ಶಕ್ತಿ ದೇವತೆ ದುಗ್ಗಮ್ಮ ಜಾತ್ರೆಗೆ ನಗರ ಸಜ್ಜು

KannadaprabhaNewsNetwork |  
Published : Mar 19, 2024, 12:53 AM IST
ಕ್ಯಾಪ್ಷನಃ18ಕೆಡಿವಿಜಿ31, 32ಃದಾವಣಗೆರೆಯಲ್ಲಿ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಸಿದ್ಧಗೊಂಡಿರುವ ಮಹಾ ಮಂಟಪ........ಕ್ಯಾಪ್ಷನಃ18ಕೆಡಿವಿಜಿ33ಃದಾವಣಗೆರೆಯ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಉತ್ಸವ ಮೂರ್ತಿ......ಕ್ಯಾಪ್ಷನಃ18ಕೆಡಿವಿಜಿ34, 35ಃದಾವಣಗೆರೆಯಲ್ಲಿ ನಡೆಯಲಿರುವ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ದೇವಸ್ಥಾನದ ಆವರಣದಲ್ಲಿ ನಿಷೇಧಿತ ಆಚರಣೆ ಮಾಡದಂತೆ ಫಲಕಗಳನ್ನು ಹಾಕಿರುವುದು. ....... | Kannada Prabha

ಸಾರಾಂಶ

ಜಾತ್ರೆ ಪ್ರಯುಕ್ತ ಭಾನುವಾರ ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ, ರಾತ್ರಿ ಭಕ್ತರ ಸಮ್ಮುಖದಲ್ಲಿ ಸಾರು ಹಾಕುವ ಕಾರ್ಯ ನೆರವೇರಿತು. ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ಸಾವಿರಾರು ಭಕ್ತರು ಬಂದು ಅಮ್ಮನವರ ದರ್ಶನ ಪಡೆದರು. ತಿಂಗಳ ಹಿಂದೆಯೇ ಜಾತ್ರೆ ಹಂದರಗಂಬ ಪೂಜೆ ನೆರವೇರಿದ್ದು, ಪ್ರತಿವರ್ಷ ವಿಭಿನ್ನ ರೀತಿ ಮಂಟಪ ನಿರ್ಮಾಣವಾಗುತ್ತಿದ್ದು, ಈ ಬಾರಿ ಅರಮನೆಯಂತೆ ಮಂಟಪ ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಹಾಗೂ ವಿನೋಬ ನಗರದ ಶ್ರೀ ಚೌಡೇಶ್ವರಿ ಜಾತ್ರೆಯು ಮಾ.19ರಿಂದ ಆರಂಭವಾಗಲಿದ್ದು, ಇಡೀ ಊರಿಗೆ ಊರು ಜಾತ್ರೆಗೆ ಸಿದ್ಧವಾಗಿದೆ.

ನಗರಾದ್ಯಂತ ದುಗ್ಗಮ್ಮನ ಜಾತ್ರೆಗೆ ಮನೆ ಮನೆಗಳು, ಕೇರಿಗಳು, ದೇವಸ್ಥಾನಗಳು ಸುಣ್ಣ ಬಣ್ಣಗಳ ಅಲಂಕಾರದೊಂದಿಗೆ ಕಂಗೊಳಿಸುತ್ತಿದ್ದು, ಕುಡಿಯುವ ನೀರು, ಸ್ವಚ್ಛತೆ, ವಾಹನ ನಿಲುಗಡೆ, ಬಂದೋಬಸ್ತ್ ಸೇರಿ ಸಂಬಂಧಿಸಿದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಅಗತ್ಯ ಸಿದ್ಧತೆ ಮಾಡಿಕೊಂಡು, ಜಾತ್ರೆಗೆ ಎದುರು ನೋಡುತ್ತಿವೆ.

ಜಾತ್ರೆ ಪ್ರಯುಕ್ತ ಮಾ.17ರ ಭಾನುವಾರ ಬೆಳಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ, ರಾತ್ರಿ ಭಕ್ತರ ಸಮ್ಮುಖದಲ್ಲಿ ಸಾರು ಹಾಕುವ ಕಾರ್ಯ ನೆರವೇರಿತು. ಸೋಮವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ಸಾವಿರಾರು ಭಕ್ತರು ಬಂದು ಅಮ್ಮನವರ ದರ್ಶನ ಪಡೆದರು. ತಿಂಗಳ ಹಿಂದೆಯೇ ಜಾತ್ರೆ ಹಂದರಗಂಬ ಪೂಜೆ ನೆರವೇರಿದ್ದು, ಪ್ರತಿವರ್ಷ ವಿಭಿನ್ನ ರೀತಿ ಮಂಟಪ ನಿರ್ಮಾಣವಾಗುತ್ತಿದ್ದು, ಈ ಬಾರಿ ಅರಮನೆಯಂತೆ ಮಂಟಪ ನಿರ್ಮಿಸಲಾಗಿದೆ. ಇಡೀ ಊರಿನಲ್ಲಿ ಜಾತ್ರೆಯ ಸಂಭ್ರಮ ಕಂಡು ಬರುತ್ತಿದೆ. ವಿನೋಬ ನಗರ ಚೌಡೇಶ್ವರಿ ದೇವಿ ಜಾತ್ರೆಯೂ ಈ ವೇಳೆ ಇರುವುದು ಹಬ್ಬಕ್ಕೆ ಮತ್ತಷ್ಟು ಮೆರುಗು ತಂದಿದೆ.

