ಶಂಭೂರು: ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ ಪೂರ್ಣ

KannadaprabhaNewsNetwork |  
Published : Nov 20, 2024, 12:33 AM IST
11 | Kannada Prabha

ಸಾರಾಂಶ

ಘಟಕವು ದಿನನಿತ್ಯ 7 ಟನ್ ಒಣ ತ್ಯಾಜ್ಯವನ್ನು ವಿಂಗಡಿಸಿ ನಿರ್ವಹಣೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಬಂಟ್ವಾಳ ತಾಲೂಕಿನ 40 ಹಾಗೂ ಉಳ್ಳಾಲ ತಾಲೂಕಿನ 17 ಗ್ರಾ.ಪಂ.ಗಳು ಈ ಘಟಕದ ವ್ಯಾಪ್ತಿಗೆ ಬರಲಿದ್ದು, ಒಟ್ಟು 57 ಗ್ರಾ.ಪಂ.ಗಳ 99,520 ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳ ಒಣ ತ್ಯಾಜ್ಯವನ್ನು ನಿರ್ವಹಣೆ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಂಟ್ವಾಳ ಹಾಗೂ ಉಳ್ಳಾಲ ತಾಲೂಕುಗಳ ಒಟ್ಟು 57 ಗ್ರಾ.ಪಂ.ಗಳ ಘನ ತ್ಯಾಜ್ಯಗಳನ್ನು ನಿರ್ವಹಿಸುವ ದೃಷ್ಟಿಯಿಂದ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಭೂರಿನಲ್ಲಿ ಸುಮಾರು 1.95 ಕೋಟಿ ರುಪಾಯಿ ವೆಚ್ಚದಲ್ಲಿ ಅನುಷ್ಠಾನಗೊಂಡ ಸಮಗ್ರ ತ್ಯಾಜ್ಯ ನಿರ್ವಹಣಾ ಘಟಕ (ಎಂಆರ್‌ಎಫ್)ದ ಕಾಮಗಾರಿ ಪೂರ್ಣಗೊಂಡಿದ್ದು, ಘಟಕವು ನಾಳೆಯಿಂದ ಪ್ರಾಯೋಗಿಕವಾಗಿ ಕಾರ್ಯಾರಂಭಗೊಳ್ಳಲಿದೆ. ಶಂಭೂರಿನ ಮುಂದೆಜೋರ ಪ್ರದೇಶದಲ್ಲಿ ಸ.ನಂ. 24/1ರಲ್ಲಿ ಘಟಕಕ್ಕೆ 1 ಎಕರೆ ನಿವೇಶನವಿದ್ದು, ಸುಮಾರು7 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಘಟಕ ಅನುಷ್ಠಾನಗೊಂಡಿದೆ. ಘಟಕವು ದಿನನಿತ್ಯ 7 ಟನ್ ಒಣ ತ್ಯಾಜ್ಯವನ್ನು ವಿಂಗಡಿಸಿ ನಿರ್ವಹಣೆಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಬಂಟ್ವಾಳ ತಾಲೂಕಿನ 40 ಹಾಗೂ ಉಳ್ಳಾಲ ತಾಲೂಕಿನ 17 ಗ್ರಾ.ಪಂ.ಗಳು ಈ ಘಟಕದ ವ್ಯಾಪ್ತಿಗೆ ಬರಲಿದ್ದು, ಒಟ್ಟು 57 ಗ್ರಾ.ಪಂ.ಗಳ 99,520 ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳ ಒಣ ತ್ಯಾಜ್ಯವನ್ನು ನಿರ್ವಹಣೆ ಮಾಡಲಾಗುತ್ತದೆ.ಸಾಮಾನ್ಯವಾಗಿ ಇಂತಹ ಘಟಕಗಳು ಗ್ರಾ.ಪಂ. ಹಣ ಪಾವತಿಸಿ ಒಣ ತ್ಯಾಜ್ಯ ನೀಡುವುದು ಅಥವಾ ಘಟಕದ ನಿರ್ವಹಣ ಸಂಸ್ಥೆಯೇ ಹಣ ಪಾವತಿಸಿ ತ್ಯಾಜ್ಯವನ್ನು ಸಂಗ್ರಹ ಮಾಡುವ ಮೂಲಕ ನಡೆಯುತ್ತದೆ. ಆದರೆ ದ.ಕ.ಜಿ.ಪಂ. ರಾಜ್ಯದಲ್ಲೇ ಮೊದಲ ಬಾರಿಗೆ ಶುಲ್ಕ ರಹಿತ ಮಾದರಿ (ಝೀರೊ ರೂಪೀಸ್ ಮಾಡೆಲ್)ಯನ್ನು ಪರಿಚಯಿಸಿದ್ದು, ಇಲ್ಲಿ ಯಾರು ಕೂಡ ಪರಸ್ಪರ ಯಾರಿಗೂ ಮೊತ್ತ ಪಾವತಿಸುವ ವ್ಯವಸ್ಥೆಯಿಲ್ಲ. ಇದರಿಂದ ಗ್ರಾ.ಪಂ.ಗಳು ಆರ್ಥಿಕ ಹೊರೆಯಾಗದಂತೆ ಒಡಂಬಡಿಕೆಯ ರೀತಿ ಒಣ ತ್ಯಾಜ್ಯವನ್ನು ನೀಡಬಹುದಾಗಿದೆ.ಇಂದಿನಿಂದ ಆರಂಭ: ಇ.ಒ.ಸಚಿನ್

