ಒಗ್ಗಿದ ಸಮಾಜದಲ್ಲಿ ವಿದ್ಯಾರ್ಥಿಗಳು ಭವಿಷ್ಯದ ರೂವಾರಿಗಳಾಗಿ: ನ್ಯಾ. ದಯಾನಂದ ಎಂ. ಬೇಲೂರೆ

KannadaprabhaNewsNetwork | Published : Jan 18, 2024 2:05 AM

ಸಾರಾಂಶ

ರಾಯಚೂರಿನ ಕೆಇಬಿ ಕಾಲೋನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಯುವ ದಿನ ಮತ್ತು ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ವಿದ್ಯಾರ್ಥಿಗಳು ಉನ್ನತ ಮಟ್ಟದ ವಿದ್ಯಾಭ್ಯಾಸದ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಜಡ್ಡುಗಟ್ಟಿದ ಸಮಾಜದಲ್ಲಿ ಸ್ವಾರ್ಥ ತುಂಬಿದೆ. ಕಚ್ಚಾಟ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಇದರ ಮಧ್ಯೆ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ರೂವಾರಿಗಳು ತಾವೇ ಆಗಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಯಾನಂದ ಎಂ.ಬೇಲೂರೆ ತಿಳಿಸಿದರು.

ಸ್ಥಳೀಯ ಕೆಇಬಿ ಕಾಲೋನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾದ ‘ರಾಷ್ಟ್ರೀಯ ಯುವ ದಿನ’ ಮತ್ತು ‘ಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆ’ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದ ಆಶಯದಂತೆ ನಮ್ಮ ದೇಶ ಧರ್ಮ ನಿರಪೇಕ್ಷಿತ ರಾಷ್ಟ್ರವಾಗಿದ್ದು, ಯಾವುದೇ ಧರ್ಮ ಮೇಲಲ್ಲ, ಯಾವುದೇ ಧರ್ಮ ಕೀಳಲ್ಲ. ತಮ್ಮ ಮನಸ್ಸಿಗೆ ಇಷ್ಟವಾದ ಧರ್ಮ ಗ್ರಂಥ ಓದಬಹುದು. ಆಚರಣೆಗಳನ್ನು ಅನುಸರಿಸಬಹುದು. ಆದರೆ ಯಾವುದೇ ಧರ್ಮವನ್ನು ಟೀಕೆ ಮಾಡುವ ಹಕ್ಕು ಯಾರಿಗಿಲ್ಲ. ನಮ್ಮ ಸಂವಿಧಾನ ಸರ್ವಧರ್ಮ ಸಮಭಾವ ಅಂಶವನ್ನು ತಿಳಿಸಿದೆ ಎಂದರು.

ಡಿಎಲ್ಎಸ್ಎ ಪೆನಲ್ ವಕೀಲ ಶಿವಕುಮಾರ ಮ್ಯಾಗಳಮನಿ ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಉದಯಕುಮಾರ ಮಲ್ದಿ ಸಂವಿಧಾನ ಪೀಠಿಕೆ ಬೋಧಿಸಿದರು. ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖ ಮಿರ್ಜಾಪೂರ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಸವರಾಜ ಬ್ಯಾಗವಾಟ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ.ಬಡಿಗೇರ ವಹಿಸಿದ್ದರು.

ಸಂವಿಧಾನ ಕುರಿತು ಏರ್ಪಡಿಸಲಾದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಕುಮಾರಿ ಪ್ರೇಮತಾರ, ಕುಮಾರಿ ಪಲ್ಲವಿ, ಕುಮಾರ ನಿಖಿಲ್ ಅವರಿಗೆ ಹಾಗೂ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕೋಬ, ಕನ್ನಡ ಪರಿವೀಕ್ಷಕ ಆರ್.ಬಾಬು, ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗಪ್ಪ, ಮುಖ್ಯಗುರು ರಾಜಶೇಖರ ಪಾಟೀಲ್, ಶಾಲಾ ಸಂಸತ್ತಿನ ಪ್ರತಿನಿಧಿ ಕುಮಾರಿ ಲಾವಣ್ಯ ಉಪಸ್ಥಿತರಿದ್ದು, ಶಿಕ್ಷಕರಾದ ನರಸಿಂಹರಾಜು, ವೆಂಕಟೇಶ ಜಾಲಿಬೆಂಚಿ, ಕವಿತಾ ಮಾಲಿ ಪಾಟೀಲ್, ಶಶಿರೇಖಾ, ಶಶಿಕಲಾ, ರತ್ನಾ ಕಲಾಲ, ಜ್ಞಾನಭಾರತಿ, ಯಶೋಧಾ, ಪರಿಮಳದೇವಿ ಭಂಡಾರಿ ಭಾಗವಹಿಸಿದ್ದರು.

Share this article