ಹರಕೆ ಕುರಿಗಳ ವ್ಯಾಪಾರ ಜೋರು:

ಮನೆಗಳು, ಅಂಗಡಿಗಳ ಮುಂದೆ ದೇವಿಯ ಹರಕೆಗಾಗಿ ತಂದ ಕುರಿಗಳು ಕಂಡು ಬರುತ್ತಿವೆ. ಹಬ್ಬದ ಕುರಿಯ ಆರೈಕೆಯಲ್ಲಿ ಮಕ್ಕಳಿಂದ ವೃದ್ಧರವರೆಗೆ ತೊಡಗಿದ್ದಾರೆ. ನಿತ್ಯವೂ ಕುರಿಗೆ ಹಸಿ ಹುಲ್ಲು, ಸುತ್ತಾಡಿಸುವುದು ಸಾಮಾನ್ಯವಾಗಿದೆ. ಕುರಿಯ ಹಲ್ಲುಗಳು, ಅದರ ತೂಕ, ಕಟ್ಟುಮಸ್ತಾದ ಕುರಿ ಹೀಗೆ ಅದರ ದರ ಇದೆ. ಕನಿಷ್ಟ 18 ಸಾವಿರ ರು.ನಿಂದ ಲಕ್ಷಾಂತರ ರು.ವರೆಗೆ ಕುರಿ ಖದೀರಿಸಿ, ತಂದು ಸಾಕುತ್ತಿರುವವ ಸಂಖ್ಯೆಯೂ ಕಡಿಮೆಯೇನಿಲ್ಲ. ವೀರ ಮದಕರಿ ನಾಯಕ ವೃತ್ತ, ಕೆ.ಆರ್. ರಸ್ತೆ, ಹಾಸಬಾವಿ ಸರ್ಕಲ್, ಕಾಯಿಪೇಟೆ, ಕೊಂಡಜ್ಜಿ ರಸ್ತೆ ಸೇರಿ ಅಲ್ಲಲ್ಲಿ ಹಸಿ ಹುಲ್ಲು, ಮೇವಿನ ವ್ಯಾಪಾರ ಜೋರಾಗಿದೆ.

ಕೆಲವರು ಊರಿನಲ್ಲಿ ಸಂಬಂಧಿಕರ ಬಳಿ ಕುರಿ ಖರೀದಿಸಿ ಸಾಕಲು ಬಿಟ್ಟಿದ್ದರೆ, ಇನ್ನೂ ಕೆಲವರು ಸಂತೆಗಳಲ್ಲಿ ಕುರಿ ಖರೀದಿಸಿ ತಂದು ಬೆಳೆಸುತ್ತಿದ್ದಾರೆ. ಮಳೆ ಅಭಾವದ ಜೊತೆ ಬೇಸಿಗೆ ಕೂಡ ಆಗಿರುವುದರಿಂದ ದೇವಿ ಜಾತ್ರೆಯಲ್ಲಿ ಮೇವಿಗೆ ಭರ್ಜರಿ ಬೇಡಿಕೆ ಇದೆ. ರಾಗಿ, ಸಜ್ಜೆ, ತೊಗರಿ ಸೇರಿ ಹಸಿ ಹುಲ್ಲು ಮಾರಾಟ ಕಾಣ ಸಿಗುತ್ತಿದೆ.

ಲೋಕಿಕೆರೆ, ಶಿರಮಗೊಂಡನಹಳ್ಳಿ, ಶಾಮನೂರು, ನಾಗನೂರು, ಎಲೆಬೇತೂರು, ಆವರಗೆರೆ, ಮಾಗಾನಹಳ್ಳಿ, ಆವರಗೊಳ್ಳ ಸುತ್ತಲಿನ ಗ್ರಾಮಸ್ಥರು ತಂತಮ್ಮ ಊರುಗಳ ಸಮೀಪದ ತೋಟ, ಗದ್ದೆ, ಹೊಲಗಳಲ್ಲಿ ಹುಲ್ಲು ಕೊಯ್ದು ಪ್ರತಿ ಕಟ್ಟಿಗೆ 20 ರು.ಗಳಂತೆ ಮಾರಾಟವಾಗುತ್ತಿದೆ. ಬರಗಾಲವಾದ್ದರಿಂದ ಕೃಷಿ ಕೆಲಸ ಇಲ್ಲವಾಗಿದ್ದು, ನಗರಕ್ಕೆ ಮೇವು ತಂದು ಮಾರಿ ಜೀವನ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಶಿರಮಗೊಂಡನಹಳ್ಳಿಯ ಸಾಕಮ್ಮ ಹೇಳಿದರು.

