ರಸ್ತೆಯಲ್ಲಿ ಕೊಳಚೆ ನೀರು: ಓಡಾಡಲು ಜನರ ಗೋಳು

KannadaprabhaNewsNetwork |  
Published : May 10, 2026, 01:15 AM IST
ಸಿಕೆಬಿ-1 ನಗರದ 26ನೇ ವಾರ್ಡ್ ನ ನಗರಸಭೆಗೆ ತೆರಳುವ ಮತ್ತು ಚಿನ್ನದ ಅಂಗಡಿ ಸಾಲಿನ  ಮುಖ್ಯ ರಸ್ತೆಯಾದ  ಗಂಗಮ್ಮ ಗುಡಿ (ಒಪಿಓ ) ರಸ್ತೆಯಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ ಗಳು ಉಕ್ಕಿದ್ದು  ರಸ್ತೆಯ ಮೇಲೆ ಹರಿಯುತ್ತಿರುವ ಯುಜಿಡಿಯ ಕೊಳಚೆ ನೀರು | Kannada Prabha

ಸಾರಾಂಶ

ಈಚೆಗೆ ಸುರಿದ ಮಳೆಯಿಂದಾಗಿ ಚೇಂಬರ್ ಕಟ್ಟಿಕೊಂಡು ಕಲುಷಿತ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಇದರ ದುರ್ವಾಸನೆ ತಾಳಲು ಆಗದು ಎಂದು ಸ್ಥಳೀಯ ನಿವಾಸಿಗಳು ಮತ್ತು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು, ವಾಹನ ಸವಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ನಗರದ 26ನೇ ವಾರ್ಡ್‌ನ ನಗರಸಭೆಗೆ ತೆರಳುವ ಮತ್ತು ಚಿನ್ನದ ಅಂಗಡಿ ಸಾಲಿನ ಮುಖ್ಯ ರಸ್ತೆಯಾದ ಗಂಗಮ್ಮ ಗುಡಿ (ಒಪಿಓ) ರಸ್ತೆಯಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ಗಳು ಉಕ್ಕಿಹರಿಯುತ್ತಿದ್ದು ವಾಹನ ಸವಾರರು, ನಿವಾಸಿಗಳು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೆಲವು ದಿನದ ಹಿಂದೆ ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಚೇಂಬರ್‌ಗೆ ಸಕ್ಕಿಂಗ್ ಮಿಷನ್ ಹಾಕಿ ನೀರು ಹರಿಯಿತೆಂದು ಕೈ ತೊಳೆದುಕೊಂಡರು. ಆದರೆ ಈಚೆಗೆ ಸುರಿದ ಮಳೆಯಿಂದಾಗಿ ಚೇಂಬರ್ ಕಟ್ಟಿಕೊಂಡು ಕಲುಷಿತ ನೀರು ರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಇದರ ದುರ್ವಾಸನೆ ತಾಳಲು ಆಗದು ಎಂದು ಸ್ಥಳೀಯ ನಿವಾಸಿಗಳು ಮತ್ತು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು, ವಾಹನ ಸವಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಮಳೆಗಾಲ ಆರಂಭವಾಗುತ್ತಿದ್ದು ಮಳೆ ಸುರಿದರೆ ಚರಂಡಿಗಳ ಬದಲಿಗೆ ರಸ್ತೆಯ ಮೇಲೆ ನೀರು ಹರಿಯುತ್ತದೆ. ದೊಡ್ಡ ದೊಡ್ಡ ಚರಂಡಿಗಳು ನಿಂತಿರುವ ಕೊಳಚೆ ನೀರಿನಿಂದ ತುಂಬಿವೆ. ಇದರಿಂದ ನಗರಸಭೆಯವರು ಯುದ್ಧ ಕಾಲೇ ಶಸ್ತ್ರಭ್ಯಾಸ ಎನ್ನುವಂತೆ ಮಳೆಗಾಲದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.

ಅವೈಜ್ಞಾನಿಕ ಚರಂಡಿ:

ಜಿಲ್ಲಾ ಕೇಂದ್ರ 31 ವಾರ್ಡುಗಳನ್ನು ಹೊಂದಿದೆ. ಬಹುತೇಕ ವಾರ್ಡ್‌ಗಳಲ್ಲಿ ಚರಂಡಿಯನ್ನು ವೈಜ್ಞಾನಿಕವಾಗಿ ನಿಮಿರ್ಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಬಿಡುಗಡೆಯಾದ ಅನುದಾನಕ್ಕೆ ಅನುಗುಣವಾಗಿ ಅರ್ಧಂಬರ್ಧ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಚರಂಡಿಗಳಿಗೆ ಪರಸ್ಪರ ಸಂಪರ್ಕ ಇರುವುದಿಲ್ಲ. ಎರಡೂರು ತುಂಡಾದ ಚೈನಿ ಮಾದರಿಯಲ್ಲಿ ಇರುತ್ತದೆ. ಹೀಗಿರುವಾಗ ಕೊಳಚೆ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲಿಯೇ ನಿಂತು ಬ್ಲಾಕ್ ಆಗಿ ರಸ್ತೆ ಮೇಲೆ ಹರಿಯುತ್ತಿದ್ದು, ಸ್ಥಳಿಯ ಜನರು ತೊಂದರೆ ಅನುಭವಿಸುವಂತಾಗಿದೆ.

