ಕನ್ನಡಪ್ರಭ ವಾರ್ತೆ ದಾವಣಗೆರೆ
ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ನಿಧನರಾದ ಶಿವಶಂಕರಪ್ಪ ಅವರ ಪಾರ್ಥೀವ ಶರೀರವನ್ನು ಝೀರೋ ಟ್ರಾಫಿಕ್‌ನಲ್ಲಿ ಭಾನುವಾರ ಬೆಳಗಿನ ಜಾವ ದಾವಣಗೆರೆಗೆ ಕರೆತರಲಾಯಿತು. ಮೊದಲಿಗೆ ಹಿರಿಯ ಪುತ್ರ ಎಂ.ಜಿ.ಬಕ್ಕೇಶ ಅವರ ಮನೆಗೆ ಪಾರ್ಥೀವ ಶರೀರವನ್ನು ತರಲಾಯಿತು. ಅಲ್ಲಿಂದ 2ನೇ ಪುತ್ರ ಎಸ್.ಎಸ್.ಗಣೇಶ್ ಅವರ ನಿವಾಸಕ್ಕೆ ಕರೆ ತಂದು, ನಂತರ, ಕಿರಿಯ ಪುತ್ರ, ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನಿವಾಸ ಶಿವ ಪಾರ್ವತಿಗೆ ಪಾರ್ಥೀವ ಶರೀರವನ್ನು ತರಲಾಯಿತು. ಅಲ್ಲಿ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಬೆಳಗ್ಗೆ 11.30ರವರೆಗೆ ಶಿವ ಪಾರ್ವತಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ, ಅಂತಿಮ ನಮನ ಸಲ್ಲಿಸಿದರು. ನಂತರ, ಪಾರ್ಥಿವ ಶರೀರವನ್ನು ಹೈಸ್ಕೂಲ್ ಮೈದಾನದಲ್ಲಿರಿಸಿ, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಬಳಿಕ, ಮಧ್ಯಾಹ್ನ 3ಕ್ಕೆ ಮೆರವಣಿಗೆ ಮೂಲಕ ಕಲ್ಲೇಶ್ವರ ಮಿಲ್ ಆವರಣಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಮಾರ್ಗದುದ್ದಕ್ಕೂ ಅಭಿಮಾನಿಗಳು ಅವರ ಪಾರ್ಥೀವ ಶರೀರಕ್ಕೆ ಹೂವು, ಹಾರ ಹಾಕಿ, ನಮಿಸಿ, ಜೈಕಾರ ಕೂಗಿದರು. ಶಿವಶಂಕರಪ್ಪ ಅಮರ್ ರಹೆ ಎಂಬ ಜಯಘೋಷಗಳು ಮೊಳಗಿದವು.ಸಂಜೆ 4.30ರ ವೇಳೆಗೆ ಕಲ್ಲೇಶ್ವರ ಮಿಲ್ ಆವರಣದಲ್ಲಿ ಕ್ರಿಯಾಸಮಾಧಿಯ ಅಂತಿಮ ವಿಧಿ-ವಿಧಾನಗಳು ಆರಂಭವಾದವು. ಈ ವೇಳೆ, ಮೂರು ಸುತ್ತು ಕುಶಾಲತೋಪು ಸಿಡಿಸಿ, ರಾಷ್ಟ್ರಗೀತೆ ನುಡಿಸಿ, ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ, ಪತ್ನಿ ದಿವಂಗತ ಪಾರ್ವತಮ್ಮ ಶಿವಶಂಕರಪ್ಪ ಅವರ ಸಮಾಧಿ ಪಕ್ಕದಲ್ಲೇ ಪಾರ್ಥೀವ ಶರೀರವಿರಿಸಿ, ಪಂಚಪೀಠಾಧೀಶ್ವರ ಪಾದೋದಕ ಮೂಲಕ ಪೂಜೆ ನಡೆಸಿ, ಪಾರ್ಥಿವ ಶರೀರಕ್ಕೆ ಅಭಿಷೇಕ ಮಾಡಿ, ಮಣ್ಣು ಬಳಸದೇ ವಿಭೂತಿ ಬಳಸಿ ಕ್ರಿಯಾಸಮಾಧಿ ಮಾಡಿ, ವೀರಶೈವ ಸಂಪ್ರದಾಯ, ಪದ್ಧತಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ವೇಳೆ, ವಿವಿಧ ಮಠಾಧೀಶರು, ರಾಜಕೀಯ ನಾಯಕರು, ಬೆಂಬಲಿಗರು, ಶಾಮನೂರು ನೇತೃತ್ವದ ಸಂಸ್ಥೆಯ ಅಧಿಕಾರಿ, ನೌಕರರು, ಮಿಲ್ ಕೈಗಾರಿಕೆಗಳ ಸಿಬ್ಬಂದಿ ಹಾಜರಿದ್ದರು.26ಕ್ಕೆ ಕೈಲಾಸ ಶಿವ ಗಣರಾಧನೆ:
ದಾವಣಗೆರೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಶಾಮನೂರು ಅವರು ಕಾರಣ. ಕೋವಿಡ್ ಸಂದರ್ಭದಲ್ಲಿ ಆರು ಕೋಟಿ ರು.ಗೂ ಹೆಚ್ಚು ವೆಚ್ಚ ಮಾಡಿ ಆಕ್ಸಿಜನ್ ಸರಬರಾಜು ಮಾಡಿದ್ದು ಅವರ ಸಹಾಯಗುಣಕ್ಕೆ ಸಾಕ್ಷಿ. 15 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಭೇಟಿಯಾದಾಗ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅದಕ್ಕೂ ಮೊದಲು ಮತ್ತೊಂದು ಅವಧಿಗೂ ಶಾಸಕನಾಗುತ್ತೇನೆ ಎನ್ನುತ್ತಿದ್ದರು ಎಂದು ಸಿದ್ದರಾಮಯ್ಯ ನೆನೆದರು.ವಿಧಾನಸಭೆಯಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಮಂಡಿಸಿದ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, ಶಾಮನೂರು ಅವರ ಜಾಗದಲ್ಲೇ ನನ್ನ 75ನೇ ಜನ್ಮದಿನ ಆಚರಿಸಲಾಗಿತ್ತು. ಪ್ರತಿ ಬಾರಿ ದಾವಣಗೆರೆಗೆ ಹೋದಾಗಲೂ ಅವರ ಅತಿಥಿಗೃಹದಲ್ಲೇ ನನ್ನ ವಾಸ್ತವ್ಯ. ಅವರ ಮನೆಯಲ್ಲೇ ನನ್ನ ಊಟ. ಎಲ್ಲರೊಂದಿಗೂ ಸ್ನೇಹ ಸಂಪಾದಿಸಿದ್ದ ಅಜಾತಶತ್ರು ಎಂದು ಒಡನಾಟ ಸ್ಮರಿಸಿದರು.
ಮಾತನಾಡುವ ಸ್ಥಿತಿಯಲ್ಲಿರಲಿಲ್ಲ:15 ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಅವರನ್ನು ಭೇಟಿ ಮಾಡಿದಾಗ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅವರ ನಿಧನದಿಂದ ಜನಪರ ನಾಯಕನನ್ನು ಕಳೆದುಕೊಂಡಂತಾಗಿದೆ. ದೊಡ್ಡ ಕುಟುಂಬ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅವರು ಅಗಲಿದ್ದು ಭಗವಂತ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.