ಧಾರವಾಡ ಕೆಎಂಎಫ್‌ಗೆ ಶಂಕರ ಮುಗದ ಬಾಸ್‌

KannadaprabhaNewsNetwork | Published : Jul 13, 2024 1:31 AM

ಸಾರಾಂಶ

ಒಕ್ಕೂಟದ 9 ಜನ ನಿರ್ದೇಶಕರು ಸೇರಿ ಒಟ್ಟು 14 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಶಂಕರ ಮುಗದ 8 ಮತ ಪಡೆದು ಜಯಶಾಲಿಯಾದರೆ, ಶಿವಲೀಲಾ ಕುಲಕರ್ಣಿ 6 ಮತ ಪಡೆದು ಪರಾಭವಗೊಂಡರು.

ಧಾರವಾಡ:

ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಹೊಂದಿರುವ ಧಾರವಾಡ ಹಾಲು ಒಕ್ಕೂಟ (ದಾಮುಲ್‌- ಕೆಎಂಎಫ್‌​)ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕ ಶಂಕರ ಮುಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ಮುಗದ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಪ್ರತಿಸ್ಪರ್ಧಿ ಶಿವಲೀಲಾ ಕುಲಕರ್ಣಿ (ಶಾಸಕ ವಿನಯ ಕುಲಕರ್ಣಿ ಪತ್ನಿ) 2 ಮತಗಳ ಅಂತರದಿಂದ ಪರಾಭವಗೊಂಡಿದ್ದು, ಕೆಎಂಎಫ್‌ ಅಧಿಕಾರದ ಗದ್ದುಗೆ ಕಸಿದುಕೊಳ್ಳಲು ಮುಂದಾಗಿದ್ದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ನಿರ್ದೇಶಕರಾದ ಶಂಕರ ಮುಗದ, ಗೀತಾ ಮರಲಿಂಗಣ್ಣವರ ಹಾಗೂ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಶಿವಲೀಲಾ ಕುಲಕರ್ಣಿ ನಾಮಪತ್ರ ಸಲ್ಲಿಸಿದ್ದರು. ಗೀತಾ ಮರಲಿಂಗಣ್ಣವರ ನಾಮಪತ್ರ ಹಿಂಪಡೆದಿದ್ದರು. ಹೀಗಾಗಿ ಶಂಕರ ಮುಗದ ಹಾಗೂ ಶಿವಲೀಲಾ ಕುಲಕರ್ಣಿ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು.

ಒಕ್ಕೂಟದ 9 ಜನ ನಿರ್ದೇಶಕರು ಸೇರಿ ಒಟ್ಟು 14 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಶಂಕರ ಮುಗದ 8 ಮತ ಪಡೆದು ಜಯಶಾಲಿಯಾದರೆ, ಶಿವಲೀಲಾ ಕುಲಕರ್ಣಿ 6 ಮತ ಪಡೆದು ಪರಾಭವಗೊಂಡರು. ಶಂಕರ ಮುಗದ 2 ಮತಗಳ ಅಂತರದಿಂದ ಜಯಗಳಿಸುವ ಮೂಲಕ 3ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.

ಧಾರವಾಡ, ಉತ್ತರ ಕನ್ನಡ, ಗದಗ ಜಿಲ್ಲಾ ವ್ಯಾಪ್ತಿಯ ಹಾಲು ಒಕ್ಕೂಟದ ಒಟ್ಟು 9 ನಿರ್ದೇಶಕ ಸ್ಥಾನಕ್ಕೆ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ ಎಂಟು ಜನ ನಿರ್ದೇಶಕರು ಜೂ. 30ರಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. 9 ಜನರಲ್ಲಿ ಏಳು ಜನ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರೆ, ಇಬ್ಬರು ಮಾತ್ರ ಕಾಂಗ್ರೆಸ್‌ ಬೆಂಬಲಿತ ಸದಸ್ಯರಾಗಿದ್ದರು.

ಈ ನಡುವೆ ಎರಡು ದಿನಗಳ ಮುಂಚೆಯಷ್ಟೇ ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಸರ್ಕಾರ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ಆದೇಶಿಸಿತ್ತು. ಇದರಿಂದ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರ ಸಂಖ್ಯೆ 3ಕ್ಕೆ ಏರಿತ್ತು. ಈ ನಡುವೆ ಚುನಾಯಿತ 9 ನಿರ್ದೇಶಕರಲ್ಲದೇ, ನಾಮನಿರ್ದೇಶಿತ ಒಬ್ಬ ನಿರ್ದೇಶಕರು, ನಾಲ್ವರು ಅಧಿಕಾರಿಗಳು ಸೇರಿದಂತೆ 14 ಜನ ಮತ ಹಾಕಬೇಕಿತ್ತು.