ಎಂಆರ್‌ಎಫ್ ಘಟಕದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣಗಳ ಅನುಷ್ಠಾನ ಕಾರ್ಯ ಪೂರ್ಣಗೊಂಡಿದೆ, ಹಾಗಾಗಿ ಬುಧವಾರದಿಂದಲೇ ಘಟಕದಲ್ಲಿ ಪ್ರಾಯೋಗಿಕವಾಗಿ ಕೆಲಸ ಆರಂಭವಾಗಲಿದೆ. ಸುಮಾರು 15 ಸಿಬ್ಬಂದಿ ಆರಂಭಿಕ ಹಂತದಲ್ಲಿ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಬಹತೇಕ ಕೆಲಸ ಕಾರ್ಯಗಳು ಯಂತ್ರೋಪಕರಣಗಳ ಮೂಲಕ ನಡೆಯುವುುದರಿಂದ ಸಿಬ್ಬಂದಿ ಹೊಂದಿಕೊಂಡು ತಿಂಗಳೊಳಗಾಗಿ ಅಧಿಕೃತವಾಗಿ ಘಟಕದ ಉದ್ಘಾಟನೆ ನಡೆಯಲಿದೆ ಎಂದು ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಸಚಿನ್‌ ಕುಮಾರ್

ತಿಳಿಸಿದ್ದಾರೆ. ಸಂತಸದ ವಿಚಾರ: ಸಂತೋಷ್ ಕುಮಾರ್

ಆರಂಭದಲ್ಲಿ ಘಟಕದ ನಿರ್ಮಾಣಕ್ಕೆ ಹಲವಾರು ವಿರೋಧಗಳಿದ್ದರೂ ನಂತರದ ದಿನಗಳಲ್ಲಿ ಗ್ರಾಮಸ್ಥರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಿಂದ ಅಂತಿಮವಾಗಿ ಉದ್ಘಾಟನೆಗೆ ಸಿದ್ಧವಾಗಿದೆ. ಗ್ರಾಮದ ಸುಮಾರು 15 ಜನರಿಗೆ ಘಟಕದಲ್ಲಿ ಕೆಲಸ ದೊರಕಿದೆ. ಪ್ರಸ್ತುತ ದಿನಗಳಲ್ಲಿ ಇದೊಂದು ಪ್ರಮುಖವಾದ ಘಟಕವಾಗಿದ್ದು, ಇದು ಸಂತಸದ ಸಂಗತಿಯಾಗಿದೆ ಎಂದು ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!