ಬಳ್ಳಾರಿ: ಪರೀಕ್ಷಾ ಶುಲ್ಕ ಹೆಚ್ಚಳ ಸೇರಿದಂತೆ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಕಾರ್ಯಕರ್ತರು ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ಏಕಾಏಕಿ ₹1200 ಹೆಚ್ಚಳ ಮಾಡಲಾಗಿದೆ. ಬಳ್ಳಾರಿ- ವಿಜಯನಗರ ಜಿಲ್ಲೆಗಳು ಬರಗಾಲ ಪೀಡಿತ ಪ್ರದೇಶಗಳು ಎಂದು ಸರ್ಕಾರವೇ ಘೋಷಣೆ ಮಾಡಿದೆ. ಪೋಷಕರ ಕೈಗೆ ದುಡಿಮೆ ಇಲ್ಲದೆ ವಲಸೆ ಹೋಗುವ ಸ್ಥಿತಿಯಿದೆ. ಇದರಿಂದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಷ್ಟಾಗಿಯೂ ವಿಶ್ವವಿದ್ಯಾಲಯ ಅವೈಜ್ಞಾನಿಕವಾಗಿ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿರುವುದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.ಅಂಕಪಟ್ಟಿ ಶುಲ್ಕವನ್ನು ಸಹ ಏರಿಕೆ ಮಾಡಲಾಗಿದೆ. ಪದವಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ನೀಡಿಲ್ಲ. ವಿವಿಯ ಆಡಳಿತಾತ್ಮಕ ಲೋಪದಿಂದಾಗಿ ವಿದ್ಯಾರ್ಥಿವೇತನ ಲಭಿಸದಂತಾಗಿದೆ. ಹೀಗೆ ಹತ್ತಾರು ಸಮಸ್ಯೆಗಳ ನಡುವೆ ಪರೀಕ್ಷಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಶುಲ್ಕ ಏರಿಕೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಅಂಕಪಟ್ಟಿಗಳನ್ನು ಕೂಡಲೇ ವಿತರಿಸಬೇಕು. ಅಂಕಪಟ್ಟಿಯ ಮುದ್ರಣಕ್ಕೆ ಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು. ಅಂಕಪಟ್ಟಿಯ ಶುಲ್ಕವನ್ನು ಕಡಿತಗೊಳಿಸಬೇಕು. ವಿನಾಕಾರಣ ಫಲಿತಾಂಶ ವಿಳಂಬ ಮಾಡಬಾರದು. ತಡೆಹಿಡಿದಿರುವ ಫಲಿತಾಂಶಗಳನ್ನು ಘೋಷಿಸಬೇಕು. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಹಾಗೂ ಹೊಸಪೇಟೆಯಲ್ಲಿ ಸ್ನಾತಕೋತ್ತರ ಕೇಂದ್ರ ತೆರೆಯಬೇಕು. ವಿದ್ಯಾರ್ಥಿ ಸಂಘಟನೆಗಳ ಮುಖಂಡರ ಸಭೆ ಕರೆದು ಶುಲ್ಕ ನಿಗದಿಗೊಳಿಸಬೇಕು ಎಂದು ಎಸ್‌ಎಫ್‌ಐ ಮುಖಂಡರು ಆಗ್ರಹಿಸಿದರು.ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್, ಜಿಲ್ಲಾಧ್ಯಕ್ಷ ದೊಡ್ಡ ಬಸವರಾಜ್, ರಾಜ್ಯ ಸಮಿತಿ ಸದಸ್ಯ ಶಿವಾರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಜಯಸೂರ್ಯ, ತಿಪ್ಪಮ್ಮ, ಲೋಕೇಶ್, ವಿಕಾಶ್ ತೇಜ ಸೇರಿದಂತೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೇಡಿಕೆಯ ಮನವಿಪತ್ರವನ್ನು ಕುಲಪತಿಗಳಿಗೆ ಸಲ್ಲಿಸಲಾಯಿತು.