ಅಂತಾರಾಷ್ಟ್ರೀಯ ಮಹಿಳಾ ದಿನ । ಪೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮ
12ನೇ ಶತಮಾನವು ಸುವರ್ಣ ಯುಗವಾಗಿದ್ದು ಆಗಿನ ಶರಣರು ಮಹಿಳೆಯರಿಗೆ ಪ್ರಥಮ ಆದ್ಯತೆಯನ್ನು ಕೊಡುತ್ತ ಗೌರವಿಸುತ್ತಿದ್ದ ಕಾಲವಾಗಿತ್ತು. ಇಂತಹ ಸಮಾನತೆಯನ್ನು ತಂದ ಶರಣ ಪರಂಪರೆಗೆ ಸಮಾನತೆಯನ್ನು ನೀಡಿದ ಕೀರ್ತಿ ಸಲ್ಲುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮಹಿಳೆಗೆ ಉತ್ತಮವಾದ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿದಾಗ ಕುಟುಂಬದ ನಿರ್ವಹಣೆಯ ಜತೆಯಲ್ಲಿ ಸಮಾಜದ ಸುಧಾರಣೆಯಲ್ಲಿ ಸಹಕಾರಿಯಾಗುವ ಜತೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯು ಯಶಸ್ಸು ಪಡೆಯುತ್ತಾಳೆ ಎಂದು ಹೇಳುತ್ತ, ಮಹಿಳೆಯು ನಂಬಿಕೆ ಮತ್ತು ಪ್ರಮಾಣಿಕತೆಗೆ ನ್ಯಾಯ ಒದಗಿಸಿದರೆ ಪುರುಷನಾದವನು ಉದಾಸೀನತೆಯಿಂದ ತನ್ನ ಅಸ್ತಿತ್ವದಲ್ಲಿ ಹಿಂದೆ ಉಳಿದಿರುತ್ತಾನೆ ಎಂದು ಹೇಳಿದರು.
ಕಾಲೇಜಿನ ಪ್ರಾಧ್ಯಾಪಕಿ ಟಿ.ಬಿ.ಜ್ಯೋತಿ ಮಾತನಾಡಿ, ಹೆಣ್ಣೋಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾನ್ನುಡಿಯಂತೆ ಹೆಣ್ಣುಮಕ್ಕಳು ಎಂದು ತಾತ್ಸಾರ ಮಾಡದೆ ಗಂಡಿಗೆ ಸಮನಾಂತರವಾಗಿ ಶಿಕ್ಷಣವನ್ನು ನೀಡಿದಾಗ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ಸನ್ನು ಸಾಧಿಸುತ್ತ ಮುನ್ನಡೆಯುತ್ತಾಳೆ. ಇದಕ್ಕೆ ಪೋಷಕರ ಮತ್ತು ಕುಟುಂಬದವರ ಸಹಕಾರ ನೀಡಬೇಕು ಎಂದರು.