ಮೇವಿನ ಜೊತೆ ನಾನಾ ಕಡೆಗಳಲ್ಲಿ ಕುರಿಗಳ ತಾತ್ಕಾಲಿಕ ಸಂತೆ ಜಮಾಯಿಸಿದೆ. ಕುರಿಗಳನ್ನು ಸಾಕಿರುವ ಸುತ್ತಮುತ್ತಲಿನ ಜನರು ಜಾತ್ರೆಗೆಂದು ಕೆಲ ಸ್ಥಳಗಳಲ್ಲಿ ಠಿಕಾಣಿ ಹೂಡಿದ್ದಾರೆ. ಹಲ್ಲು ಮೂಡದ ಕುರಿಗಳಿಂದ ಹಿಡಿದು 2 ರಿಂದ 8 ಹಲ್ಲಿನವರೆಗೆ ಕುರಿ ಮಾರಾಟಕ್ಕೆ ತರಲ್ಪಟ್ಟಿವೆ. ಕೆಲವರು ಹರಪನಹಳ್ಳಿ, ದುಗ್ಗಾವತ್ತಿ, ಹಾವೇರಿ, ಹರಿಹರ, ರಾಣೆಬೆನ್ನೂರು, ಹಗರಿಬೊಮ್ಮನಹಳ್ಳಿ ಹೀಗೆ ನಾನಾ ಕಡೆಯ ಸಂತೆಗಳಲ್ಲಿ ಖರೀದಿಸಿ ತಂದು ಕುರಿಗಳ ನೋಡಿಕೊಳ್ಳುತ್ತಿದ್ದಾರೆ.

ಭಕ್ತರಿಗಾಗಿ ನೀರು, ಮಜ್ಜಿಗೆ:

ಕಳೆದ ಕೆಲ ದಿನಗಳಿಂದಲೇ ಮನೆ ಮಂದಿಯೆಲ್ಲಾ ರೊಟ್ಟಿ ತಟ್ಟಿ, ಒಣಗಿಸಿ ಜೋಡಿಸಿಟ್ಟುಕೊಂಡಿದ್ದಾರೆ. ರೊಟ್ಟಿ, ಚಪಾತಿ, ಮುದ್ದೆಗಾಗಿ ಜನರು ಗಿರಣಿಗಳಲ್ಲಿ ಜೋಳ, ಗೋದಿ ಹಿಟ್ಟು ಮಾಡಿಸುತ್ತಿದ್ದಾರೆ. ಜಾತ್ರೆಯಲ್ಲಿ ಬರುವ ಜನರಿಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ, ಬಂದಂತ ಭಕ್ತರ ವಾಹನ ಪಾರ್ಕಿಂಗ್‌ಗೆ ವಿವಿಧ ಜಾಗಗಳ ಗುರುತಿಸಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ವಿವಿಧ ಸಂಘ ಸಂಸ್ಥೆಗಳಿಂದ ಕುಡಿಯುವ ನೀರು, ಪಾನಕ, ಮಜ್ಜಿಗೆ, ಮೊಸರನ್ನ ಸೇರಿ ಅನೇಕ ಸೇವೆ ಸಲ್ಲಿಸಲು ಸಿದ್ಧತೆ ನಡೆದಿದೆ.

ಇನ್ನು ಜಾತ್ರೆ ಎಂದರೆ ಹೆಣ್ಣು ಮಕ್ಕಳಿಗೆ, ಮಕ್ಕಳಿಗೆ ಹಬ್ಬವೋ ಹಬ್ಬ. ಜಾತ್ರೆಯಲ್ಲಿ ಅಮ್ಮನವರಿಗೆ ಹರಕೆ ಸಲ್ಲಿಸುವ ಉಡಿ ಸಾಮಾನುಗಳು, ಆಟಿಕೆ ಸಾಮಾನುಗಳು, ಅಡಿಗೆ ಮನೆ ಸಾಮಾನುಗಳು, ಅಲಂಕಾರಿಕ ಸಾಮಾನುಗಳು ಸಿದ್ದಗೊಂಡಿದ್ದವು. ಬೆಸ್ಕಾಂ ಇಲಾಖೆ ನೌಕರರು ಸೂಕ್ತ ವಿದ್ಯುತ್ ಪೂರೈಕೆ ವ್ಯವಸ್ಥೆ ಕಲ್ಪಿಸುವಲ್ಲಿ ಕರ್ತವ್ಯ ನಿರತರಾಗಿದ್ದರು. ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಸ್ವಚ್ಛತೆ ಕಡೆಗೆ ಗಮನ ಹರಿಸಿದ್ದರು.

