ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಪಟ್ಟಣದ ಕೊಪ್ಪ ರಸ್ತೆಯ ಖಾಸಗಿ ಲೇಔಟ್‌ನ ಮನೆಗಳ ಕೊಳಚೆ ನೀರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ಹರಿದು ಸಮಸ್ಯೆಯುಂಟಾಗಿದೆ ಎಂಬ ದೂರಿನ ಹಿನ್ನೆಲೆ ಎನ್ಆರ್‌ಪುರ ತಾಪಂ ಇಒ ಎಚ್.ಡಿ. ನವೀನ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇಒ, ಕೊಪ್ಪ ರಸ್ತೆಯ ಖಾಸಗಿ ಲೇಔಟ್‌ನಲ್ಲಿ ಮನೆಗಳ ಕೊಳಚೆ ನೀರು ವಿಲೇವಾರಿಯಾಗಲು ಸೂಕ್ತ ಇಂಗುಗುಂಡಿಗಳು ಇಲ್ಲದ ಕಾರಣ ಕೊಳಚೆ ನೀರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣಕ್ಕೆ ಹರಿದುಬರುತ್ತಿದೆ. ಈ ಬಗ್ಗೆ ಮನೆಯ ಮಾಲೀಕರಿಗೆ ಹಾಗೂ ಜಾಗದ ಮಾಲೀಕರಿಗೆ ನೋಟಿಸ್ ನೀಡಿ ಕೊಳಚೆ ನೀರನ್ನು ಸಮರ್ಪಕವಾಗಿ ಇಂಗುಗುಂಡಿಗಳಿಗೆ ಬಿಡುವಂತೆ ಸೂಚಿಸಲಾಗಿದೆ. ಲೇಔಟ್‌ಗೆ ರಸ್ತೆ, ಇನ್ನಿತರ ಮೂಲಭೂತ ಸೌಲಭ್ಯ ಮಾಡದೆ ಇರುವುದು ಸಹ ಕಂಡುಬಂದಿದೆ. ಇದರೊಂದಿಗೆ ಲೇಔಟ್‌ಗೆ ಗ್ರಾಪಂನ ಹಿಂದಿನ ಕಾರ್ಯದರ್ಶಿ ನಗರಾಭಿವೃದ್ಧಿ ಹಾಗೂ ಯೋಜನಾ ಇಲಾಖೆ ವಿನ್ಯಾಸ ನಕ್ಷೆ ಇಲ್ಲದೆ ತಾವೇ ಸ್ವತಃ ವಿನ್ಯಾಸ ನಕ್ಷೆ ರಚಿಸಿ ಇ ಸ್ವತ್ತು ಮಾಡಿಕೊಟ್ಟಿರುವ ಬಗ್ಗೆ ದೂರು ಬಂದಿದೆ.
ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಸೂಚನೆ ಮೇರೆಗೆ ಲೇಔಟ್‌ನ ಇ ಸ್ವತ್ತನ್ನು ರದ್ದುಪಡಿಸುವಂತೆ ತಾಪಂ ಕಚೇರಿಗೆ ಸ್ಥಳೀಯ ಬಿ.ಕಣಬೂರು ಗ್ರಾಪಂನವರು ಪತ್ರ ಬರೆದಿದ್ದು, ನಿಯಮಾನುಸಾರ ನೋಂದಾವಣೆ ಆಗುವವರೆಗೆ ಇ-ಸ್ವತ್ತನ್ನು ರದ್ದುಪಡಿಸಲಾಗುವುದು. ಲೇಔಟ್ ಮಾಲೀಕರು, ನಿವೇಶನ ಮಾಲೀಕರು ಸಮರ್ಪಕವಾಗಿ ಇಂಗುಗುಂಡಿ, ಮೂಲಭೂತ ಸೌಕರ್ಯಗಳನ್ನು ಮಾಡಿದ ಮೇಲೆ ಇ-ಸ್ವತ್ತು ಮಾಡಿಕೊಡಲಾಗುವುದು ಎಂದು ತಿಳಿಸಿದರು.ಸ್ಥಳದಲ್ಲಿ ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ತಾಪಂ ನರೇಗಾದ ಸಹಾಯಕ ನಿರ್ದೆಶಕರು ಮನೀಶ್, ಗ್ರಾಪಂ ಕಾರ್ಯದರ್ಶಿ ರಾಮಪ್ಪ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಭಿಯಂತರ ಸುನಿಲ್, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರವೀಣ್ ಮತ್ತಿತರರು ಹಾಜರಿದ್ದರು.