ಕನ್ನಡಪ್ರಭ ವಾರ್ತೆ, ಉಡುಪಿ
ಗೃಹಲಕ್ಷ್ಮೀ ಗ್ಯಾರಂಟಿ ಹಣ ಫಲಾನುಭವಿಗಳ ಖಾತೆಗೆ ಹಾಕುವುದು ಒಂದು ತಿಂಗಳು ತಡವಾದ್ರೆ ರಾಜ್ಯ ಸರ್ಕಾರದ ವಿರುದ್ಧ ಟಾಮ್ ಟಾಮ್ ಮಾಡುವ ಬಿಜೆಪಿ ನಾಯಕರಿಗೆ ನರೇಗಾ ಯೋಜನೆಯಲ್ಲಿ ಕಾರ್ಮಿಕರಿಗೆ 5 ತಿಂಗಳ ಬಾಕಿ ಹಣ ಕೇಂದ್ರ ಸರ್ಕಾರದಿಂದ ತರುವುದಕ್ಕೆ ಯಾಕೆ ಆಗ್ತಿಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಖಾರವಾಗಿ ಪ್ರಶ್ನಿಸಿದ್ದಾರೆ.ಉಡುಪಿಯಲ್ಲಿ ಶುಕ್ರವಾರ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ದುಡಿದು ಉಣ್ಣುವ ಕೈಗಳಿಗೆ ನಿರಂತರ ಉದ್ಯೋಗ ನೀಡುವುದಕ್ಕಾಗಿ ಈ ನರೇಗಾ ಯೋಜನೆ ಜಾರಿಗೆ ತಂದಿದ್ದರು, ಆಗ ಇದೇ ಬಿಜೆಪಿಯವರು ಅದನ್ನು ವಿರೋಧಿಸಿದ್ದರು. ನಂತರ ಈ ಯೋಜನೆ ಇಡೀ ದೇಶದಲ್ಲಿ ಭಾರೀ ಯಶಸ್ವಿ ಅಂತ ಸಾಬೀತಾದ ಮೇಲೆ ಬಿಜೆಪಿಯವರು ಸುಮ್ಮನಾಗಿ ತಾವು ಅಧಿಕಾರಕ್ಕೆ ಬಂದಾಗ ಅದನ್ನು ಮುಂದವರಿಸಿದರು. ಆದರೆ ಕಳೆದ ಐದು ತಿಂಗಳಿಂದ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಸಂಬಳನೇ ನೀಡಿಲ್ಲ ಎಂದರು.ಈಗ ರಾಜ್ಯ ಕಾಂಗ್ರೆಸ್ ಸರ್ಕಾರದ ಯಶಸ್ವಿ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿ ಒಂದು ತಿಂಗಳು ತಡವಾದರೂ ಲಕ್ಷ್ಮೀ ಅಕ್ಕ ಗೃಹಲಕ್ಷ್ಮಿ ದುಡ್ ಎಲ್ಲಿ ಅಕ್ಕ ಅಂತಾರೆ, ಹಾಗಾದರೆ ಇಲ್ಲಿ ಸಭೆ ಮಾಡಿ ಸಿದ್ದರಾಮಯ್ಯ ಅವರು ವಿರುದ್ಧ ಪ್ರಶ್ನೆ ಮಾಡುವ ಬದಲು, ಇಷ್ಟು ಜನ ಬಿಜೆಪಿ ಎಂಪಿಗಳಿದ್ದೀರಿ, ದೆಹಲಿಗೆ ಹೋಗಿ ನರೇಗಾ ಹಣಕ್ಕೆ ಯಾಕೆ ಪ್ರಶ್ನೆ ಮಾಡಲ್ಲಾ, ಯಾಕೆ ಹಣ ತರಿಸಕಾಗ್ತಿಲ್ಲ, ನಾಚಿಕೆಯಾಗಲ್ವಾ ಎಂದು ಪ್ರಶ್ನಿಸಿದರು.ಅದ್ಯಾವುದೋ ಯುನಿಟ್‌ಗೆ 30 ಪೈಸಾ ಹೆಚ್ಚಿಸಿದ್ದಕ್ಕೆ ಬಿಜೆಪಿಯವರು ಉಡುಪಿಯಲ್ಲಿ ಪ್ರತಿಭಟಿಸ್ತಾರಂತೆ, ಮೊದಲು ನರೇಗಾದ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಸಲಹೆ ಮಾಡಿದರು.ಗೃಹಲಕ್ಷ್ಮೀ ನಿರಂತರ:
ಗೃಹಲಕ್ಷ್ಮೀ ಯೋಜನೆಗೆ ಅರ್ಜಿಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ರೇಶನ್ ಕಾರ್ಡ್ ವಿತರಣೆ ನಿಲ್ಲಿಸಿದ್ದೇವೆ ಎಂಬುದು ಶುದ್ಧ ಸುಳ್ಳು ಎಂದು ಸಚಿವೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ರಾಜ್ಯದಲ್ಲಿ 1.52 ಕೋಟಿ ಕುಟುಂಬಗಳಿವೆ, ಅವುಗಳಲ್ಲಿ 1.40 ಕೋಟಿ ಬಿಪಿಎಲ್ ಕುಟುಂಬಗಳಿವೆ, 1.26 ಕೋಟಿ ಕುಟುಂಬಗಳ ಮುಖ್ಯಸ್ಥೆಯರು ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಪ್ರತಿ ತಿಂಗಳು 15 - 20 ಸಾವಿರ ಮಂದಿ ಮಹಿಳೆಯರು ಅರ್ಜಿ ಸಲ್ಲಿಸುತಿದ್ದಾರೆ, ಗೃಹಲಕ್ಷ್ಮೀ ಯೋಜನೆಯಿಂದ ಹೊರಗಿಡಲಾಗಿದ್ದ ಜಿಎಸ್‌ಟಿ ಕಟ್ಟುವ ಮತ್ತು ಆದಾಯ ತೆರಿಗೆ ಕಟ್ಟುವ 2 ಲಕ್ಷ ಮಂದಿಯನ್ನು ಪುನಃ ಪರಿಶೀಲಿಸಿ, ಅವರರಲ್ಲೂ 50 ಸಾವಿರ ಮಂದಿಯನ್ನು ಯೋಜನೆಗೆ ಸೇರಿಸಿಕೊಂಡಿದ್ದೇವೆ, ಈ ಯೋಜನೆ ನಿರಂತರ 5 ವರ್ಷ ನಡೆಯುತ್ತದೆ, ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದ ಸಚಿವೆ ರೇಶನ್ ಕಾರ್ಡ್ ಯಾಕೆ ವಿತರಿಸುತ್ತಿಲ್ಲ ಎಂಬುದಕ್ಕೆ ‘ಆಹಾರ ಸಚಿವರೇ ಉತ್ತರಿಸಬೇಕು’ ಎಂದರು.