...................ದೇವಿ ಜಾತ್ರೆಯಲ್ಲಿ ವಿವಿಧ ಕಾರ್ಯಕ್ರಮ

ಮಾ.19ರ ಮಂಗಳವಾರ ಬೆಳಿಗ್ಗೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಿಂದ ದಾಸೋಹದ ಮಹೋಪಕರಣ ಸಮಾರಂಭೋತ್ಸವ, ರಾತ್ರಿ ಅಮ್ಮನವರಿಗೆ ಭಕ್ತಿ ಸಮರ್ಪಣೆ ನಡೆಯಲಿದೆ. 9 ಗಂಟೆಗೆ ಸಾಂಸ್ಕೃತಿಕ ಮೇಳ, ಡೊಳ್ಳು ಕುಣಿತ, ಸಿಡಿಮದ್ದಿನ ಪ್ರದರ್ಶನ ಜೊತೆಗೆ ಬೆಳ್ಳಿಯ ರಥದಲ್ಲಿ ಅಮ್ಮನವರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಮಾ.20ರ ಬುಧವಾರ ಪದ್ಧತಿ ಪ್ರಕಾರ ಶ್ರೀ ದುರ್ಗಾಂಬಿಕಾ ದೇವಿ ಮಹಾಪೂಜೆ, ಹಾಗೂ ಬೆಳಿಗ್ಗೆ ಚರಗ ಚೆಲ್ಲುವ ಕಾರ್ಯಕ್ರಮ ನಡೆಯಲಿದೆ. ದೇವಿ ಜಾತ್ರೆ ಅಂಗವಾಗಿ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಮಾ.22 ರಿಂದ ಏಪ್ರಿಲ್ 5ರ ವರೆಗೆ ಪ್ರತಿದಿನ ರಾತ್ರಿ 8 ಗಂಟೆಯಿಂದ ನಾಡಿನ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಿಸಲಾಗಿದೆ.

..........

22, 23, 24ಕ್ಕೆ ಬಯಲು ಜಂಗಿ ಕುಸ್ತಿ

ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಮಾ.22, 23, 24ರ ಮೂರು ದಿನ ಕಾಲ ಇಲ್ಲಿನ ಬೀರಲಿಂಗೇಶ್ವರ ಮೈದಾನದ ಕುಸ್ತಿ ಅಖಾಡದಲ್ಲಿ ಪ್ರಸಿದ್ಧ ಪೈಲ್ವಾನರುಗಳಿಂದ ಮಲ್ಲಯುದ್ಧ ಬಯಲು ಜಂಗಿ ಕುಸ್ತಿ ನಡೆಯಲಿದೆ. ವಿಜೇತರಿಗೆ 2 ಕೆಜಿ ಬೆಳ್ಳಿಯ ಗಧೆ ನೀಡಿ ಗೌರವಿಸಲಾಗುವುದು. ಪರಸ್ಥಳದಿಂದ ಬಂದ ಭಕ್ತಾಧಿಗಳಿಗೆ, ಜನತೆಗೆ 3 ದಿನ ಇಲ್ಲಿನ ಪಿ.ಬಿ.ರಸ್ತೆಯ ಅಭಿನವ ರೇಣುಕ ಮಂದಿರದಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ದಿ.ಶಾಮನೂರು ಪಾರ್ವತಮ್ಮ ಸ್ಮರಣಾರ್ಥ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಕುಟುಂಬದವರು, ಧರ್ಮಪ್ರವರ್ತ ರಾಜನಹಳ್ಳಿ ಹನುಮಂತಪ್ಪನವರ ಸವಿ ನೆನಪಿಗಾಗಿ ಆರ್.ರಾಮಶೆಟ್ಟರು, ಆರ್.ಶ್ರೀನಿವಾಸ ಮೂರ್ತಿ ಮತ್ತು ಮಕ್ಕಳು ಕುಟುಂಬದವರು, ದಿ:ಮುದೇಗೌಡ್ರು ಪರಮೇಶ್ವರಪ್ಪ, ದಿ:ಲಲಿತಮ್ಮ ಜ್ಞಾಪಕಾರ್ಥವಾಗಿ ಮುದೇಗೌಡ್ರು ಸಿದ್ಧರಾಜು, ಮುರುಗೇಶ, ಮುದೇಗೌಡ್ರು ಗಿರೀಶ, ಜಗದೀಶ್ ದಾಸೋಹ ವ್ಯವಸ್ಥೆ ಕಲ್ಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!