ಸಿದ್ದಾಪುರ: ಸನಾತನ ಧರ್ಮದ ಸಂರಕ್ಷಣೆಗಾಗಿ ವೇದೋಕ್ತವಾದ ಭಗವಂತನ ಅವತಾರ ಶಂಕರ ಭಗವತ್ಪಾದರು. ಶಂಕರಾಚಾರ್ಯರು ಸಾಕ್ಷಾತ್ ಪರಮೇಶ್ವರನ ಅವತಾರ ಎಂದು ಶಕಟಪುರದ ವಿದ್ಯಾಪೀಠಾಧೀಶ್ವರ ಬದರಿ ವಿದ್ಯಾಭಿನವ ಕೃಷ್ಣಾನಂದತೀರ್ಥರು ನುಡಿದರು.ಅವರು ತಾಲೂಕಿನ ರಾಮದೇವ ಭಾನ್ಕುಳಿಮಠದಲ್ಲಿ ಶ್ರೀರಾಮಚಂದ್ರಾಪುರ ಮಠಾಧೀಶರಾದ ರಾಘವೇಶ್ವರ ಶ್ರೀ ನೇತೃತ್ವದಲ್ಲಿ ನಡೆಯುತ್ತಿರುವ ಶಂಕರಪಂಚಮಿ ಉತ್ಸವದ ಮೂರನೇ ದಿನ ಜರುಗಿದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜಗದ್ಗುರು ಎನ್ನುವ ಹೆಸರಿಗೆ ಅರ್ಹರಾದ ಶಂಕರರು ಸನಾತನ ಧರ್ಮವನ್ನು ಕಾಪಾಡಿದವರು. ಸನಾತನ ಧರ್ಮ ಪ್ರಚಾರದ ಜೊತೆಗೆ ಎಲ್ಲ ದೇವತೆಗಳನ್ನು ಒಟ್ಟಾಗಿಯೇ ಪೂಜಿಸುವ ಪಂಚಾಯತನ ಪೂಜಾ ಕಲ್ಪನೆಯ ಜೊತೆಗೆ ಯತಿಗಳೆಲ್ಲ ಸಮಾನರು ಎನ್ನುವದನ್ನು ಸೂಚಿಸಿದರು. ಇದು ನಿಜವಾದ ಅದ್ವೈತ. ಕೇವಲ ಉಪದೇಶ ನೀಡದೇ ಆಚರಣೆಯಲ್ಲೂ ತಂದವರು ಶಂಕರರ ಉಪದೇಶಗಳನ್ನು ಅಚ್ಚುಕಟ್ಟಾಗಿ ಅನುಸರಿಸುವುದೇ ಅವರಿಗೆ ಸಲ್ಲಿಸುವ ಗೌರವ. ಶಂಕರರ ತತ್ವಗಳನ್ನು ಈ ಉತ್ಸವದಲ್ಲಿ ಒಳಗೊಂಡಿರುವದು ಮಾದರಿಯಾದದ್ದು ಎಂದರು.
ಈ ಸಂದರ್ಭದಲ್ಲಿ ರಾಘವೇಶ್ವರ ಶ್ರೀ ಶಕಟಪುರದ ಮಠಕ್ಕೆ ಓಂಗೋಲ್ ತಳಿಯ ಹಸು ನೀಡಿದರು. ಚಿತ್ರರಚನೆಕಾರ ನಿರ್ನಳ್ಳಿ ಗಣಪತಿ ಚಿತ್ರಿಸಿದ ಶ್ರೀಮಠದ ಪರಂಪರೆಯ ಅಷ್ಟಮ ರಾಘವೇಶ್ವರ ಶ್ರೀಗಳ ಚಿತ್ರವನ್ನು ಶಕಟಪುರದ ಶ್ರೀ ಅನಾವರಣಗೊಳಿಸಿದರು.
ರಾಘವೇಶ್ವರ ಶ್ರೀ ಮುಂದಿನ ಒಂದು ವರ್ಷ ಕಾಲ ೯ ಶ್ಲೋಕಗಳಿರುವ ಶ್ರೀಪಾದುಕಾ ಸ್ತೋತ್ರವನ್ನು ಒಂದೂವರೆ ಕೋಟಿ ಪಠಣ ಮಾಡಲು ಮಾತೆಯರಿಗೆ ಗುರಿಯಾಗಿ ನೀಡಿದರು.ಶಂಕರಪಂಚಮಿ ಉತ್ಸವ ಸಮಿತಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ದಂಪತಿಗಳು ಸಭಾಪೂಜೆ ನೆರವೇರಿಸಿದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಜಿ.ಕೆ. ಹೆಗಡೆ ಗೋಳಗೋಡ ಪ್ರಾಸ್ತಾವಿಕ ಮಾತನಾಡಿದರು. ರವೀಂದ್ರಭಟ್ ಸೂರಿ ನಿರೂಪಿಸಿದರು.
ಸಿದ್ದಾಪುರ ತಾಲೂಕಿನ ಭಾನ್ಕುಳಿಮಠದಲ್ಲಿ ಜರುಗಿದ ಶಂಕರಪಂಚಮಿ ಉತ್ಸವದ ಸಂದರ್ಭದಲ್ಲಿ ರಾಘವೇಶ್ವರ ಶ್ರೀ ಶಕಟಪುರದ ಶ್ರೀಮಠಕ್ಕೆ ಹಸು ನೀಡಿದರು.