ಗೋವಾದಲ್ಲಿನ ಕನ್ನಡ ಶಾಲೆ ಉಳಿಸಲು ಶಾಂತಲಿಂಗ ಶ್ರೀ ಆಗ್ರಹ

KannadaprabhaNewsNetwork |  
Published : Jul 02, 2026, 02:30 AM IST
ಶಾಂತಲಿಂಗ ಶ್ರೀಗಳು ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಗೋವಾ ಮುಖ್ಯಮಂತ್ರಿಗಳು ಬದಲಾದ ಶಿಕ್ಷಣ ನೀತಿಗೆ ಹೊಂದಿಕೊಳ್ಳಬೇಕೆಂಬ ಭಯಾನಕ ಹೇಳಿಕೆ ಆಘಾತಕಾರಿಯಾಗಿದೆ. ಆದ್ದರಿಂದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಗೋವಾ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು, ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು.

ನರಗುಂದ: ರಾಷ್ಟ್ರೀಯ ಶಿಕ್ಷಣ ನೀತಿಯ ನೆಪದಲ್ಲಿ ಗೋವಾದಲ್ಲಿ 4 ಶಾಲೆಗಳನ್ನು ಮುಚ್ಚಿದ್ದು,17 ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಲ್ಲದೆ, ಕನ್ನಡ ಕಲಿಕೆಗೆ ಕೊಡಲಿಪೆಟ್ಟು ಬಿದ್ದಿದೆ. ಕರ್ನಾಟಕ ಸರ್ಕಾರವು ತಕ್ಷಣ ಗೋವಾದಲ್ಲಿನ ಕನ್ನಡ ಶಾಲೆಗಳನ್ನು ಉಳಿಸಲು ಮುಂದಾಗಬೇಕೆಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಆಗ್ರಹಿಸಿದರು.

ಬುಧವಾರ ಪಟ್ಟಣ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಗೋವಾ ಮುಖ್ಯಮಂತ್ರಿಗಳು ಬದಲಾದ ಶಿಕ್ಷಣ ನೀತಿಗೆ ಹೊಂದಿಕೊಳ್ಳಬೇಕೆಂಬ ಭಯಾನಕ ಹೇಳಿಕೆ ಆಘಾತಕಾರಿಯಾಗಿದೆ. ಆದ್ದರಿಂದ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಗೋವಾ ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು, ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ಒತ್ತಾಯಿಸಿದರು.

ಸರ್ವೋಚ್ಚ ನ್ಯಾಯಾಲಯವು ಗಡಿ ವಿವಾದ ಬಗೆಹರಿಸುವ ಸುಳಿವು ನೀಡಿರುವಾಗಲೇ ಗೋವಾ ಸರ್ಕಾರ ಕನ್ನಡ ಶಾಲೆಗಳನ್ನು ಬಂದ್ ಮಾಡುವ ಗದ್ದಲಕ್ಕೆ ಕೈಹಾಕಿರುವುದು ಸರಿಯಾದ ಕ್ರಮವಲ್ಲ. ಗೋವಾದಲ್ಲಿ ಸದ್ಯ 4 ಲಕ್ಷಕ್ಕೂ ಹೆಚ್ಚು ಕನ್ನಡಿಗರಿದ್ದಾರೆ. ನಿತ್ಯವೂ ಗೋವಾ ರಾಜ್ಯಕ್ಕೆ ಕರ್ನಾಟಕದಿಂದ ತರಕಾರಿ, ಹಣ್ಣು, ಹಾಲು, ದವಸ ಧಾನ್ಯ ಹೀಗೆ ಹಲವಾರು ವಸ್ತುಗಳು ಹೋಗುತ್ತಿವೆ. ಗೋವಾ ಅಭಿವೃದ್ಧಿಯ ಹಿಂದೆ ಕನ್ನಡಿಗರ ಶ್ರಮ ಸಾಕಷ್ಟಿದೆ. ಗೋವಾ ವಿಮೋಚನೆಗಾಗಿ ಪೋರ್ಚುಗೀಸರ ವಿರುದ್ಧ ಜಗನ್ನಾಥರಾವ್ ಜೋಶಿ ಸೇರಿದಂತೆ ಅನೇಕ ಕನ್ನಡಿಗರು ಹೋರಾಟ ಮಾಡಿದ್ದಾರೆ ಎನ್ನುವುದನ್ನು ಗೋವಾ ಮುಖ್ಯಮಂತ್ರಿಗಳು ಮರೆಯಬಾರದು ಎಂದು ಶ್ರೀಗಳು ಕಿವಿಮಾತು ಹೇಳಿದರು.

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಗೋವಾ ಸರ್ಕಾರದ ನಡೆ ಏಕತೆಯ ವಿರುದ್ಧವಾಗಿದೆ. ವೈವಿಧ್ಯತೆಗೆ ಮೂಲ ಸಹಬಾಳ್ವೆಯ ಮೌಲ್ಯಗಳಿಗೆ ಧಕ್ಕೆಯನ್ನುಂಟು ಮಾಡುವಂತಿದೆ. ಆದ್ದರಿಂದ ಕರ್ನಾಟಕ ಸರ್ಕಾರವು ಕೂಡಲೇ ಬೆಳಗಾವಿ ಸುವರ್ಣ ಸೌಧದಲ್ಲಿ ಗಡಿ ಸಂರಕ್ಷಣಾ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಶ್ರೀಶೈಲ ತಳವಾರ ಅದನ್ನು ಸರ್ಕಾರಕ್ಕೆ ರವಾನೆ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಚನ್ನಬಸಪ್ಪ ಕಂಠಿ, ಚನ್ನು ನಂದಿ, ವೀರಣ್ಣ ಸೊಪ್ಪಿನ, ನಂದೀಶ ಮಠದ, ಎಸ್.ಎಸ್. ಪಾಟೀಲ, ಬಸವರಾಜ ಸಾಬಳೆ, ವಿರುಪಾಕ್ಷಪ್ಪ ಕಂಠಿ, ಶಿವಪ್ಪ ನರಸಾಪೂರ, ಈರಣ್ಣ ಹುರಕಡ್ಲಿ, ವೈ.ಬಿ. ಯಲ್ಲಪ್ಪಗೌಡ್ರ, ಮನೋಹರ ಹುಯಿಲಗೋಳ, ಚನ್ನು ನಂದಿ, ಚೇತನ ಕಾಳೆ, ನಬಿಸಾಬ ಕಿಲೇದಾರ, ಶಿಕ್ಷಕ ಮಹಾಂತೇಶ ಹಿರೇಮಠ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವಿಭಾಷಾ ಮಾಧ್ಯಮ ಜಾರಿ ಮುನ್ನ ಚರ್ಚೆ ಆಗಲಿ
ಅಂಜುಮನ್ ತಾಂತ್ರಿಕ ಕಾಲೇಜಿನಲ್ಲಿ ಪದವಿ ಪ್ರದಾನ