ಕನ್ನಡಪ್ರಭ ವಾರ್ತೆ ಶಿರಸಿ ನವರಾತ್ರಿ ಉತ್ಸವ ಈಗ ಸಂಪನ್ನಗೊಳ್ಳುವ ಹಂತಕ್ಕೆ ಬಂದಿದ್ದು, ಸೋಮವಾರದ ಮಹಾ ನವಮಿ ಆಚರಣೆಗೆ ಎಲ್ಲ ಕಡೆ ಸಿದ್ಧತೆಯಾಗಿದೆ. ಅಂತೆಯೇ ಮಾರುಕಟ್ಟೆಯಲ್ಲಿ ಭಾನುವಾರ ಕೂಡ ಜನ ಸಂಚಾರ ಹೆಚ್ಚಿದ್ದು , ವ್ಯಾಪಾರ ಜೋರಾಗಿದೆ. ಚೆಂಡು ಹೂವು ಭರಪೂರ ಪ್ರಮಾಣದಲ್ಲಿ ಆವಕವಾಗಿದ್ದು, ಅದರೊಂದಿಗೆ ಸೇವಂತಿಗೆ ಮಲ್ಲಿಗೆ ಸಹಿತ ನಾನಾ ಬಗೆಯ ಹೂವುಗಳು ಮತ್ತು ಹಣ್ಣುಗಳ ಖರೀದಿ ಅವಸರ ಹೆಚ್ಚಿದೆ. ಎಲ್ಲೆಲ್ಲೂ ರಸ್ತೆಗಳ ಅಂಚಿನಲ್ಲಿ ಹೂವುಗಳನ್ನು ಇಟ್ಟು ವ್ಯಾಪಾರ ಮಾಡುವವರು ಕಾಣ ಸಿಗುತ್ತಿದ್ದಾರೆ. ಮಹಾನವಮಿ ಹಾಗೂ ದಶಮಿ ಹಬ್ಬಕ್ಕೆ ರಜೆಯಿದ್ದು ಹಬ್ಬವನ್ನು ವಿಶೇಷವಾಗಿ ಆಚರಿಸಲು ಜನ ಅಣಿಯಾಗಿದ್ದಾರೆ. ತಮ್ಮ ಇಷ್ಠಾರ್ಥ ಸಿದ್ಧಿಗೆ ಪ್ರಾರ್ಥಿಸಿ ಜನ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.ಹೀಗಾಗಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದೇಗುಲಗಳಲ್ಲಿ ಭಕ್ತರ ದಂಡು ಕಂಡುಬರುತ್ತಿದೆ.ನಾಡಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದರು.ವಿಕೆಂಡ್ ಸಹ ಆಗಿರುವುದರಿಂದ ಹೊರ ಭಾಗದ ಭಕ್ತರು ಸಹ ದೇವಿಯ ದರ್ಶನ ಪಡೆದರು. ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ನಿತ್ಯವೂ ವಿವಿಧ ಸ್ಪರ್ಧೆ ನಡೆಯುತ್ತಿದ್ದು, ತುರುಸಿನಿಂದ ನಡೆಯುತ್ತಿದೆ. ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಭಾನುವಾರ ಚಿತ್ರಕಲಾ ಸ್ಪರ್ಧೆ ನೆರವೇರಿತು.