ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ಬಸ್ ನಿಲ್ದಾಣದ ಪಕ್ಕದಲ್ಲಿ ಆಟೋ ನಿಲ್ದಾಣ ನಿರ್ಮಿಸಲು ತಂದಿರಿಸಿದ್ದ ಸಾಮಗ್ರಿಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿರುವುದಕ್ಕೆ ಆಕ್ರೋಶಗೊಂಡ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರ ಸಂಘದವರು ಮಾಜಿ ಶಾಸಕ ಡಿ.ಸಿ.ತಮ್ಮಣ್ಣನವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರಿನಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಆಟೋ ಚಾಲಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಂದಿನ ಹತ್ತು ದಿನಗಳೊಳಗೆ ಸಾಮಗ್ರಿಗಳನ್ನು ತಂದಿರಿಸಿ ನಿರ್ಮಾಣಕ್ಕೆ ಅನುಮತಿ ನೀಡದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ಮ.ನ.ಪ್ರಸನ್ನಕುಮಾರ್ ಮಾತನಾಡಿ, ಮದ್ದೂರು ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ಕಡಿದು ಹಾಕಿದ ಪರಿಣಾಮ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಆಟೋ ನಿಲ್ದಾಣಕ್ಕೆ ನೆರಳಿನ ವ್ಯವಸ್ಥೆ ಇರಲಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದಾಗ ಹೊಸ ತಂಗುದಾಣ ನಿರ್ಮಿಸಿಕೊಡುವುದಾಗಿ ಹೇಳಿ ಅನುದಾನವನ್ನೂ ಬಿಡುಗಡೆ ಮಾಡಿದರು ಎಂದು ತಿಳಿಸಿದರು.

ಕಳೆದ ಮಾರ್ಚ್ ತಿಂಗಳಲ್ಲೇ ಕುಮಾರಸ್ವಾಮಿ ಅವರು ಆಟೋ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. ನಂತರದಲ್ಲಿ ತಂಗುದಾಣ ನಿರ್ಮಾಣಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ತಂದಿಟ್ಟುಕೊಳ್ಳಲಾಗಿತ್ತು. ಆದರೆ, ನಗರಸಭೆ ಅಧಿಕಾರಿಗಳು ಪಾದಚಾರಿ ಮಾರ್ಗದಲ್ಲಿ ತಂಗುದಾಣ ನಿರ್ಮಿಸುತ್ತಿರುವ ಕಾರಣವನ್ನು ಮುಂದಿಟ್ಟುಕೊಂಡು ಸಾಮಗ್ರಿಗಳನ್ನೆಲ್ಲಾ ಎತ್ತಿಕೊಂಡು ಹೋಗಿದ್ದಾರೆ. ನಾವು ಪಾದಚಾರಿ ಮಾರ್ಗವನ್ನು ಬಿಟ್ಟು ಆಟೋ ತಂಗುದಾಣ ನಿರ್ಮಿಸುತ್ತಿದ್ದರೂ ಉದ್ದೇಶಪೂರ್ವಕವಾಗಿ ಸಾಮಗ್ರಿಗಳನ್ನು ತೆರವುಗೊಳಿಸಿಕೊಂಡು ಹೋಗಿದ್ದು, ಆ ಜಾಗದಲ್ಲಿ ಆಟೋ ನಿಲ್ದಾಣಕ್ಕೆ ಅನುಮತಿ ನೀಡುವುದಿಲ್ಲವೆಂದು ಹೇಳುವ ಮೂಲಕ ಬಡ ಆಟೋ ಚಾಲಕರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.


ಮಾಜಿ ಸಚಿವ ಡಿ.ಸಿ.ತಮ್ಮಣ್ಣನವರು ಮಾತನಾಡಿ, ಇದೇನು ಹೊಸ ಆಟೋ ನಿಲ್ದಾಣವೇನಲ್ಲ. ಕಳೆದ ೩೫ ವರ್ಷಗಳಿಂದಲೂ ಅದೇ ಸ್ಥಳದಲ್ಲಿದೆ. ತಂಗುದಾಣ ನಿರ್ಮಾಣಕ್ಕೆ ಆಟೋ ಚಾಲಕರು ಮಾಡಿದ ಮನವಿಗೆ ಸ್ಪಂದಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ₹೮೫ ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದರು. ಮಾರ್ಚ್ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿತ್ತು. ಕಾನೂನುಬದ್ಧವಾಗಿ ನಗರಸಭೆ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದ ಅನುಮತಿಯನ್ನು ಪಡೆದುಕೊಂಡು ತಂಗುದಾಣ ನಿರ್ಮಿಸಲಾಗುತ್ತಿತ್ತು ಎಂದು ಹೇಳಿದರು.

