ಶಾಂತರಸರಿಗೂ ಕೊಪ್ಪಳಕ್ಕೂ ವಿಶೇಷ ನಂಟು

KannadaprabhaNewsNetwork | Published : Apr 11, 2025 12:31 AM

ಸಾರಾಂಶ

ನಮ್ಮ ಹಿಂದಿನವರನ್ನು ನೆನಪಿಸಿಕೊಂಡು ಕೃತಜ್ಞತಾ ಭಾವದಿಂದ ಗೌರವ ಸಲ್ಲಿಸಬೇಕು. ಇದು ನಮ್ಮ ಕರ್ತವ್ಯವು ಹೌದು ಎಂದ ಅವರು, ಹೆಂಬೆರಾಳ ಶಾಂತರಸರಿಗೂ, ಕೊಪ್ಪಳಕ್ಕೂ ವಿಶೇಷ ನಂಟಿದೆ. ಹೀಗಾಗಿ ಈ ಕಾರ್ಯಕ್ರಮ ವಿಶೇಷವಾಗಿದೆ.

ಕೊಪ್ಪಳ:

ಹೋರಾಟದ ಹಾದಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಶಾಂತರಸ ಅವರದ್ದು ದೊಡ್ಡ ಹೆಜ್ಜೆ. ಅವರಿಗೂ ಕೊಪ್ಪಳಕ್ಕೂ ವಿಶೇಷ ನಂಟಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಎ.ಎಂ. ಮದರಿ ಹೇಳಿದರು.

ಕವಿ ಸಮೂಹ, ಸಂಸ ಥಿಯೇಟರ್ ಬೆಂಗಳೂರು, ಬಹುತ್ವ ಬಳಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಕಾಲೇಜಿನಲ್ಲಿ ಸೋಮವಾರ ನಡೆದ ಶಾಂತರಸರ ಶತಮಾನೋತ್ಸವ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಹಿಂದಿನವರನ್ನು ನೆನಪಿಸಿಕೊಂಡು ಕೃತಜ್ಞತಾ ಭಾವದಿಂದ ಗೌರವ ಸಲ್ಲಿಸಬೇಕು. ಇದು ನಮ್ಮ ಕರ್ತವ್ಯವು ಹೌದು ಎಂದ ಅವರು, ಹೆಂಬೆರಾಳ ಶಾಂತರಸರಿಗೂ, ಕೊಪ್ಪಳಕ್ಕೂ ವಿಶೇಷ ನಂಟಿದೆ. ಹೀಗಾಗಿ ಈ ಕಾರ್ಯಕ್ರಮ ವಿಶೇಷವಾಗಿದೆ ಎಂದ ಅವರು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿ ಸಂಸ ರಂಗ ಮಂದಿರವಿದೆ. ಅವರು ದೊಡ್ಡ ನಾಟಕಕಾರರು. ಅವರ ಹೆಸರಿನ ಸಂಘಟನೆಯೂ ಸಹ ಈ ಕಾರ್ಯಕ್ರಮದಲ್ಲಿ ಜೊತೆಯಾಗಿರುವುದು ವಿಶೇಷ ಎಂದರು.

ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕೊಪ್ಪಳಕ್ಕೆ ಬರಲಿರುವ ಕಾರ್ಖಾನೆಗಳ ಬಗ್ಗೆ ವಿದ್ಯಾರ್ಥಿಗಳು, ಜನರು ಎಚ್ಚೆತ್ತುಕೊಳ್ಳಬೇಕು ಎಂದರು.