ಜಿಲ್ಲಾ ಕೇಂದ್ರ ಅಭಿವೃದ್ಧಿ ಹೊಂದುತ್ತಿರುವುದರ ನಡುವೆ ಹಲವು ವರ್ಷಗಳಿಂದ ಬಾಧಿಸುತ್ತಿರುವ ಯುಜಿಡಿ ಕಿರಿಕಿರಿ ಮಾತ್ರ ತಪ್ಪಿಲ್ಲ. ನಗರದ ಬಹುತೇಕ ಕಡೆ ಯುಜಿಡಿ ಬ್ಲಾಕ್ ಆಗಿದೆ. ದಿನಗಟ್ಟಲೇ ನೀರು ಹರಿದು ಹೋಗುತ್ತಿರುತ್ತದೆ.

ಇದನ್ನು ಅನಿವಾರ್ಯವಾಗಿ ತುಳಿದುಕೊಂಡು ಹೋಗುವಂತಾಗಿದೆ. ಪದೇ ಪದೆ ಒಳಚರಂಡಿಯಲ್ಲಿ ನೀರು ನಿಲ್ಲುತ್ತಿದ್ದರೂ ತಾತ್ಕಾಲಿಕ ಪರಿಹಾರ ಕೈಗೊಳ್ಳುತ್ತಿದ್ದು, ಆಗಾಗ ಸಕ್ಕಿಂಗ್ ಯಂತ್ರವನ್ನು ತಂದು ನೀರು ಖಾಲಿ ಮಾಡಲಾಗುತ್ತದೆ. ಆದರೆ, ಕೆಲವೇ ದಿನಗಳಲ್ಲಿ ಸಮಸ್ಯೆ ಪುನಃ ಕಂಡು ಬರುತ್ತದೆ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಯುಜಿಡಿಯ ಕೊಳಚೆ ನೀರಿನಿಂದ ಸಾರ್ವಜನಿಕರಿಗೆ ಮುಕ್ತಿ ನೀಡುತ್ತಾರೋ ಕಾದು ನೋಡಬೇಕಾಗಿದೆ.

ಕೋಟ್‌....

ಕಾಯಿಲೆ ವಾಸಿ ಮಾಡಿ ಕೊಳ್ಳಲು ಹಳ್ಳಿಯಿಂದ ನಗರದ ಆಸ್ಪತ್ರೆಗೆ ಬರುತ್ತೇವೆ. ಆದರೆ ಆಸ್ಪತ್ರೆ ದಾರಿಯಲ್ಲಿ ಯುಜಿಡಿಯ ಕೊಳಚೆ ನೀರಿನಲ್ಲಿ ನಡೆದು ಕೊಂಡು ಬಂದು ಕಾಯಿಲೆ ವಾಸಿ ಮಾಡಿಕೊಂಡು ಮತ್ತೆ ಮನೆಗೆ ಹೋಗುವಾಗ ಅದೇ ಯುಜಿಡಿಯ ಕೊಳಚೆ ನೀರಿನಲ್ಲಿ ವಾಪಸು ಹೋಗುವಾಗ ಮತ್ತೆ ಕಾಯಿಲೆ ಹೊತ್ತು ಮನೆ ಸೇರದೆ ಪುನಃ ಆಸ್ಪತ್ರೆಗೆ ಬರುವಂತಾಗಿದೆ.

- ರಾಮಕೃಷ್ಣಪ್ಪ

- ಜಿಲ್ಲಾಸ್ಪತ್ರೆಗೆ ಬಂದಿದ್ದ ರೋಗಿ

ಸಿಕೆಬಿ-1

ಗಂಗಮ್ಮ ಗುಡಿ (ಒಪಿಓ) ರಸ್ತೆಯಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ ಗಳು ಉಕ್ಕಿದ್ದು ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆ ನೀರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಪ್ರತಿಷ್ಠೆ ಬಿಟ್ಟು ಪಕ್ಷ ಸಂಘಟಿಸಿ: ನಿಖಿಲ್‌ ಕುಮಾರಸ್ವಾಮಿ
ನಂದಿನಿ ಉತ್ಪನ್ನಗಳು ಬಳಸಿದರೆ ರೈತರಿಗೆ ಅನುಕೂಲ