ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ದೇಶಾದ್ಯಂತ ಐದು ಲಕ್ಷ ಗ್ರಾಮ ಹಾಗೂ ನಗರಗಳ ಮನೆ ಮನೆಗೆ ಮಂತ್ರಾಕ್ಷತೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಗುಳೇದಗುಡ್ಡ ತಾಲೂಕಿನಾದ್ಯಂತ ನಮ್ಮ ಕಾರ್ಯಕರ್ತರು ಪ್ರತಿಮನೆ ಮನೆಗೂ ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆ ನೀಡಿ, ಪ್ರಭು ಶ್ರೀರಾಮನ ದರ್ಶನಕ್ಕೆ ಆಹ್ವಾನಿಸಲಾಗಿದೆ ಎಂದು ವಿಶ್ವಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವು ಮೇಲ್ನಾಡ ಹೇಳಿದರು.ವಿಶ್ವಹಿಂದು ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಂಕೀರ್ತನ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ, ಜ.22ರಂದು ಎಲ್ಲರೂ ದೇವಸ್ಥಾನಗಳಲ್ಲಿ ಸೇರಿ ಶ್ರೀರಾಮನ ಭಜನೆ, ಮಹಾಮಂಗಳಾರತಿ ಮಾಡುವ ಮೂಲಕ ನಮ್ಮ ನಮ್ಮ ಊರುಗಳಲ್ಲಿ ಶ್ರೀರಾಮನ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸೋಣ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಹಿಂದು ಅಯೋಧ್ಯೆಗೆ ಹೋಗಿ ಪ್ರಭು ಶ್ರೀರಾಮನ ದರ್ಶನ ಪಡೆಯುವಂತಾಗಲಿ ಎಂದರು.
ವಿವೇಕಾನಂದ ದೇವಂಗಮಠ ಮಾತನಾಡಿ, 1992ರಲ್ಲಿ ಬಾಗಲಕೋಟೆಯಿಂದ 20 ಜನ ಕರಸೇವಕರು ಅಯೋಧ್ಯಗೆ ಹೋಗಿದ್ದರು. ಆ ಪೈಕಿ ಗುಳೇದಗುಡ್ಡ ಪಟ್ಟಣದ ಘನಶ್ಯಾಮದಾಸ ಮುಂದಡಾ ಹಾಗೂ ದೇವೇಂದ್ರಪ್ಪ ಗಾಯದ ಪಾಲ್ಗೊಂಡಿದ್ದು ನಮಗೆ ಹೆಮ್ಮೆಯ ಸಂಗತಿ. ಘನಶ್ಯಾಮದಾಸ ಅವರು ಇಂದು ನಮ್ಮೊಂದಿಗಿಲ್ಲ. ಅವರ ಕಾರ್ಯವನ್ನು ಸ್ಮರಣೆ ಮಾಡುತ್ತೇವೆ. ಈಗ ನಮ್ಮೊಡನಿರುವ ಕರಸೇವಕ ದೇವೇಂದ್ರಪ್ಪ ಗಾಯದ ಅವರನ್ನು ಸನ್ಮಾನಿಸುತ್ತೇವೆ ಎಂದರು.ಸಂಕೀರ್ತನ ಯಾತ್ರೆ ಗಣೇಶ ದೇವಸ್ಥಾನದಿಂದ ಪ್ರಾರಂಭಗೊಂಡು ನಡುವಿನಪೇಟೆ, ಪವಾರಕ್ರಾಸ್, ಮೂಕೇಶ್ವರಿ ದೇವಸ್ಥಾನ, ದಾನಮ್ಮ ದೇವಸ್ಥಾನದ ಮೂಲಕ ಹಾಯ್ದು ಶ್ರೀ ಬನಶಂಕರಿ ದೇವಸ್ಥಾನ ತಲುಪಿತು. ಈ ಸಂದರ್ಭದಲ್ಲಿ ಶಂಕ್ರಪ್ಪ ರೂಡಗಿ, ಪೋಲಿಸಪ್ಪ ರಾಮದುರ್ಗ, ಶಂಕ್ರಪ್ಪ ಶಿರೂರ, ಪ್ರಕಾಶ ಹಾನಾಪೂರ, ಮೇಘರಾಜ ಮುಳಗುಂದ, ಗೋಪಾಲ ಧೂಪದ, ಹನಮಂತ ರೂಢಗಿ, ನಾಗಪ್ಪ ರಂಜಣಗಿ, ಮುತ್ತು ಅಚನೂರ ಸೇರಿದಂತೆ ಇತರರು ಇದ್ದರು.