ಶಿರಸಿ: ಬಜೆಟ್ ವಿರೋಧಿಸಿ, ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಭಟನೆ ಮಾಡಿದ ಜಿಲ್ಲಾ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಬಿಜೆಪಿಯ ಶಾಸಕರು, ಪದಾಧಿಕಾರಿಗಳು ಸಿದ್ದರಾಮಯ್ಯನವರ ಬಜೆಟ್‌ನ್ನು ಸ್ವಾಗತಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಪ್ರಸನ್ನ ಶೆಟ್ಟಿ ತಿರುಗೇಟು ನೀಡಿದ್ದಾರೆ.ಅವರು ಈ ಕುರಿತು ಪ್ರಕಟಣೆ ನೀಡಿ, ಬಡವರು, ಕೃಷಿಕರು, ದುಡಿಯುವ ವರ್ಗದ ಕೈಹಿಡಿದ ಸಿದ್ದರಾಮಯ್ಯಗೆ ನಾಡಿನ ಜನತೆ ಅಭಿನಂದನೆಗಳ ಮಹಾಪೂರ ಹರಿಸುತ್ತಿದ್ದಾರೆ. ಬಿಜೆಪಿಯವರು ಪ್ರತಿಭಟನೆ ನಡೆಸಲು ಬಜೆಟ್ ಮಂಡನೆಯ ಹಿಂದಿನ ದಿನವೇ ಪೂರ್ವ ತಯಾರಿ ನಡೆಸಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಜೂಮ್ ಮೀಟಿಂಗ್ ನಡೆಸಿ ಎತ್ತಿನಗಾಡಿ ಮತ್ತು ಟ್ರ್ಯಾಕ್ಟರ್‌ಗಳನ್ನು ತರಲು ಮೌಕಿಕವಾಗಿ ಸೂಚನೆ ನೀಡಿದ್ದು, ಅದರ ಪ್ರಕಾರ ಬಜೆಟ್ ಮಂಡನೆ ಮಾಡಿದ ಮರುದಿನ ಪ್ರತಿಭಟನೆ ನಡೆಸಿದ್ದಾರೆ. ಇದರರ್ಥ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಜೆಟ್ ಮಂಡನೆ ಮಾಡಿದ ಬಳಿಕ ಪ್ರತಿಭಟನೆ ಮಾಡಲೇಬೇಕು ಎಂಬುದು ಬಿಜೆಪಿಯ ಪೂರ್ವನಿಯೋಜಿತ ಕೃತ್ಯ. ಬಜೆಟ್ ಜನಪರವಾಗಿದ್ದರು ಸಹ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವುದು ಹಾಗೂ ಜನರಲ್ಲಿ ಆಡಳಿತ ವಿರೋಧಿ ಮನಸ್ಥಿತಿ ಸೃಷ್ಟಿ ಮಾಡುವುದು ಬಿಜೆಪಿಯ ಹುನ್ನಾರ. ಬಿಜೆಪಿಯು ಆಡಳಿತದಲ್ಲಿ ಇರುವುದಕ್ಕಿಂತ ವಿರೋಧ ಪಕ್ಷದಲ್ಲಿರುವಾಗಲೇ ಹೆಚ್ಚು ಅಪಾಯಕಾರಿ. ವಿರೋಧ ಪಕ್ಷದಲ್ಲಿದ್ದಾಗಲೆಲ್ಲ ಸಾಂವಿಧಾನಿಕವಾಗಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದ್ದಕ್ಕಿಂತ ಈ ರೀತಿಯಾಗಿ ಕುಕೃತ್ಯ ಮೆರೆದಿದ್ದೆ ಹೆಚ್ಚು. ಸಂವಿಧಾನದ ಆಶಯಗಳಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಭಾರತದ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಬಿಜೆಪಿಯವರು ಅದೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಹಿಂದೂ-ಮುಸ್ಲಿಂ ವಿರೋಧಿ ನೀತಿ ತಾಳುತ್ತಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರಲ್ಲ ಅಲ್ಪಸಂಖ್ಯಾತರಲ್ಲಿ ಹಲವಾರು ಧರ್ಮಗಳಿವೆ. ಎಲ್ಲ ಧರ್ಮಗಳನ್ನು ಸಮಾನವಾಗಿ ಸ್ವೀಕರಿಸಿ ಅನುದಾನ ಹಂಚಿಕೆ ಮಾಡುವುದು ಸಂವಿಧಾನದ ಮೂಲ ಆಶಯ. ಭಾರತದ ಸಂವಿಧಾನದ ಅಡಿಯಲ್ಲಿ ಆಳುವ ಸರ್ಕಾರಗಳು ಅದರ ಮೂಲ ಉದ್ದೇಶದಡಿ ಕೆಲಸ ಮಾಡಬೇಕಾಗುತ್ತದೆ. ಅದನ್ನು ವಿರೋಧಿಸುವವರು ದೇಶದ್ರೋಹಿಗಳೇ ಆಗಿರುತ್ತಾರೆ. ಜಿಲ್ಲೆಯಲ್ಲಿ ಇವರ ಈ ರೀತಿಯ ಬೇಜವಾಬ್ದಾರಿ ಚಟುವಟಿಕೆಗಳು ಮುಂದುವರಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ಎರಡೇ ಸ್ಥಾನದಲ್ಲಿದ್ದರುವ ಇವರು ಮುಂದಿನ ದಿನಗಳಲ್ಲಿ ಶೂನ್ಯಕ್ಕೆ ಬರುವುದು ಖಚಿತ ಎಂದು ಹೇಳಿದ್ದಾರೆ.