ಈ ನಡುವೆ ಸ್ವಂತ ಡೈರಿ ಹೊಂದಿರುವ ಶಿವಲೀಲಾ ಕುಲಕರ್ಣಿ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಿದ್ದು ತಪ್ಪು ಎಂದು ಮುಗದ ಹೈಕೋರ್ಟ್‌ಗೆ ಕೂಡ ಹೋಗಿರುವುದುಂಟು. ಅದು ಕೂಡ ಮುಂದಿನವಾರ ವಿಚಾರಣೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಕೆಎಂಎಫ್‌ ಅಧ್ಯಕ್ಷಗಾದಿ ಏರಬೇಕೆಂದು ಶತ ಪ್ರಯತ್ನ ನಡೆಸಿದ್ದ ಕಾಂಗ್ರೆಸ್‌ ವಿಫಲವಾದಂತಾಗಿದೆ. 2 ಮತಗಳ ಅಂತರದಿಂದ ಶಿವಲೀಲಾ ಕುಲಕರ್ಣಿ ಪರಾಭವಗೊಂಡರು.ಬೆಂಬಲಿಗರ ವಿಜಯೋತ್ಸವ:

ಶಂಕರ ಮುಗದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಘೋಷಣೆ ಆಗುತ್ತಿದ್ದಂತೆ ಬೆಂಬಲಿಗರು ಘೋಷಣೆ ಮೊಳಗಿಸಿದರು. ಒಕ್ಕೂಟದ ಆವರಣದಲ್ಲೇ ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಶಂಕರ ಮುಗದ ಚುನಾವಣೆ ಪ್ರಕ್ರಿಯೆ ರ್ಪೂಣಗೊಳಿಸಿ ಆಗಮಿಸುತ್ತಿದ್ದಂತೆ ಅವರನ್ನು ಹೆಗಲ ಮೇಲೆ ಹೊತ್ತ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.ಗಣನೆಗೆ ಬಾರದ ಅರ್ಜಿ:

ನೂತನ ಅಧ್ಯಕ್ಷ ಶಂಕರ ಮುಗದ ಪ್ರತಿನಿಧಿಸುವ ಶಿವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 30(1)ರ ಅನ್ವಯ ರದ್ದುಗೊಳಿಸಲಾಗಿದೆ. ಹೀಗಾಗಿ ಶಂಕರ ಮುಗದ ಸ್ಪರ್ಧೆ ಹಾಗೂ ಚುನಾವಣೆ ಫಲಿತಾಂಶ ಘೋಷಣೆ ರದ್ದು ಮಾಡುವಂತೆ ಚುನಾವಣಾಧಿಕಾರಿಗೆ ಶಿವಲೀಲಾ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಆದರೆ ನಾಮಪತ್ರಗಳ ಪರಿಶೀಲನೆ ಅವಧಿ ಮುಗಿದ ಬಳಿಕ ಅರ್ಜಿ ಸಲ್ಲಿಸಿದ್ದರಿಂದ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಚುನಾವಣಾಧಿಕಾರಿಯೂ ಆಗಿರುವ ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ ತಿಳಿಸಿದರು.

ರೈತರು, ಗ್ರಾಹಕರು, ಕಾರ್ಮಿಕ ವರ್ಗ ಹಾಗೂ ಸಿಬ್ಬಂದಿ ಅಭಿವೃದ್ಧಿಯೇ ಮೊದಲ ಆದ್ಯತೆ. ನನ್ನ ಈ ಅವಧಿಯಲ್ಲಿ ಕೆಎಂಎಫ್​ ಒಂದು ರೀತಿ ಎಂಎನ್​ಸಿ ಕಂಪನಿ ತರಹ ಕಾರ್ಯ ನಿರ್ವಹಿಸಲಿದೆ. ಕೇಂದ್ರ ಸರ್ಕಾರದಿಂದ 3 ಜಿಲ್ಲೆಗಳಿಗೂ ವಿಶೇಷ ಅನುದಾನ ತರುವ ಮೂಲಕ ರೈತರಿಗೆ ಆಕಳು ಕೊಡಿಸುವ , ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ನೀಡುವ ಯೋಜನೆ ಇದೆ. ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಹಾಲು ಒಕ್ಕೂಟಗಳಿಗೆ 1075 ಕೋಟಿ ರೂ. ಬಾಕಿ ಹಣ ಬರಬೇಕಿದೆ. ಇದನ್ನು ತರಲಾಗುವುದು ಎಂದು ಧಾರವಾಡ ಹಾಲು ಒಕ್ಕೂಟದ ನೂತನ ಅಧ್ಯಕ್ಷ ಶಂಕರ ಮುಗದ ಹೇಳಿದರು.

Share this article