ಕಾವೇರಿ ನದಿಗೆ ಕೊಳಚೆ ನೀರು: ತನಿಖೆಗೆ ಗೂಳಿಗೌಡ ಒತ್ತಾಯ

KannadaprabhaNewsNetwork | Published : May 29, 2024 1:34 AM

ಸಾರಾಂಶ

ಕೈಗಾರಿಕೆ ಮತ್ತು ಘನ ತ್ಯಾಜ್ಯ ಮಿಶ್ರಿತ ನೀರು ಸೇರ್ಪಡೆಯಿಂದ ‍ಕಾವೇರಿ ನದಿ ನೀರು ಕಲುಷಿತಗೊಳ್ಳುತ್ತಿರುವ ಕುರಿತು ಅಧ್ಯಯನ ನಡೆಸಲು ವಿಧಾನ ಪರಿಷತ್ತು ಸದಸ್ಯ ದಿನೇಶ್‌ ಗೂಳಿಗೌಡ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೈಗಾರಿಕೆ ಮತ್ತು ಘನ ತ್ಯಾಜ್ಯ ಮಿಶ್ರಿತ ನೀರು ಸೇರ್ಪಡೆಯಿಂದ ‍ಕಾವೇರಿ ನದಿ ನೀರು ಕಲುಷಿತಗೊಳ್ಳುತ್ತಿರುವ ಕುರಿತು ಅಧ್ಯಯನ ನಡೆಸಲು ತನಿಖಾ ತಂಡ ರಚಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ವಿಧಾನ ಪರಿಷತ್ತು ಸದಸ್ಯ ದಿನೇಶ್‌ ಗೂಳಿಗೌಡ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಪತ್ರ ಬರೆದಿದ್ದಾರೆ.

ಪರಿಸರ ಇಲಾಖೆ, ಕೈಗಾರಿಕಾ ಇಲಾಖೆ, ನೀರಾವರಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ವರ್ಗದ ತಜ್ಞರನ್ನೊಳಗೊಂಡ ಸಮಿತಿ ರಚನೆ ಮಾಡಬೇಕು. ಈ ಸಮಿತಿಯು ಸಮರ್ಪಕವಾಗಿ ಅಧ್ಯಯನ ನಡೆಸಿ ಸೂಕ್ತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು ನಗರ ಮಾತ್ರವಲ್ಲದೆ ಬೆಂಗಳೂರು ಗ್ರಾಮಾಂತರ, ಮೈಸೂರು ಮತ್ತು ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ದಾಹವನ್ನು ನೀಗಿಸುತ್ತಿರುವ ಕಾವೇರಿ ನದಿ ನೀರು ಇಂದು ಹಾಲಾಹಲವಾಗಿ ಮಾರ್ಪಡುತ್ತಿದೆ. ಒಳಚರಂಡಿ ನೀರು ಹಾಗೂ ಹಲವು ಕೈಗಾರಿಕೆಗಳ ತ್ಯಾಜ್ಯದಿಂದ ನದಿಯು ನೈಸರ್ಗಿಕ ಗುಣ ಕಳೆದುಕೊಳ್ಳುತ್ತಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2023ರಲ್ಲಿ ನದಿಗಳ ಮಾಲಿನ್ಯದ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಕಾವೇರಿ ಕೂಡ ಸೇರಿದೆ ಎಂದು ಪತ್ರದಲ್ಲಿ ದಿನೇಶ್‌ ಗೂಳಿಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಸಿಪಿಸಿಬಿ ವರದಿ ಪ್ರಕಾರ, ಶುದ್ಧ ನೀರಿನಲ್ಲಿ ಪ್ರತಿ ಲೀಟರ್ ನೀರಿನಲ್ಲಿ 1 ಎಂಜಿಗಿಂತ ಕಡಿಮೆ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಪ್ರಮಾಣ ಇರಬೇಕು. ಆದರೆ, ಕಾವೇರಿ ನದಿಯಲ್ಲಿ ಹೆಚ್ಚು ಇದೆ ಎಂಬುದನ್ನು ತಿಳಿಸಿದೆ. ಇದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಆದ್ದರಿಂದ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚನೆ ಮಾಡಿ ಕ್ರಮಕೈಗೊಳ್ಳುವ ಮೂಲಕ ಕಾವೇರಿ ನದಿಯನ್ನು ಮಲಿನ ಮುಕ್ತ ಮಾಡುವಂತೆ ಆಗ್ರಹಿಸಿದ್ದಾರೆ.

Share this article