ಶರಣರ ಅನುಭವ ಮಂಟಪ ಈಗ ಪೀರ್‌ ಭಾಷಾ ದರ್ಗಾ ಆಗಿದೆ: ಶಾಸಕ ಯತ್ನಾಳ

KannadaprabhaNewsNetwork | Published : Dec 2, 2024 1:18 AM

ಸಾರಾಂಶ

2ನೇ ಶತಮಾನದ ಶರಣರ ಅನುಭವ ಮಂಟಪ ಈಗ ಪೀರ್‌ ಭಾಷಾ ದರ್ಗಾ ಆಗಿದೆ. ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ನಿಮ್ಮ ಕಡೆ ಆಗಲಿಲ್ಲ ಎಂದರೆ, ನಾವೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

2ನೇ ಶತಮಾನದ ಶರಣರ ಅನುಭವ ಮಂಟಪ ಈಗ ಪೀರ್‌ ಭಾಷಾ ದರ್ಗಾ ಆಗಿದೆ. ಯಾರೂ ಈ ಬಗ್ಗೆ ಮಾತನಾಡುತ್ತಿಲ್ಲ. ನಿಮ್ಮ ಕಡೆ ಆಗಲಿಲ್ಲ ಎಂದರೆ, ನಾವೇ ಆ ಕೆಲಸ ಮಾಡಬೇಕಾಗುತ್ತದೆ. ಮಸೀದಿಗಳ ಕಟ್ಟಡ ಕೆಳಗೆ ಹಿಂದು ದೇವಸ್ಥಾನಗಳೇ ಇವೆ. ಹಿಂದು ದೇವಸ್ಥಾನ ಕಬಳಿಸಿದ್ದ ಅವರು ಈಗ ರೈತರ ಜಮೀನು, ಮಠ, ಮಂದಿರಗಳ ಜಮೀನು ಕಬಳಿಸುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ವಕ್ಫ್‌ ವಿರುದ್ಧದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು,

ನಿಮ್ಮ ಅಲ್ಲಾ ಎಲ್ಲಿ ಬಂದನೋ ಜಮೀರ್‍ಯಾ, ಏ ದೇಖೋ ಕೈಸಾ ಹೈ ಹರಾ ರಂಗ ಲಗಾಯಾ.. ಎನ್ನುವ ಜಮೀರ್‍ಯಾ ನಾವೇನೂ ಅಳಬುರುಕರು ಇದ್ದೇವೇನೂ? ನಮ್ಮಲ್ಲಿಯೂ ಕ್ಷತ್ರಿಯ ರಕ್ತ ಹರಿಯುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜ, ವೀರರಾಣಿ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕರಂತಹ ರಕ್ತ ನಮ್ಮಲ್ಲಿಯೂ ಇದೆ. ನಮ್ಮ ಭೂಮಿ ಕೇಳ್ತಿಯಾ ಎಂದು ಸಚಿವ ಜಮೀರ್ ಅಹ್ಮದ ಖಾನ್‌ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.ಉದಾಸೀನ ಮಾಡಿದರೆ ಉಳಿಗಾವಿಲ್ಲ:

ನಮ್ಮ ಜಮೀನು ಸದ್ಯಕ್ಕೆ ವಕ್ಫ್‌ ಹೆಸರಿಗೆ ಆಗಿಲ್ಲ ಬಿಡು ಎಂದು ಬೇರೆಯವರು ಉದಾಸೀನ ಮಾಡುವಂತಿಲ್ಲ. ಆ ಹುಳ ಯಾವಾಗ ನಿಮ್ಮ ಜಮೀನಿಗೂ ನುಸುಳುತ್ತದೆಯೋ ಗೊತ್ತಿಲ್ಲ. ಜಾತಿ ಜಾತಿ ಎಂದು ಬಡಿದಾಡಿದರೆ ಹಿಂದುಗಳಿಗೆ ಭವಿಷ್ಯ ಇಲ್ಲ. ಭಾರತದಲ್ಲಿ ಹಿಂದುಗಳು ಅಲ್ಪಸಂಖ್ಯಾತರು ಆದರೆ ಕತೆ ಮುಗಿದಂತೆ. ನಿಮ್ಮ ಕಣ್ಮುಂದೆಯೇ ಜಮ್ಮು-ಕಾಶ್ಮೀರ ಮತ್ತು ಕೇರಳ ಇದೆ. ಯಾರನ್ನೋ ಸಿಎಂ ಮಾಡಲು ನಾವು ಹೋರಾಟ ಮಾಡುತ್ತಿಲ್ಲ. ನನ್ನ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಬಂದ್‌ ಮಾಡಿಸಿದ್ದಾರೆ. ನಾನು ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನನ್ನ ಮೇಲೆ ಈವರೆಗೆ 42 ಕೇಸ್‌ ಹಾಕಿದ್ದಾರೆ. ಇಷ್ಟೆಲ್ಲಾ ಇರುವಾಗ ಯಾರಾದರೂ ಹೊಂದಾಣಿಕೆ ಎಂದು ಹೇಳುತ್ತಾರೆಯೇ? ನಾನು ಎಂದಿಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​ ಬಳಿ ಹೋಗಿಲ್ಲ. ವಿಧಾನಸೌಧದಲ್ಲಿ ಹೇ ಯತ್ನಾಳ ಎಂದು ಡಿ.ಕೆ.ಶಿವಕುಮಾರ್ ಕರೆದ. ಆವತ್ತೇ ಯಾಕಲೇ ಮಗನ ಎಂದು ನಾನು ಡಿಕೆಗೆ ಕರೆದಿದ್ದೆ ಎಂದು ಗುಡುಗಿದರು.

