ಹುಬ್ಬಳ್ಳಿ:
ನೇಹಾ ಹಿರೇಮಠ ಕೊಲೆ ಖಂಡಿಸಿ ಧಾರವಾಡ ಮತ್ತು ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಸೋಮವಾರ ಕರೆ ನೀಡಿದ್ದ ಬಂದ್ ಬೆಂಬಲಿಸಿ ನಗರದ ಶಾಹ ಬಜಾರ್ ವಾಣಿಜ್ಯ ಮಳಿಗೆ, ನೂರಾನಿ ಮಾರುಕಟ್ಟೆ ಸಂಪೂರ್ಣ ಸ್ಥಗಿತವಾಗಿದ್ದವು. ಅಂಜುಮನ್ ಸಂಸ್ಥೆಯ ಅಡಿಯಲ್ಲಿರುವ ವಾಣಿಜ್ಯ ಕಟ್ಟಡಗಳಲ್ಲಿ ಸೋಮವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 3ರ ವರೆಗೆ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿತು. ಇದರಿಂದ ಮಾರುಕಟ್ಟೆ ಭಣಗುಟ್ಟುತ್ತಿತ್ತು.ಅಂಜುಮನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಘಂಟಿಕೇರಿಯ ನೆಹರು ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಜಸ್ಟಿಸ್ ಫಾರ್ ನೇಹಾ ಹಿರೇಮಠ ಎಂಬ ಫಲಕ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ ಮಾತನಾಡಿ, ನೇಹಾ ಕೊಲೆ ಅತ್ಯಂತ ಖಂಡನೀಯ. ಅವಳ ಸಾವಿಗೆ ನ್ಯಾಯ ಸಿಗಬೇಕು ಎಂದು ನಾವು ಈಗಾಗಲೇ ಸರ್ಕಾರವನ್ನು ಒತ್ತಾಯಿಸಿದ್ದೇವೆ. ತ್ವರಿತ ನ್ಯಾಯಾಲಯ ಸ್ಥಾಪಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಹುಬ್ಬಳ್ಳಿ ಮತ್ತು ಧಾರವಾಡದ ಯಾವೊಬ್ಬ ಮುಸ್ಲಿಂ ವಕೀಲರು ಆರೋಪಿ ಫಯಾಜ್ ಪರ ವಕಾಲತ್ತು ವಹಿಸಬಾರದು ಎಂದು ಅಂಜುಮನ್ ಸಂಸ್ಥೆಯಿಂದ ಎಲ್ಲ ಮುಸ್ಲಿಂ ವಕೀಲರಿಗೆ ಮನವಿ ಮಾಡಿದ್ದೇವೆ. ಈ ಪ್ರಕರಣದ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದರೆ ಮತ್ತು ಪ್ರೋತ್ಸಾಹಿಸಿದ್ದರೆ ಅವರ ಮೇಲೂ ಸರ್ಕಾರ, ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಈ ಪ್ರಕರಣ ಇತ್ಯರ್ಥಗೊಳ್ಳುವ ವರೆಗೆ ನಿರಂಜನ ಹಿರೇಮಠ ಕುಟುಂಬದೊಂದಿಗೆ ಮುಸ್ಲಿಂ ಸಮಾಜವು ನಿಲ್ಲಲಿದೆ ಎಂದರು.
ಈ ವೇಳೆ ಅಲ್ತಾಫ್ ಹಳ್ಳೂರು, ಇಲಿಯಾಸ್ ಮನಿಯಾರ್, ಸಿರಾಜಅಹ್ಮದ್ ಕುಡಚಿವಾಲೆ, ಮಹ್ಮದ್ ಕೊಳೂರು, ನವೀದ್ ಮುಲ್ಲಾ ಹಾಗೂ ಅಂಜುಮನ್ ಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.