ಕನ್ನಡಪ್ರಭ ವಾರ್ತೆ, ಭದ್ರಾವತಿ
ತಾಲೂಕು ಆಡಳಿತ ಮತ್ತು ಭೋವಿ ಜನಾಂಗದ ಅಭಿವೃದ್ಧಿ ಸಂಘ ವತಿಯಿಂದ ಬುಧವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಯೋಗಿ ಕಾಯಕಯೋಗಿ ಸಿದ್ದರಾಮೇಶ್ವರರ 851ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಸಿದ್ದರಾಮೇಶ್ವರರು 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪದಲ್ಲಿನ ವಚನಗಾರರ ಪೈಕಿ ಒಬ್ಬರಾಗಿದ್ದರು. ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದ ವಡ್ಡ ಸಮುದಾಯದ ಪರವಾಗಿ ತಮ್ಮ ನಿಲುವುಗಳನ್ನು ಸಮಾಜಕ್ಕೆ ತಿಳಿಯಪಡಿಸಿದ್ದರು. ಅಲ್ಲದೆ, ಎಲ್ಲ ಸಮುದಾಯಗಳಿಗೂ ಮಾರ್ಗದರ್ಶಕರಾಗಿದ್ದರು. ಹಲವಾರು ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಇಂಥ ಮಹಾನ್ ವ್ಯಕ್ತಿಯ ಆದರ್ಶತನ, ಚಿಂತನೆಗಳನ್ನು ಸ್ವಲ್ಪಮಟ್ಟಿಗಾದರೂ ಮೈಗೂಡಿಸಿಕೊಳ್ಳಬೇಕಾಗಿದೆ. ಶೋಷಣೆಗೆ ಒಳಗಾಗಿರುವ ಎಲ್ಲ ಸಮುದಾಯಗಳು ಸಹ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್ ಮಾತನಾಡಿ, ಆದರ್ಶ ವ್ಯಕ್ತಿಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಚರಿಸಬಾರದು. ಇದನ್ನು ಆಯಾ ಸಮಾಜದವರು ಹಾಗೂ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಳ್ಳುವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅರ್ಥ ಮಾಡಿಕೊಳ್ಳಬೇಕು. ಆದರ್ಶ ವ್ಯಕ್ತಿಗಳ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ಆ ಕಾರ್ಯಕ್ರಮಗಳು ಸಾರ್ಥಕಗೊಳ್ಳುತ್ತವೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿದ್ದಬಸಪ್ಪ ಇನ್ನಿತರರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ ಸ್ವಾಗತಿಸಿದರು. ಸುಮತಿ ಕಾರಂತ್ ತಂಡದಿಂದ ನಾಡಗೀತೆ, ಪ್ರಾರ್ಥನೆ ನಡೆಯಿತು. ಎಸ್.ಕೆ ಮೋಹನ್ ನಿರೂಪಿಸಿದರು.
ಭದ್ರಾವತಿ ತಾಪಂ ಆವರಣದಲ್ಲಿ ಬುಧವಾರ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಗಣ್ಯರು ಪಾಲ್ಗೊಂಡಿದ್ದರು.