ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಪ್ರಕರಣ ಮುಚ್ಚಿ ಹಾಕುವ ಹುನ್ನಾರ

KannadaprabhaNewsNetwork |  
Published : Sep 16, 2024, 01:51 AM IST
ಕಾರಟಗಿ ತಾಲೂಕಿನ ಉಳೇನೂರು ಸರಕಾರಿ ಶಾಲೆ | Kannada Prabha

ಸಾರಾಂಶ

ತಾಲೂಕಿನ ಉಳೇನೂರು ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಶಿಕ್ಷಣ ಇಲಾಖೆಯಿಂದಲೇ ವ್ಯವಸ್ಥಿತವಾಗಿ ಮುಚ್ಚಿಹಾಕಲು ಹುನ್ನಾರ ನಡೆಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿ ಇಂಥ ಘಟನೆ

ಕನ್ನಡಪ್ರಭ ವಾರ್ತೆ ಕಾರಟಗಿ

ತಾಲೂಕಿನ ಉಳೇನೂರು ಗ್ರಾಮದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಶಿಕ್ಷಣ ಇಲಾಖೆಯಿಂದಲೇ ವ್ಯವಸ್ಥಿತವಾಗಿ ಮುಚ್ಚಿಹಾಕಲು ಹುನ್ನಾರ ನಡೆಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಇನ್ನು ಜಿಲ್ಲಾ ಉಸ್ತುವಾರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಸ್ವಕ್ಷೇತ್ರದಲ್ಲಿಯೇ ಗ್ರಾಮೀಣ ಪ್ರದೇಶದಲ್ಲಿನ ಬಾಲಕಿಯೊಬ್ಬಳಿಗೆ ಇಂಥ ಘಟನೆ ನಡೆದರೂ ಅಧಿಕಾರಿಗಳು ಕಾರ್ಯಪ್ರವೃತ್ತರಾಗದೆ ಇರುವುದು ಶೆಂಕೆಗೆ ಕಾರಣವಾಗಿದೆ.

ಆದರೆ, ''''ಕನ್ನಡಪ್ರಭ'''' ಆಧರಿಸಿ ಇಲ್ಲಿನ ಪೊಲೀಸರು ಭಾನುವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಗ್ರಾಮಸ್ಥರು ನಡೆದ ಘಟನೆ ಮತ್ತು ಶಾಲೆಯ ಶಿಕ್ಷಕರ ಕುರಿತು ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜೀ ಸಂಧಾನದ ಮೂಲಕ ಘಟನೆಗೆ ತಿಲಾಂಜಲಿ ಹಾಡಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಪೊಲೀಸ್ ಠಾಣೆಗೆ ದೂರು ಬದಲಾಗಿ ಸ್ಪಷ್ಟನೆ ನೀಡಿದ್ದಾರೆ.

ಘಟನೆ ಸಂಬಂಧ ವಿದ್ಯಾರ್ಥಿನಿ ಹಾಗೂ ಅವರ ತಂದೆ, ತಾಯಿಯನ್ನು ಶಾಲೆಗೆ ಕರೆಸಿ ವಿಚಾರಿಸಿದಾಗ ಆ ರೀತಿಯ ಘಟನೆಗಳು ನಡೆದಿಲ್ಲ ಎಂದು ಲಿಖಿತವಾಗಿ ಮಾಹಿತಿ ನೀಡಿದ್ದಾರೆ. ಜತೆಗೆ ಆರೋಪಿತ ಶಿಕ್ಷಕ ರಾಜು ಆತ್ಮಕೂರಗೆ ನೋಟಿಸ್ ನೀಡಿದ್ದು, ಆ ರೀತಿ ಯಾವುದೇ ಘಟನೆ ನಡೆದಿಲ್ಲ ಎಂದು ಉತ್ತರಿಸಿದ್ದಾರೆ. ಹೀಗಾಗಿ ಘಟನೆ ದೂರು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

ಮೇಲಿನ ಉಲ್ಲೇಖಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನು ಠಾಣೆಗೆ ಸಲ್ಲಿಸಿಲ್ಲ. ಪರಿಸ್ಥಿತಿ ಇಷ್ಟೊಂದು ಗಂಭೀರತೆಯಿಂದ ಕೂಡಿದ್ದರೂ ಇಲ್ಲಿಯವರೆಗೂ ಗ್ರಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಡಿಡಿಪಿಐ ಭೇಟಿ ನೀಡಿಲ್ಲ. ಹೇಗಾದರೂ ಮಾಡಿ, ಘಟನೆ ಮುಚ್ಚಿಹಾಕುವ ನಿಟ್ಟಿನಲ್ಲಿಯೇ ತಯಾರಿ ನಡೆಸಲಾಗುತ್ತಿದೆ ಎಂದು ಬಲ್ಲ ಮೂಲಗಳು ಹೇಳಿವೆ.

ಕ್ರಮಕೈಗೊಳ್ಳಲಿ:

ವಿದ್ಯಾರ್ಥಿನಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ ಸಂಬಂಧ ಡಿಡಿಪಿಐಗೆ ಅನೇಕ ದೂರವಾಣಿ ಕರೆ ಹೋಗಿವೆ. ಈ ಹಿನ್ನೆಲೆ ಬಿಇಒಗೆ ಘಟನೆ ಸಂಬಂಧ ಮಾಹಿತಿ ನೀಡಲು ಸೂಚಿಸಿದ್ದಾರೆ. ಶಿಕ್ಷಕ ತಪ್ಪೇ ಮಾಡಿಲ್ಲ ಎಂದಾದರೆ ಹಾಗೂ ವಿದ್ಯಾರ್ಥಿನಿ ಯಾವುದೇ ಲೈಂಗಿಕ ಕಿರುಕುಳ ಅನುಭವಿಸಿಲ್ಲ ಎಂದಾದರೆ, ವಿದ್ಯಾರ್ಥಿನಿ ಜೀವನದ ಜತೆಗೆ ಸುಳ್ಳು ಸುದ್ದಿ ಹಬ್ಬಿಸಿ, ಚೆಲ್ಲಟವಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಗಳಾಗಬೇಕು. ಸುಳ್ಳು ಸುದ್ದಿ ಹಬ್ಬಿಸಿರುವ ವ್ಯಕ್ತಿಗಳ ವಿರುದ್ಧ ಠಾಣೆಯಲ್ಲಿ ಕೇಸ್ ದಾಖಲಾಗಬೇಕು. ಶಿಕ್ಷಣ ಇಲಾಖೆ ಮಾಹಿತಿ ನೀಡಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸದೇ ಹಾಗೇ ಬಿಟ್ಟರೆ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ಅನುಭವಿಸಿರುವುದಕ್ಕೆ ಪರೋಕ್ಷವಾಗಿ ಒಪ್ಪಿಕೊಂಡಂತೆ ಆಗುತ್ತದೆ. ಈ ವಿಚಾರವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಇನ್ನಾದರೂ ಪರಿಗಣಿಸಬೇಕಿದೆ ಎನ್ನುತ್ತಾರೆ ಕೆಲವು ಶಿಕ್ಷಕರು.

ದೂರು, ಪ್ರಕರಣ ದಾಖಲಾಗದೇ ಠಾಣೆಗೆ ಸ್ಪಷ್ಟನೆ ನೀಡುವ ಅವಶ್ಯಕತೆ ಮುಖ್ಯಶಿಕ್ಷಕರಿಗೆ ಏನಿತ್ತು ಎನ್ನುವ ಪ್ರಶ್ನೆ ಎದ್ದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