ಹಿರಿಯ ಸಾಹಿತಿ ಅಕ್ಬರ್ ಸಿ. ಕಾಲಿಮಿರ್ಚಿ, ಶಾಂತರಸರ ಬಾಲ್ಯ, ಶಿಕ್ಷಣ, ವಿದ್ಯಾರ್ಥಿ ಹಂತದಲ್ಲೇ ತುಳಿದ ಹೋರಾಟದ ದಾರಿ, ಸಾಹಿತ್ಯ‌ ಕ್ಷೇತ್ರದಲ್ಲಿ ಅವರ ಸಾಧನೆ, ಬದುಕು ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಗಾಯತ್ರಿ ಭಾವಿಕಟ್ಟಿ, ಶಾಂತರಸರು ಬರೆದ ಉರಿದ ಬದುಕು, ಸಣ್ಣ ಗೌಡಶಾನಿ, ನಾಯಿ ಮತ್ತು ಪಿಂಚಣಿ ಕೃತಿಗಳ ಸಾರವನ್ನು ತಿಳಿಸಿ, ಶಾಂತರಸರ ಕೃತಿಗಳ ಮಹತ್ವ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಡಿ.ಎಚ್. ನಾಯ್ಕ, ವಿದ್ಯಾರ್ಥಿಗಳು ಸಹ ಇಂಥ ಕಾರ್ಯಕ್ರಮಗಳಿಂದ ಸಾಧಕರ ಬದುಕು ಅರಿತು, ಪ್ರೇರಣೆ ಪಡೆದು, ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಸಹ ಪ್ರಾಧ್ಯಾಪಕಿ ಡಾ. ಭಾಗ್ಯಜ್ಯೋತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಂದಾರ, ಹಿರಿಯ ಚಿಂತಕ ರವಿ ಕಾಂತನವರ, ರಂಗಭೂಮಿ ಕಲಾವಿದ ಮಲ್ಲಪ್ಪ ಕುರಿ, ಬಹುತ್ವ ಬಳಗದ ಎಚ್.ವಿ. ರಾಜಾಭಕ್ಷಿ, ಚುಟುಕು ಕವಿ ಶಿವಪ್ರಸಾದ ಹಾದಿಮನಿ, ಬೋಧಕ ಸಿಬ್ಬಂದಿ ಡಾ. ಪ್ರಕಾಶ ಬಳ್ಳಾರಿ, ಡಾ. ಬೋರೇಶ ಇ., ಎಂ. ಶಿವಣ್ಣ, ಬಸವರಾಜ ಕರುಗಲ್, ಉಮೇಶ ಅಂಗಡಿ ಇದ್ದರು.

ಗಜಲ್ ವಾಚನ:

ಕಾಲೇಜಿನ ಬಿಎ ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ಪೃಥ್ವಿ, ಶ್ರವಣಕುಮಾರ್ ಹಾಗೂ ಆರನೇ ಸೆಮಿಸ್ಟರ್‌ನ ಶ್ರೀದೇವಿ, ಚೈತ್ರಾ, ಮಂಜುಳಾ ಗಜಲ್ ವಾಚಿಸಿ ಗಮನ ಸೆಳೆದರು.

ಸನ್ಮಾನ:

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಲ್ಲಮಪ್ರಭು ಬೆಟ್ಟದೂರು, ಎ.ಎಂ. ಮದರಿ, ಪ್ರಸಕ್ತ ಸಾಲಿನಲ್ಲಿ ಪಿಎಚ್‌.ಡಿ ಪದವಿ ಪಡೆದ ಕಾಲೇಜಿನ ಅತಿಥಿ ಉಪನ್ಯಾಸಕರಾದ ಕನ್ನಡ ವಿಭಾಗದ ಡಾ. ಮಹಾಂತೇಶ ಬಿ. ನೆಲಾಗಣಿ, ಇಂಗ್ಲಿಷ್ ವಿಭಾಗದ ಡಾ. ಶಿವಬಸಪ್ಪ ಮಸ್ಕಿ, ಸಮಾಜಶಾಸ್ತ್ರ ವಿಭಾಗದ ಡಾ. ವಿಜಯಕುಮಾರ ಕೆ. ತೋಟದ, ಡಾ. ಪ್ರಕಾಶ ಜಡಿಯವರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

Share this article