ಅಕ್ಟೋಬರ್ 5 ರಿಂದ 13 ರವರೆಗೆ ಶರಣ ಸಂಸ್ಕೃತಿ ಉತ್ಸವ

KannadaprabhaNewsNetwork | Published : Sep 16, 2024 1:56 AM

ಸಾರಾಂಶ

Sharan Culture Festival from 5th to 13th October

-ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮಿ ಮಾಹಿತಿ। ಜಯದೇವ ಶ್ರೀಗಳ ಜಯಂತಿ

----

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಮಧ್ಯ ಕರ್ನಾಟಕದ ದಸರಾ ಉತ್ಸವವೆಂದೇ ಖ್ಯಾತಿ ಪಡೆದ ಮುರುಘಾ ಮಠದ ವತಿಯಿಂದ ಆಚರಿಸಲ್ಪಡುವ ಶರಣ ಸಂಸ್ಕೃತಿ ಉತ್ಸವ ಅಕ್ಟೋಬರ್ 5 ರಿಂದ 13 ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಈ ಬಾರಿ ಶರಣ ಸಂಸ್ಕೃತಿ ಉತ್ಸವವನ್ನು ಲಿಂಗೈಕ್ಯ ಜಗದ್ಗುರು ಜಯದೇವ ಶ್ರೀಗಳ 150 ನೇ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸೆಪ್ಟಂಬರ್ 25 ರಿಂದ ಅಕ್ಟೋಬರ್ 4 ರವರೆಗೆ ಶರಣ ಸಂಸ್ಕೃತಿ ಉತ್ಸವ ಪೂರ್ವಭಾವಿಯಾಗಿ ಖ್ಯಾತ ಯೋಗ ಗುರು ಚೆನ್ನಬಸವಣ್ಣ ಅವರಿಂದ ಉತ್ತಮ ಆರೋಗ್ಯಕ್ಕಾಗಿ ಯೋಗ ಮತ್ತು ಶಿವಯೋಗವನ್ನು ಏರ್ಪಡಿಸಲಾಗಿದೆ. ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ಹೊನಲು-ಬೆಳಕಿನ ಜಯದೇವ ಕಪ್ ಕ್ರೀಡಾಕೂಟಕ್ಕೆ ಅಕ್ಟೋಬರ್ ಒಂದರಂದು ಮುಂಜಾನೆ ಶ್ರೀಮಠದಿಂದ ಬೈಕ್ ರ‍್ಯಾಲಿಯೊಂದಿಗೆ ವರ್ಣರಂಜಿತ ವಿದ್ಯುಕ್ತ ಚಾಲನೆ ನೀಡಲಾಗುವುದು ಎಂದರು.

ಶ್ರೀಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಮಾತನಾಡಿ, ಜಯದೇವ ಜಗದ್ಗುರುಗಳ ಹುಟ್ಟೂರಾದ ಬಿನ್ನಾಳದಲ್ಲಿ ಶಿಥಿಲಾವಸ್ಥೆಯಲ್ಲಿರುವ ಪೂಜ್ಯರು ಹುಟ್ಟಿದ ಮನೆಯ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಶ್ರೀಮಠದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂತಹ ಕೆಲಸ, ಕಾರ್ಯಗಳನ್ನು ಜಯದೇವ ಮುರುಘರಾಜೇಂದ್ರ ಮಹಾಸ್ವಾಮೀಜಿ ನಿರ್ವಹಿಸಿದ್ದಾರೆ ಎಂದರು.

ಶ್ರೀಗಳ ಜನ್ಮ ಶತಮಾನೋತ್ಸವವನ್ನು 1975ರಲ್ಲಿ ಚಿತ್ರದುರ್ಗ-ದಾವಣಗೆರೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗಿತ್ತು. ಅಂದಿನ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ ಭಾಗವಹಿಸಿದ್ದು, ವಿಶೇಷವಾಗಿತ್ತು. ಈ ವರ್ಷ ಶರಣಸಂಸ್ಕೃತಿ ಉತ್ಸವದ ಸಂದರ್ಭದಲ್ಲಿ ಇಂತಹ ಮಹಾನ್ ಚೇತನ, ಪುಣ್ಯ ಪುರುಷರ ನೂರೈವತ್ತನೇ ಜಯಂತ್ಯುತ್ಸವ ಆಚರಿಸುವ ಸೌಭಾಗ್ಯ ದೊರಕಿರುವುದು ವಿಶೇಷ ಎಂದು ಭಾವಿಸಲಾಗಿದೆ ಎಂದರು.

