ಹಾಸ್ಟೆಲ್‌ಗಳಲ್ಲಿ ಊಟದ ಮೆನು ಚಾರ್ಟ್ ಬದಲಾವಣೆಗೆ ಎಸ್‌ಎಫ್‌ಐ ವಿರೋಧ

KannadaprabhaNewsNetwork |  
Published : Apr 12, 2025, 12:46 AM IST
ಎಸ್‌ಎಫ್‌ಐ ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ವಸತಿನಿಲಯದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿಲ್ಲ, ಕೊಳೆತ ತರಕಾರಿಗಳನ್ನು ಬಳಸುತ್ತಾರೆ. ಅನುದಾನ ನೆಪದಿಂದ ಊಟಕ್ಕೆ ಕಡಿತ ಮಾಡಿದ್ದಾರೆ ಎಂದು ವಿದ್ಯಾರ್ಥಿ ಮುಖಂಡರು ಆರೋಪಿಸಿದರು.

ಹಾವೇರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕೆಲವು ವಸತಿನಿಲಯಗಳಲ್ಲಿ ಊಟದ ಮೆನು ಚಾರ್ಟ್ ಬದಲಾವಣೆ ಮಾಡಿರುವುದನ್ನು ಖಂಡಿಸಿ, ಭ್ರಷ್ಟಾಚಾರದ ತನಿಖೆಗಾಗಿ ಒತ್ತಾಯಿಸಿ, ಉತ್ತಮ ಗುಣಮಟ್ಟದ ಆಹಾರ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಪಂ ಸಿಇಒ ರುಚಿ ಬಿಂದಲ್ ಅವರಿಗೆ ಮನವಿ ಸಲ್ಲಿಸಲಾಯಿತು. ವಸತಿನಿಲಯದಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿಲ್ಲ, ಕೊಳೆತ ತರಕಾರಿಗಳನ್ನು ಬಳಸುತ್ತಾರೆ. ಅನುದಾನ ನೆಪದಿಂದ ಊಟಕ್ಕೆ ಕಡಿತ ಮಾಡಿದ್ದಾರೆ. ಪುಸ್ತಕಗಳು, ಆಟದ ಸಾಮಗ್ರಿಗಳನ್ನು ಮೂರು ವರ್ಷ ಕಳೆದರೂ ನೀಡಿಲ್ಲ. ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಗ್ರಂಥಾಲಯವನ್ನು ಬಳಕೆಗೆ ನೀಡುತ್ತಿಲ್ಲ. ಇಲಾಖೆಯ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳ ವಸತಿನಿಲಯಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಹಾಗೂ ಮೂಲ ಸೌಕರ್ಯಗಳಿಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಹೋರಾಟ ಮಾಡಲಾಗುತ್ತದೆ. ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿಗಳ ಮುಂದಾಗುತ್ತಿಲ್ಲ. ವಸತಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳಿಲ್ಲದೆ ನರಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ನೀಡಿದ ವಸತಿನಿಲಯದ ಊಟದ ಮೇನು ಚಾರ್ಟ್ ಪ್ರಕಾರ ಟೆಂಡರ್ ದರಕ್ಕೂ ಮಾರುಕಟ್ಟೆಯಲ್ಲಿರುವ ಪ್ರಸ್ತುತ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಹಾವೇರಿ ಬಿಸಿಎಂ ಇಲಾಖೆಯ ಕೆಲವು ವಸತಿ ನಿಲಯಗಳು ತಮ್ಮದೇ ಆದ ಮೆನು ಚಾರ್ಟ್ ತಯಾರಿಸಿಕೊಂಡು ಆಹಾರಕ್ಕೆ ಕತ್ತರಿ ಹಾಕಿದ್ದು, ವಿದ್ಯಾರ್ಥಿ ವಿರೋಧಿಯಾಗಿದೆ ಎಂದರು.ಆಯುಕ್ತರ ಆದೇಶದ ಪ್ರಕಾರ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ದೊರಕುವಂತೆ ಆಯಾ ಸಮಯಕ್ಕೆ ತಕ್ಕಂತೆ ವಿತರಣೆ ಮಾಡಬೇಕು. ಆಯಾ ಋತುಮಾನಗಳಲ್ಲಿ ಲಭ್ಯವಾಗುವ ಕಾಳುಗಳು, ತರಕಾರಿಗಳು ಮತ್ತು ಹಣ್ಣುಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ಆದರೆ ಜಿಲ್ಲೆಯಲ್ಲಿ ಆಯುಕ್ತರ ನಿಯಮಗಳನ್ನು ಉಲ್ಲಂಘನೆ ಮಾಡಿ ಪ್ರತ್ಯೇಕವಾಗಿ ತಮ್ಮ ಇಷ್ಟದಂತೆ ಊಟದ ಮೆನು ಚಾರ್ಟ್ ಬದಲಾವಣೆ ಮಾಡಿ ಕಿರಾಣಿ ಸೇರಿದಂತೆ ಅನೇಕ ಖರೀದಿ ವಸ್ತುವಿನಲ್ಲಿ ದುಡ್ಡು ಉಳಿಸಿ ಲಕ್ಷಾಂತರ ರು., ವಸತಿನಿಲಯ ಮೇಲ್ವಿಚಾರಕರು ಹಗಲುದರೋಡೆ ನಡೆಸಿದ್ದಾರೆ ಎಂದು ದೂರಿದರು. ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆಯನ್ನು ಕನಿಷ್ಠ 3500 ರು.ಗಳಿಗೆ ಹೆಚ್ಚಿಸಬೇಕು. ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತಿದಿನದ ಮೂರೊತ್ತಿನ ಊಟಕ್ಕೆ ಕೇವಲ 60- 70 ರು.ಗಳಂತೆ ತಿಂಗಳಿಗೆ 1850 ರು.ಗಳನ್ನು ಮಾತ್ರ ನೀಡಲಾಗುತ್ತಿದೆ. ಇದರಿಂದ ರಾಜ್ಯದ ವಿದ್ಯಾರ್ಥಿಗಳು ಪೌಷ್ಟಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುನೀಲ್ ಎಲ್., ಸಿದ್ದುಕುಮಾರ್ ಕೆ.ಆರ್., ಅರುಣ್ ಲಮಾಣಿ, ಸುಲೇಮಾನ್ ಎಂ., ಪ್ರಶಾಂತ್ ಎಚ್. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