀಡಿದರೂ ಅದನ್ನು ಸ್ವಚ್ಛಗೊಳಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಕ್ಕೆ ಡಿಸಿ, ಸಿಇಒ ಭೇಟಿ ಆಗ್ರಹ: ಮಣ್ಣೂರ ಗ್ರಾಮವನ್ನು 2009ರಲ್ಲಿ ಸ್ಥಳಾಂತರ ಮಾಡುವ ವೇಳೆ ಚರಂಡಿ, ರಸ್ತೆಗಳನ್ನು ನಿರ್ಮಿಸಲಾಗಿತ್ತು. ಗ್ರಾಮದಲ್ಲಿ ಸದ್ಯ ಚರಂಡಿ, ರಸ್ತೆಗಳು ಹಾಳಾಗಿದ್ದು ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದಂತಾಗಿದೆ. ಹೀಗಾಗಿ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಕೂಡಲೇ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಅವರು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಬೇಕು ಎಂದು ಗ್ರಾಮದ ಮುಖಂಡರಾದ ಶೇಖಪ್ಪ ಕಮತರ, ಈರಣ್ಣ ಹೊಸಮನಿ, ವೀರಣ್ಣ ಮಡ್ಲೂರ, ಚಂದ್ರಯ್ಯ ಹಿರೇಮಠ, ಪುಟ್ಟಪ್ಪ ಕಮತರ ಸೇರಿದಂತೆ ಗ್ರಾಮಸ್ಥರದು ಆಗ್ರಹಿಸಿದ್ದಾರೆ. ಮಣ್ಣೂರ ಗ್ರಾಮದಲ್ಲಿ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆ, ಮನೆಗಳ ಎದುರು ನಿಲ್ಲುತ್ತಿರುವುದು ಗಮನಕ್ಕೆ ಬಂದಿದೆ. ಗ್ರಾಮದಲ್ಲಿ ನಿರ್ಮಿಸಿರುವ ಚರಂಡಿಗಳ ಗಾತ್ರ ಸಣ್ಣದಾಗಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಈ ಕೂಡಲೇ ಜೆಸಿಬಿ ಕಳುಹಿಸಿ ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಪಂ ಕೋಣನತಂಬಗಿ ಪಿಡಿಒ ಕೆ.ಎಫ್. ಚೂರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಚುನಾವಣೆ ಪ್ರಚಾರಕ್ಕೆ ಸಿಎಂ ಸಿದ್ದರಾಮಯ್ಯ
ಸಮಾಜದ ಎಲ್ಲ ರಂಗಗಳಲ್ಲೂ ಸಶಕ್ತರಾಗುತ್ತಿರುವ ಮಹಿಳೆಯರು