ಆಟೋ ತಂಗುದಾಣಕ್ಕೆ ಕೆಲಸ ಮಾಡಲು ಮುಂದಾದ ಸಮಯದಲ್ಲಿ ಸಾಮಗ್ರಿಗಳನ್ನೆಲ್ಲಾ ತುಂಬಿಕೊಂಡು ಹೋಗಿದ್ದಾರೆ. ಇದರರ್ಥ ಏನು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಡುವಂತೆ ಕೋರಿದ್ದೇವೆ. ಜಿಲ್ಲಾಧಿಕಾರಿಗಳು ಹತ್ತು ದಿನಗಳ ಸಮಯಾವಕಾಶ ಪಡೆದುಕೊಂಡಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಸಮಿತಿಯನ್ನು ರಚನೆ ಮಾಡಿ ಸಮಸ್ಯೆ ಪರಿಹರಿಸಿಕೊಡುವ ಭರವಸೆ ನೀಡಿದ್ದಾರೆ. ಹತ್ತು ದಿನದಲ್ಲಿ ನ್ಯಾಯ ಒದಗಿಸದಿದ್ದರೆ ಮುಂದಿನ ತೀರ್ಮಾನ ಮಾಡುವುದಾಗಿ ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಂಡ್ಯ ನಗರಸಭೆ ಮಾಜಿ ಅಧ್ಯಕ್ಷ ಎಂ.ವಿ.ಪ್ರಕಾಶ್, ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ, ಪಿ.ಆರ್ ಸುರೇಶ್, ನಗರಸಭೆ ಮಾಜಿ ಸದಸ್ಯರು ಹಾಗೂ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

----

ರಾಜಕೀಯ ಪ್ರೇರಿತವಿಲ್ಲ: ಜಿಲ್ಲಾಧಿಕಾರಿ

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಆಟೋ ಚಾಲಕರಿಗೆ ತೊಂದರೆ ಕೊಡಬೇಕೆಂಬ ಉದ್ದೇಶವೂ ಇಲ್ಲ. ರಾಜಕೀಯ ಪ್ರೇರಿತವೂ ಇಲ್ಲ. ಪಾದಚಾರಿಗಳ ರಸ್ತೆಗೆ ತೊಂದರೆಯಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ಬಂದ ದೂರನ್ನು ಆಧರಿಸಿ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಪಾದಚಾರಿಗಳ ರಸ್ತೆಯಲ್ಲಿ ತಂಗುದಾಣ ನಿರ್ಮಾಣವಾಗುವುದು ಬೇಡ. ಅಲ್ಲಿರುವ ಸಾಮಗ್ರಿಗಳು ಓಡಾಟಕ್ಕೆ ತೊಂದರೆಯಾಗುತ್ತಿದ್ದರಿಂದ ಅವುಗಳನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದನ್ವಯ ಪಾದಚಾರಿಗಳ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ. ಹಿಂದೆ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಿಲ್ಲ ಎಂದು ಕೇಳುವುದರಲ್ಲೂ ನ್ಯಾಯವಿದೆ. ಅದೇ ರೀತಿ ಇನ್ನು ಮುಂದೆ ನಡೆಯಬಹುದಾದ ಕಾಮಗಾರಿಗಳನ್ನು ತಡೆಯುವುದೂ ಅಷ್ಟೇ ಮುಖ್ಯವಾಗಿದೆ. ಹಿಂದೆ ಕಟ್ಟಿರುವವರನ್ನೂ ತೆರವುಗೊಳಿಸಬೇಕಿದೆ.

ನಗರಸಭೆ, ರಾಷ್ಟ್ರೀಯ ಅಭಿವೃದ್ಧಿ ಅಧಿಕಾರಿಗಳು, ಸ್ಥಳೀಯ ಸಂಸ್ಥೆಯವರು, ಸಾರಿಗೆ ಸಂಸ್ಥೆ, ಪೊಲೀಸರು, ಸಂಚಾರಿ ಪೊಲೀಸರನ್ನೊಳಗೊಂಡ ಸಮಿತಿಯನ್ನು ರಚಿಸಿ ಸಮಸ್ಯೆಗೆ ಶೀಘ್ರ ಪರಿಹಾರ ಸೂಚಿಸಲಾಗುವುದು. ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ತೆರವುಗೊಳಿಸಲಾಗಿದೆ. ಈಗಾಗಲೇ ವಿಳಂಬವಾಗಿದೆ. ಇನ್ನು ವಿಳಂಬವಾಗಲು ಅವಕಾಶವಾಗದಂತೆ ವರದಿ ತರಿಸಿಕೊಂಡು ಎಲ್ಲರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದರು.