ಕಿವಿಗೆ ಇಂಪಾದ ಪದಗಳೇ ಸಾಹಿತ್ಯ ಎಂದ ಶಂಭುನಾಥ ಶ್ರೀ

KannadaprabhaNewsNetwork |  
Published : Oct 30, 2025, 01:15 AM IST
29ಎಚ್ಎಸ್ಎನ್9 :  | Kannada Prabha

ಸಾರಾಂಶ

ಕಿವಿಯಲ್ಲಿ ಬೀಳುವ ಹಿತವಾದ ಪದಗಳೆಲ್ಲವೂ ಸಾಹಿತ್ಯಮಯವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಮಹಾ ಪೋಷಕರಾದ ಶಂಭುನಾಥ ಸ್ವಾಮೀಜಿ ಹೇಳಿದರು. ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯಾಕರಣಬದ್ಧ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಬೇಕು. ವ್ಯವಹಾರಿಕ ಸಲುವಾಗಿ ಮಾತ್ರ ಆಂಗ್ಲ, ಹಿಂದಿ ಹಾಗೂ ಇತರೆ ಭಾಷೆಗಳ ಬಳಕೆ ಇರಲಿ, ಆದರೆ ಸದಾ ಕಾಲ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕಿವಿಯಲ್ಲಿ ಬೀಳುವ ಹಿತವಾದ ಪದಗಳೆಲ್ಲವೂ ಸಾಹಿತ್ಯಮಯವಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಮಹಾ ಪೋಷಕರಾದ ಶಂಭುನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಶ್ರವಣಬೆಳಗೊಳದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಧ್ಯಕ್ಷರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ಯಕ್ಕೆ ಯಾವುದೇ ಧರ್ಮ, ಜಾತಿ ಹಾಗೂ ಭಾಷೆ ಎಂಬ ಭೇದವಿಲ್ಲ ಎಂದು ಆಶೀರ್ವಚನ ನೀಡಿದರು.

ಹುಟ್ಟಿದಾಗ ವಿಶ್ವ ಮಾನವ ಎನಿಸಿಕೊಂಡವನು ಬೆಳೆಯುತ್ತ ಅಲ್ಪ ಮಾನವನಾಗುತಿದ್ದಾನೆ. ಶಿಕ್ಷಣವಿದ್ದರೂ ಜ್ಞಾನದ ಅರಿವಿಲ್ಲದೆ ದುರಾಸೆಯೊಂದಿಗೆ ಅಸೂಯೆ ಹೊಂದಿದ್ದು ಮಾನವೀಯ ಮೌಲ್ಯಗಳನ್ನು ಬದಿಗೊತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ನಾಡು-ನುಡಿ, ನೆಲ-ಜಲ ಹಾಗೂ ಭಾಷೆಯ ಜೊತೆಗೆ ಸಾಹಿತ್ಯ ಭಾವನೆ ಮೂಡಿಸುವ ಮೂಲಕ ಕತ್ತಲೆಯಿಂದ ಬೆಳಕಿನೆಡೆಗೆ ಕೈ ಹಿಡಿದು ನಡೆಸುವುದೇ ಪರಿಷತ್‌ನ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವ ಮೂಲಕ ನಾಡು-ನುಡಿ ಹಾಗೂ ಭಾಷೆ ಸಾಹಿತ್ಯದ ನೆಲೆಗಟ್ಟನ್ನು ತಳಮಟ್ಟದಿಂದ ಸುಭದ್ರವಾಗಿ ಕಟ್ಟುವಲ್ಲಿ ಮಕ್ಕಳ ಸಾಹಿತ್ಯ ಪರಿಷತ್‌ನ ಕಾರ್ಯವೈಖರಿ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯಾಕರಣಬದ್ಧ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಬೇಕು. ವ್ಯವಹಾರಿಕ ಸಲುವಾಗಿ ಮಾತ್ರ ಆಂಗ್ಲ, ಹಿಂದಿ ಹಾಗೂ ಇತರೆ ಭಾಷೆಗಳ ಬಳಕೆ ಇರಲಿ, ಆದರೆ ಸದಾ ಕಾಲ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಯಾವುದೇ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಇದೂವರೆಗೂ ಅನುದಾನ ಅಥವಾ ಆರ್ಥಿಕ ನೆರವು ಸಿಗುತ್ತಿಲ್ಲ. ಸರ್ಕಾರದ ಆಶ್ರಯದಲ್ಲಿ ನಡೆಯಬೇಕಿದೆ. ಸರ್ಕಾರದ ಗಮನ ಸೆಳೆದು ಸರ್ಕಾರದ ಮಟ್ಟದಿಂದಲೇ ಸಹಕಾರ ಕಲ್ಪಿಸುವಂತೆ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.ರಾಜ್ಯಾಧ್ಯಕ್ಷ ಸಿ.ಎನ್. ಅಶೋಕ್ ಮಾತನಾಡಿ, ಮಕ್ಕಳಲ್ಲಿರುವ ಸಾಹಿತ್ಯ ಪ್ರತಿಭೆಯನ್ನು ಮುಖ್ಯ ಭೂಮಿಕೆಗೆ ತರುವ ಪ್ರಯತ್ನ ಯಶಸ್ವಿಯಾಗಿದ್ದು, ನಿರಂತರವಾಗಿ ಮುಂದುವರಿಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀಗಳು ಭದ್ರಬುನಾದಿ ಹಾಕಿಕೊಟ್ಟಿರುವ ಮಕ್ಕಳ ಸಾಹಿತ್ಯ ಪರಿಷತ್ ಹೆಮ್ಮರವಾಗಿ ಬೆಳೆದಿದ್ದು ದೆಹಲಿಯವರೆಗೂ ಮೊಳಗಿದೆ. ಮುಂದಿನ ದಿನಗಳಲ್ಲಿ ಅಮೆರಿಕಾ ಹಾಗೂ ದುಬೈನಂತಹ ದೇಶಗಳಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಆಗಮಿಸಿದ್ದ ಜಿಲ್ಲಾಧ್ಯಕ್ಷರು ತಮ್ಮ ಕಾರ್ಯ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದರು. ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಯಿತು.

ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿ.ಎನ್.ವೆಂಕಟೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ಪರಿಷತ್‌ನ ಜಿಲ್ಲಾಧ್ಯಕ್ಷ ಗಂಗಾಧರ್, ತಾಲೂಕು ಪ್ರಧಾನ ಕಾರ್ಯದರ್ಶಿ ಹೂ.ವಿ. ಸಿದ್ದೇಶ್, ಸಹ ಕಾರ್ಯದರ್ಶಿ ಸಿ.ಎಸ್. ಮನೋಹರ್, ಸಂಘಟನಾ ಕಾರ್ಯದರ್ಶಿ ಸಚಿನ್, ಉಪಾಧ್ಯಕ್ಷ ಜಗದೀಶ್, ಅಧ್ಯಕ್ಷ ನಾಗೇಶ್, ಖಜಾಂಚಿ ಲತಾ, ನಿರ್ದೇಶಕರು ಹಾಗೂ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಇತರರು ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು