- ಕಾರ್ಯಕರ್ತರು, ಅಭಿಮಾನಿಗಳ ಆಕ್ರೋಶ । ಗೊಲ್ಲರಹಳ್ಳಿ ಬಳಿ ರಸ್ತೆ ತಡೆದು ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹಿರಿಯ ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಮಂಗಳವಾರ ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿ ಬಳಗ ಹರಿಹರ- ಹೊನ್ನಾಳಿ ಹೆದ್ದಾರಿಯ ಗೊಲ್ಲರಹಳ್ಳಿಯಲ್ಲಿ ರಸ್ತೆ ತಡೆದು ಟೈರ್‌ಗೆ ಬೆಂಕಿಹಚ್ಚಿ ಕೆಲಹೊತ್ತು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ರಸ್ತೆ ತಡೆಗೂ ಮೊದಲು ಶಾಸಕ ಡಿ.ಜಿ.ಶಾಂತನಗೌಡ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಗೊಲ್ಲರಹಳ್ಳಿಯ ಶಂಕರ್ ರೈಸ್ ಮಿಲ್‌ನಲ್ಲಿ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಪ್ರಮುಖರು, ದಾವಣಗೆರೆ ಜಿಲ್ಲೆಗೆ 2 ಸಚಿವ ಸ್ಥಾನ ನೀಡಿರುವುದಕ್ಕೆ ನಮಗೆ ವಿರೋಧ ಇಲ್ಲ. ಈ ಕ್ರಮ ಸ್ವಾಗತಿಸುತ್ತೇವೆ. ಆದರೆ ಶಾಸಕ ಡಿ.ಜಿ.ಶಾಂತನಗೌಡ 3 ಬಾರಿ ಶಾಸಕರಾಗಿದ್ದು, ಪಕ್ಷದಲ್ಲಿ ಹಿರಿಯರಾಗಿದ್ದಾರೆ. ಅವರ ತಂದೆ, ಅಣ್ಣನ ಕಾಲದಿಂದಲ್ಲೂ ರಾಜಕಾರಣ ಮಾಡುತ್ತಿದ್ದಾರೆ. 3 ಬಾರಿ ಶಾಸಕರಾಗಿದ್ದರೂ ಅವರಿಗೆ ಈವರೆವಿಗೂ ಒಮ್ಮೆಯೂ ಸಚಿವ ಸ್ಥಾನ ನೀಡದಿರುವ ಬಗ್ಗೆ ನಮಗೆ ಬೇಸರ ತಂದಿದೆ ಎಂದರು.
ಈಗ ಸಚಿವ ಸ್ಥಾನದ ಕತೆ ಮುಗಿದಿದೆ. ಸರ್ಕಾರ ಈಗಲಾದರೂ ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಸಚಿವ ಸಂಪುಟ ಸ್ಥಾನಮಾನದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನಾದರೂ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದರು.
- - -
ಕ್ಷೇತ್ರ ಪ್ರವಾಸಕ್ಕೆ ತೆರಳುವ ಮೊದಲು ಶಾಸಕ ಶಾಂತನಗೌಡ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದರು. ನಮ್ಮದು ಕಾಂಗ್ರೆಸ್ ಪಕ್ಷ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುತ್ತದೆ. ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಸಚಿವ ಸ್ಥಾನ ಸಿಕ್ಕಿದೆ. ಮುಖ್ಯಮಂತ್ರಿಗಳು ನಮ್ಮ ಕೈ ಬಿಡುವುದಿಲ್ಲ, ಸೂಕ್ತ ಸ್ಥಾನಮಾನ ನೀಡೇ ನೀಡುತ್ತಾರೆ. ಈಗ ಸಮಾಧಾನದಿಂದ ಇರಬೇಕು ಎಂದು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದರು. ಬಳಿಕ ಪ್ರತಿಭಟನೆ ಸ್ಥಗಿತಗೊಂಡಿತು.
-4ಎಚ್.ಎಲ್.ಐ1: ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿ ಬಳಿ ಹೆದ್ದಾರಿ ತಡೆ ನಡೆಸಿ, ಟೈರ್‌ಗೆ ಬೆಂಕಿ ಹಾಕಿ ಪ್ರತಿಭಟಿಸಿದರು.