ಕನ್ನಡಪ್ರಭ ವಾರ್ತೆ ಕಲಬುರಗಿ/ಬೆಂಗಳೂರು
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕುರಿತು ರಾಜ್ಯಸಭೆಯಲ್ಲಿ ಆಡಿರುವ ಮಾತುಗಳನ್ನು ಖಂಡಿಸಿ ಕಾಂಗ್ರೆಸ್ ಹಾಗೂ ವಿವಿಧ ದಲಿತ, ಪ್ರಗತಿಪರ ಸಂಘಟನೆಗಳು ಮಂಗಳವಾರ ನೀಡಿದ್ದ ಬಂದ್ ಕರೆಗೆ ಕಲಬುರಗಿ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಇದೇ ವೇಳೆ, ಗದಗ-ಬೆಟಗೇರಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೆ, ಶಾ ಹೇಳಿಕೆ ಖಂಡಿಸಿ, ಬೀದರ್, ಹುಮನಾಬಾದ್, ಚಿಕ್ಕಬಳ್ಳಾಪುರ, ಮಡಿಕೇರಿ, ಧಾರವಾಡ, ಗಂಗಾವತಿ, ಬಳ್ಳಾರಿ, ಮಂಡ್ಯ, ಚಾಮರಾಜನಗರ ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.ಕಲಬುರಗಿಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಹೋರಾಟಗಾರರು ನಗರದ ವಿವಿಧ ವೃತ್ತ, ರಸ್ತೆಗಳಲ್ಲಿ ಜಮಾವಣೆಗೊಂಡು ಜೈಭೀಮ್ ಘೋಷಣೆ ಕೂಗುತ್ತಾ, ಟೈರ್‌ಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಶಾ ಅವರ ಪ್ರತಿಕೃತಿಗೆ ಪಾದರಕ್ಷೆ ಏಟು ನೀಡಿ, ಅವರ ಭಾವಚಿತ್ರ ಸುಟ್ಟು, ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದರು. ಬಳಿಕ, ನಗರೇಶ್ವರ ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಅಮೀತ್ ಶಾ ಅಣಕು ಶವಯಾತ್ರೆ ನಡೆಸಲಾಯಿತು.
ಬಂದ್ ವೇಳೆ ಚಿಂಚೋಳಿ ಕ್ರಾಸ್‌ನಲ್ಲಿ ಹೊರ ರಾಜ್ಯದ ಲಾರಿಯೊಂದನ್ನು ತಡೆದು ಯುವಕರ ಗುಂಪು ಕಲ್ಲು ತೂರಿದ್ದರಿಂದ ಲಾರಿಯ ಗಾಜುಗಳು ಪುಡಿ, ಪುಡಿಯಾಗಿವೆ. ಷಹಾ ಬಜಾರ್ ರಸ್ತೆಯಲ್ಲಿ ಕೋಲು ಹಿಡಿದ ಯುವಕರು ಬೈಕ್ ಸವಾರನೊಬ್ಬನ ಮೇಲೆ ಹಲ್ಲೆ ನಡೆಸಿ, ಬೈಕ್ ಜಖಂಗೊಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ನಗರಕ್ಕೆ ದೂರದ ಊರುಗಳಿಂದ ಬರಬೇಕಿದ್ದ ಬಸ್‌ಗಳನ್ನು ನಗರ ಹೊರವಲಯದಲ್ಲಿಯೇ ನಿಲ್ಲಿಸಲಾಯಿತು. ಪ್ರಯಾಣಿಕರು ನಡೆದುಕೊಂಡೇ ಮನೆ ಸೇರುವಂತಾಯಿತು. ಆಸ್ಪತ್ರೆ, ಮತ್ತಿತರ ಅಗತ್ಯ ಕೆಲಸಗಳಿಗೆ ತೆರಳಲು ಜನ ಪರದಾಡಿದರು. ಬಂದ್ ಹಿನ್ನೆಲೆಯಲ್ಲಿ ಮದುವೆಯೊಂದನ್ನು ಮುಂದಕ್ಕೆ ಹಾಕಿದ ಪ್ರಸಂಗ ಕೂಡ ನಡೆದಿದೆ.ಬಂದ್ ಹಿನ್ನೆಲೆಯಲ್ಲಿ ನಗರದ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದೇ ವೇಳೆ, ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕರೆ ನೀಡಲಾಗಿದ್ದ ಗದಗ-ಬೆಟಗೇರಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಬಂದ್ ವೇಳೆ ಡಿಪೋಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.ಸಂಘಟನೆಗಳ ಧರಣಿ:ಇದೇ ವೇಳೆ, ಬೀದರ್ ನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ, ಹುಮನಾಬಾದ್‌ನಲ್ಲಿ ಜನಪರ ಸಂಘಟನೆಗಳ ಒಕ್ಕೂಟದಿಂದ, ಚಿಕ್ಕಬಳ್ಳಾಪುರದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ, ಮಡಿಕೇರಿಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳಿಂದ, ಧಾರವಾಡದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ, ಗಂಗಾವತಿಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹೋರಾಟ ಸಮಿತಿಯಿಂದ, ಬಳ್ಳಾರಿಯಲ್ಲಿ ರಾಷ್ಟ್ರ ಸಮಸಮಾಜ ನಿರ್ಮಾಣ ಸಂಘದಿಂದ, ಮಂಡ್ಯ, ಮಳವಳ್ಳಿ, ಚಾಮರಾಜನಗರ, ಹನೂರುಗಳಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆಗಳು ನಡೆದವು.