ಎಣ್ಣೆ ಮಿಲ್‌ಗಳು, ಕೈಗಾರಿಕೆಗಳು ಒಂದೊಂದಾಗಿ ಮುಚ್ಚಿ ಇತಿಹಾಸದ ಪುಟಕ್ಕೆ ಸೇರುತ್ತಿದ್ದ ದಾವಣಗೆರೆಗೆ ಹೊಸ ಭವಿಷ್ಯ ಬರೆಯುವ ಮೂಲಕ ತಾವೂ ಬೆಳೆದು, ಸಾವಿರಾರು ಕುಟುಂಬಗಳು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಆಸರೆಯಾದ ದಿವಂಗತ ಶಾಮನೂರು ಶಿವಶಂಕರಪ್ಪ ಸದಾ ಸ್ಮರಣೀಯರು ಎಂದು ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್.ನಾಗಭೂಷಣ ಹೇಳಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಎಣ್ಣೆ ಮಿಲ್‌ಗಳು, ಕೈಗಾರಿಕೆಗಳು ಒಂದೊಂದಾಗಿ ಮುಚ್ಚಿ ಇತಿಹಾಸದ ಪುಟಕ್ಕೆ ಸೇರುತ್ತಿದ್ದ ದಾವಣಗೆರೆಗೆ ಹೊಸ ಭವಿಷ್ಯ ಬರೆಯುವ ಮೂಲಕ ತಾವೂ ಬೆಳೆದು, ಸಾವಿರಾರು ಕುಟುಂಬಗಳು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಆಸರೆಯಾದ ದಿವಂಗತ ಶಾಮನೂರು ಶಿವಶಂಕರಪ್ಪ ಸದಾ ಸ್ಮರಣೀಯರು ಎಂದು ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್.ನಾಗಭೂಷಣ ಹೇಳಿದರು.
ನಗರದ ರೋಟರಿ ಬಾಲ ಭವನದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ ಶನಿವಾರ ನಾಗೇಂದ್ರ ಬಂಡೀಕರ್ ನೇತೃತ್ವದ ಜನಮನ ವೇದಿಕೆಯಿಂದ ಅಭಿಮಾನಿಗಳ ಅಭಿಮಾನ ನುಡಿನಮನ ಹಾಗೂ ಡಾ.ಶಾಮನೂರು ಶಿವಶಂಕರಪ್ಪ ಶಿಕ್ಷಣ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾವಣಗೆರೆಯನ್ನು ವಿದ್ಯಾನಗರಿಯಾಗಿ ಬೆಳೆಸುವಲ್ಲಿ ಶಾಮನೂರು ಶಿವಶಂಕರಪ್ಪನವರ ಕೊಡುಗೆ ದೊಡ್ಡದು ಎಂದರು.
ಕೇವಲ ಎರಡೇ ಎರಡು ವಿದ್ಯಾಸಂಸ್ಥೆಗಳಿದ್ದ ಬಾಪೂಜಿ ವಿದ್ಯಾಸಂಸ್ಥೆ ಇಂದು 65ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿ, ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಡುತ್ತಿದೆ. ಸಂಸ್ಥೆಯ ಮೂಲಕ, ತಮ್ಮ ಉದ್ಯಮಗಳ ಮೂಲಕ ಲಕ್ಷಾಂತರ ಜನರು ನೆಮ್ಮದಿಯ ಬಾಳು ಬಾಳುವಲ್ಲೂ ಶಾಮನೂರುರ ಕೊಡುಗೆ ದೊಡ್ಡದು. ಯಾವುದೇ ವ್ಯಕ್ತಿಯನ್ನು ಮಾತು, ವರ್ತನೆಯಿಂದಲೇ ಅಳೆಯುವಂತಹ ಅಪರೂಪದ ಗುಣ ಶಾಮನೂರುರಿಗೆ ಒಲಿದಿತ್ತು ಎಂದು ಸ್ಮರಿಸಿದರು.
ದಿವಂಗತ ಶಾಮನೂರು ಶಿವಶಂಕರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ ಮಾತನಾಡಿ, ಕೊಡುಗೈ ದಾನಿಯಾದ ಶಾಮನೂರು ಶಿವಶಂಕರಪ್ಪನವರ ದೊಡ್ಡ ವ್ಯಕ್ತಿತ್ವದವರಾಗಿದ್ದರು. ಆರೇಳು ಕೋಟಿ ವೆಚ್ಚದಲ್ಲಿ ಕೋವಿಡ್ ಲಸಿಕೆ ತರಿಸಿ, ಜನರಿಗೆ ನೀಡುವ ಮೂಲಕ ಸಾವಿರಾರು ಜೀವ ಕಾಪಾಡಿದವರು ಶಾಮನೂರು ಎಂದು ಹೇಳಿದರು.
ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಮಾತನಾಡಿ, ವ್ಯಕ್ತಿಗಿಂತ ವ್ಯಕ್ತಿತ್ವವನ್ನು ಗುರುತಿಸುತ್ತಿದ್ದಂತಹ ಗುಣವು ಹಿರಿಯರಾದ ಶಾಮನೂರು ಶಿವಶಂಕರಪ್ಪನವರಿಗೆ ಸಿದ್ಧಿಸಿತ್ತು. ಒಳ್ಳೆಯದನ್ನು ಚಿಕ್ಕವರು ಹೇಳಿದರೂ ಸಹ ಅದನ್ನು ಅರಿತು, ಸ್ಪಂದಿಸುತ್ತಿದ್ದರು ಎಂದರು.
ಸದಾ ಎಲ್ಲರ ಸಮಸ್ಯೆ, ನೋವು, ನಲಿವುಗಳಿಗೆ ಧ್ವನಿಯಾಗುವ ಪತ್ರಕರ್ತರ ಕಷ್ಟ, ನಷ್ಟ, ದುಃಖಗಳಿಗೆ ಸ್ಪಂದಿಸುವಂತಹ ಗುಣವು ಶಾಮನೂರು ಶಿವಶಂಕರಪ್ಪನವರಲ್ಲಿತ್ತು. ಯಾರೇ ಹೋಗಿ
ನೆರವು ಕೇಳಿದರೂ ಅದನ್ನು ಗ್ರಹಿಸಿ, ಏನು ಅನುಕೂಲ ಮಾಡಿಕೊಡಬೇಕೋ ಮಾಡಿ, ಮುಗುಳ್ನಗೆ ಬೀರುತ್ತಿದ್ದುದು ಇಂದಿಗೂ ನಮ್ಮ ಕಣ್ಣ ಮುಂದಿದೆ. ಹಿರಿಯರಾದ ಶಾಮನೂರು ಶಿವಶಂಕರಪ್ಪನವರ ಅಗಲಿಕೆ ದಾವಣಗೆರೆಗಷ್ಟೇ ಅಲ್ಲ ರಾಜ್ಯಕ್ಕೂ ನಷ್ಟ ಎಂದರು.
ಇದೇ ವೇಳೆ ಶ್ರೀಮತಿ ರಾಜನಹಳ್ಳಿ ಸೀತಮ್ಮ ಬಾಲಕಿಯರ ಶಾಲೆಗೆ ಡಾ.ಶಾಮನೂರು ಶಿವಶಂಕರಪ್ಪ ಶಿಕ್ಷಣ ಸಿರಿ ಪ್ರಶಸ್ತಿಯನ್ನು ಕಾಲೇಜಿನ ಪ್ರಾಚಾರ್ಯ ಟಿ.ಎಸ್.ಕುಸುಗಟ್ಟಿ ಸ್ವೀಕರಿಸಿದರು.
ವೃತ್ತ ನಿರೀಕ್ಷಕ ಉಮೇಶ, ವೇದಿಕೆ ಸಂಸ್ಥಾಪಕ ನಾಗೇಂದ್ರ ಬಂಡೀಕರ್, ಕಾಂಗ್ರೆಸ್ ಮುಖಂಡ ಎಸ್.ಮಲ್ಲಿಕಾರ್ಜುನ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜು, ರಾಯ್ಕರ್ ಜ್ಯುಯಲರ್ಸ್ ಮಾಲೀಕ ವಾಸುದೇವ ರಾಯ್ಕರ್, ಸೀತಮ್ಮ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕುಬೇರಪ್ಪ, ನಾಟ್ಯ ಗಣಪತಿ ಸೇವಾ ಸಮಿತಿಯ ಬಿ.ವಿ.ರಾಜಶೇಖರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಟಿ.ಶಿವಶಂಕರ, ಎಸ್.ರಂಗಸ್ವಾಮಿ, ಪ್ರವೀಣ ಬಿ.ಎಸ್.ಪಲ್ಲೇದ್, ಬಿ.ಎಲ್.ಗಂಗಾಧರ ನಿಟ್ಟೂರು ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.