ಅಕ್ಟೋಬರ್ 8 ರಂದು ಕೃಷಿ ಮತ್ತು ಕೈಗಾರಿಕೆ ಮೇಳ ಮತ್ತು ಪ್ರದರ್ಶನ ಇದ್ದು, ಸಚಿವರಾದ ರಾಮಲಿಂಗಾರೆಡ್ಡಿ, ಎನ್.ಚೆಲುವರಾಯಸ್ವಾಮಿ, ಶರಣಬಸಪ್ಪ ದರ್ಶನಾಪೂರ, ಹೆಚ್.ಕೆ. ಪಾಟೀಲ್, ಎಸ್.ಎಸ್ ಮಲ್ಲಿಕಾರ್ಜುನ್ ಭಾಗವಹಿಸುವರು.ಅ. 8, 9, 10 ರಂದು ಪ್ರತಿದಿನ ಬೆಳಗ್ಗೆ 10-30 ಗಂಟೆಗೆ ಮತ್ತು ಸಂಜೆ 6 ಗಂಟೆಗೆ ಜಯದೇವ ಜಗದ್ಗುರುಗಳ 150 ನೇ ಜಯಂತ್ಯುತ್ಸವ ನಿಮಿತ್ತ ವಿಚಾರ ಸಂಕಿರಣಗಳು ನಡೆಯಲಿವೆ.

ತುಮಕೂರಿನ ಸಿದ್ಧಲಿಂಗ ಮಹಾಸ್ವಾಮಿಗಳು, ನಿಡಸೂಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು, ಗದುಗಿನ ಡಾ.ತೋಂಟದ ಸಿದ್ಧರಾಮ ಸ್ವಾಮಿ, ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟದೇವರು, ಬೇಲಿಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು, ನಿಡುಮಾಮಿಡಿ ಮಠದ ಡಾ.ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ವಿ.ಸೋಮಣ್ಣ ಮೊದಲಾದವರು ಪಾಲ್ಗೊಳ್ಳುವರು ಎಂದರು. ಡಾ. ಬಸವಕುಮಾರ ಸ್ವಾಮಿಗಳು, ಡಾ.ಬಸವಪ್ರಭು ಸ್ವಾಮಿಗಳು, ಮಾದಾರಶ್ರೀ, ಕೆ.ಎಂ.ವೀರೇಶ್, ಟಿ.ಎಸ್.ಎನ್ ಜಯಣ್ಣ, ಕಲ್ಲೇಶಯ್ಯ, ಸುರೇಶ್‌ಬಾಬು, ಡಿ.ಎಸ್. ಮಲ್ಲಿಕಾರ್ಜುನ್, ಮಹಡಿ ಶಿವಮೂರ್ತಿ, ಹೆಚ್.ಸಿ. ನಿರಂಜನಮೂರ್ತಿ, ರುದ್ರಾಣಿ ಗಂಗಾಧರ್, ದೇವಿಕುಮಾರಿ ವಿಶ್ವನಾಥ್, ಮೋಕ್ಷ ರುದ್ರಸ್ವಾಮಿ, ಲತಾ ಉಮೇಶ್, ರುದ್ರಪ್ಪ, ಕೃಷ್ಣಪ್ಪ, ಶ್ರೀನಿವಾಸ್, ಉಮೇಶ್, ಬಸವರಾಜ ಕಟ್ಟಿ, ಎನ್.ತಿಪ್ಪಣ್ಣ, ಪಿ.ವೀರೇಂದ್ರಕುಮಾರ್, ಶಶಿಧರ ಬಾಬು, ಕಣಿವೆಮಾರಮ್ಮ ತಿಪ್ಪೇಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

---------------

ಪೋಟೋ ಕ್ಯಾಪ್ಸನ್

ಶರಣ ಸಂಸ್ಕೃತಿ ಉತ್ಸವ ಕುರಿತಂತೆಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮಿಗಳು ಮಾಹಿತಿ ನೀಡಿದರು.

--------

ಪೋಟೋ ಫೈ ಲ್ ನೇಮ್- 15 ಸಿಟಿಡಿ1

Share this article