ವಕ್ಫ್‌ ಹಠಾವೋ, ದೇಶ ಬಚಾವೋ ಆಂದೋಲನವನ್ನು ನಾವು ನಮ್ಮ ದೇಶದ ರೈತರು, ಮಠ, ಮಂದಿರಗಳ ರಕ್ಷಣೆಗಾಗಿ ಮಾಡುತ್ತಿದ್ದೇವೆ ಹೊರತು ಸ್ವಾರ್ಥ ಸಾಧನೆಗಾಗಿ ಅಲ್ಲ. ಯಾರೋ ಒಬ್ಬರು ಶಕ್ತಿ ಪ್ರದರ್ಶನ ಮಾಡುತ್ತಾರೆ ಎಂದು ಈ ಹೋರಾಟ ಮಾಡುತ್ತಿಲ್ಲ. ನಮ್ಮಲ್ಲಿ 7-8 ಬಾರಿ ಶಾಸಕರಾದವರು ಇದ್ದಾರೆ. 3 ತಿಂಗಳವರೆಗೆ ಜನಜಾಗೃತಿ ಮಾಡುತ್ತೇವೆ. ದಾವಣಗೆರೆಯಲ್ಲಿ ಸಮಸ್ತ ಕರ್ನಾಟಕದ ಹಿಂದುಗಳ ಪರವಾಗಿ ಶಕ್ತಿ ಪ್ರದರ್ಶನ ಮಾಡುತ್ತೇವೆ. ದಿಲ್ಲಿಯ ಪ್ರಧಾನಿ ಕೂಡ ಖುಷಿಪಡಬೇಕು. ರೈತರು, ಮಠ ಮಂದಿರ ಉಳಿವಿಗಾಗಿ ಹೋರಾಡೋಣ. ವಕ್ಫ್‌ ರದ್ದಾದರೆ ನಾನೇ ಪ್ರಧಾನಿಯಾದಷ್ಟು ಖುಷಿ ಪಡುತ್ತೇನೆ. ನಿಸ್ವಾರ್ಥವಾದ ನಮ್ಮ ಹೋರಾಟಕ್ಕೆ ದಿನೇ ದಿನೇ ಬೆಂಬಲ ಹೆಚ್ಚಾಗುತ್ತಿದೆ ಎಂದವರು ಹೇಳಿದರು.

ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ವಕ್ಫ್‌ ವಿರುದ್ಧ ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿದ್ದಾರೆ. ಈ ಮೂಲಕ ರಮೇಶ ಅವರು ತಮ್ಮ ತಾಕತ್ತು ಏನು ಎಂಬುದನ್ನು ತೋರಿಸಿದ್ದಾರೆ. ಇದು ರಮೇಶ ಅವರ ತಾಕತ್ತಿನ ಟ್ರೇಲರ್‌ ಮಾತ್ರ. ಪಿಕ್ಟರ್‌ ಇನ್ನೂ ದಾವಣಗೆರೆಯಲ್ಲಿ ಬಾಕಿಯಿದೆ ಎಂದ ಅವರು, ವಕ್ಫ್‌ ವಿರುದ್ಧ ನಮ್ಮ ಹೋರಾಟ ಬೆಂಬಲಿಸುತ್ತಿರುವ ಹಾಲಿ ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

Share this article