ತೆರಿಗೆ ಪಾವತಿಸುವವರಿಗೆ ಶಾಮಿಯಾನ, ಕುಡಿಯುವ ನೀರು!

KannadaprabhaNewsNetwork |  
Published : Apr 08, 2026, 03:15 AM IST
ಪಾಲಿಕೆಯ ವಲಯ ಕಚೇರಿ-4 ರಲ್ಲಿ ಶಾಮಿಯಾನ, ಕುರ್ಚಿ ವ್ಯವಸ್ಥೆ ಮಾಡಿರುವುದು. | Kannada Prabha

ಸಾರಾಂಶ

ಏ. 1 ಹೊಸ ಆರ್ಥಿಕ ವರ್ಷ ಆರಂಭ ಆಗುತ್ತಿದ್ದಂತೆ ತನ್ನ ತೆರಿಗೆ ಸಂಗ್ರಹದ ಗುರಿ ತಲುಪಲು ಪಾಲಿಕೆ ಶೇ.5ರಷ್ಟು ರಿಯಾಯ್ತಿ ಘೋಷಿಸಿದೆ. ಈ ರಿಯಾಯ್ತಿ ಏಪ್ರಿಲ್‌ ಅಂತ್ಯದ ವರೆಗೆ ಇರುತ್ತದೆ. ಈ ರಿಯಾಯ್ತಿಯ ಲಾಭ ಪಡೆಯಲು ಜನರು ಕಚೇರಿಗೆ ಬರುತ್ತಿದ್ದಾರೆ.

ಹುಬ್ಬಳ್ಳಿ:

ಸ್ವಯಂ ಪ್ರೇರಣೆಯಿಂದ ತಮ್ಮ ಆಸ್ತಿಗಳ ತೆರಿಗೆ ಪಾವತಿಸಲು ಉರಿ ಬಿಸಿಲು ಲೆಕ್ಕಿಸದೇ ಕೌಂಟರ್‌ ಬಳಿ ಸಾಲುಗಟ್ಟಿ ನಿಲ್ಲುವ ನಾಗರಿಕರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಶಾಮಿಯಾನ ಹಾಕಿ ನೆರಳು ಮಾಡಿದೆ. ಕೂಡ್ರಲು ಕುರ್ಚಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದೆ.

ನವನಗರದ ವಲಯ ಕಚೇರಿ-4ರಲ್ಲಿ ಮಂಗಳವಾರ ಇಂಥದೊಂದು ನಾಗರೀಕ ಸ್ನೇಹಿ ವಾತಾವರಣ ಕಂಡು ಬಂದಿತು. ಯಾವುದೇ ಗಡಿಬಿಡಿ, ಗದ್ದಲ ಇಲ್ಲದೇ ಜನತೆ ಆರಾಮಾಗಿ ತೆರಿಗೆ ಪಾವತಿಸುತ್ತಿದ್ದರು. ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಎರಡು ಕೌಂಟರ್‌ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ನಿತ್ಯ 1 ಸಾವಿರಕ್ಕೂ ಹೆಚ್ಚು ಆಸ್ತಿಗಳ ತೆರಿಗೆ ಪಾವತಿ ಆಗುತ್ತಿದೆ.

ಶೇ. 5ರಷ್ಟು ರಿಯಾಯ್ತಿ:

ಏ. 1 ಹೊಸ ಆರ್ಥಿಕ ವರ್ಷ ಆರಂಭ ಆಗುತ್ತಿದ್ದಂತೆ ತನ್ನ ತೆರಿಗೆ ಸಂಗ್ರಹದ ಗುರಿ ತಲುಪಲು ಪಾಲಿಕೆ ಶೇ.5ರಷ್ಟು ರಿಯಾಯ್ತಿ ಘೋಷಿಸಿದೆ. ಈ ರಿಯಾಯ್ತಿ ಏಪ್ರಿಲ್‌ ಅಂತ್ಯದ ವರೆಗೆ ಇರುತ್ತದೆ. ಈ ರಿಯಾಯ್ತಿಯ ಲಾಭ ಪಡೆಯಲು ನಾಗರಿಕರು, ಅದರಲ್ಲೂ ಹಿರಿಯ ಜಾಗರಿಕರು ತೆರಿಗೆ ಪಾವತಿಸಲು ಪಾಲಿಕೆಯ ವಲಯ ಕಚೇರಿ, ಹುಬ್ಬಳ್ಳಿ-ಧಾರವಾಡ- 1 ಕಚೇರಿಗಳಿಗೆ ಬೆಳ್ಳಂಬೆಳಗ್ಗೆ ಬರುತ್ತಿದ್ದಾರೆ. ಆದರೂ ಪ್ರತಿ ಕೌಂಟರ್‌ ಬಳಿ ಉದ್ದನೆಯ ಸಾಲಿದೆ. ಸಮಯ ಕಳೆದಂತೆ ನೆತ್ತಿ ಸುಡುವ ಸೂರ್ಯ, ಕಾದು ಕೆಂಡವಾದ ನೆಲ, ನೀರು ಕುಡಿಯಲು ಹೋದರೆ ಸರದಿ ಸಾಲು ತಪ್ಪುವ ಆತಂಕದಲ್ಲಿ ನಾಗರಿಕರು ಇದ್ದರು.

ಈ ಸಮಸ್ಯೆ ಅರಿತ ವಲಯ-4ರ ಸಹಾಯಕ ವಲಯಾಧಿಕಾರಿ ಸಂತೋಷ ಆನಿಶೆಟ್ಟರ್‌, ಕಂದಾಯ ಅಧಿಕಾರಿ ಮಹಾಂತೇಶ ಮ್ಯಾಗೇರಿ ಅವರು ತಕ್ಷಣ ಶಾಮಿಯಾನದ ನೆರಳು, ಕುರ್ಚಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಅನುಕೂಲ ಕಲ್ಪಿಸಿದ್ದಾರೆ. ಅಧಿಕಾರಿಗಳ ಈ ನಿರ್ಧಾರಕ್ಕೆ ನಾಗರಿಕರು ಸಂತಸ ವ್ಯಕ್ತಪಡಿಸಿದರು.

₹ 24.26 ಕೋಟಿ ಸಂಗ್ರಹ ಗುರಿ:

ವಲಯ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 41,473 (ವಾಣಿಜ್ಯ-1054, ವಸತಿ-13871, ಖಾಲಿ ನಿವೇಶನ-26552) ಆಸ್ತಿಗಳಿದ್ದು, ಇವುಗಳಿಂದ ಬರೋಬ್ಬರಿ ₹ 24.26 ಕೋಟಿ ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ₹ 20.43 ಕೋಟಿ ತೆರಿಗೆ ಸಂಗ್ರಹಿಸಿ ₹83 ಲಕ್ಷ ಬಾಕಿ ಉಳಿದಿದೆ. ಹಾಗಾಗಿ ಈ ಬಾರಿ ಶೇ.100 ಸಾಧನೆ ಮಾಡಲು ಇಲ್ಲಿನ ಅಧಿಕಾರಿಗಳು ಇನ್ನಷ್ಟು, ಮತ್ತಷ್ಟು ನಾಗರೀಕ ಸ್ನೇಹಿ ಆಗುವ ಮೂಲಕ ತಮ್ಮ ಗುರಿಯತ್ತ ಹೆಜ್ಜೆ ಇಟ್ಟುದ್ದಾರೆ.₹ 24.26 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇದ್ದರೂ ನಮ್ಮ ಗುರಿಗಿಂತ ನಾಗರಿಕರ ಹಿತ ಮುಖ್ಯವಾಗಿದೆ. ಈ ಉರಿ ಬಿಸಿಲಲ್ಲಿ ತೆರಿಗೆ ಪಾವತಿಸಲು ಬರುವವರು ಅನಾನುಕೂಲ ಆಗಬಾರದೆಂದು ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ.

ಮಹಾಂತೇಶ ಮ್ಯಾಗೇರಿ, ಕಂದಾಯ ಅಧಿಕಾರಿ, ವಲಯ-4

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಗಡಿಯಲ್ಲಿ ಸಂಭ್ರಮದ ಶೇಷಾಚಲ ಸದ್ಗುರುಗಳ ರಥೋತ್ಸವ
ರಾಜ್ಯಪಾಲರ ಕರ್ನಾಟಕ ವಿರೋಧಿ ಧೋರಣೆ ಖಂಡಿಸಿ ಕರವೇ ಪ್ರತಿಭಟನೆ