ಇಸ್ರೇಲ್‌ನಲ್ಲಿರುವ ತಮ್ಮೂರಿನ 20ಕ್ಕೂ ಹೆಚ್ಚು ಮಂದಿಯ ಸುರಕ್ಷತೆಗೆ ಗ್ರಾಮಸ್ಥರಿಂದ ಪೂಜೆ

KannadaprabhaNewsNetwork |  
Published : Oct 23, 2023, 12:15 AM IST
ಮರೋಡಿ ಗ್ರಾಮದ ದೇವಸ್ಥಾನದಲ್ಲಿ ಶನಿವಾರ ಪೂಜೆ  | Kannada Prabha

ಸಾರಾಂಶ

ಇಸ್ರೇಲ್- ಹಮಾಸ್ ನಡುವಿನ ಯುದ್ಧ ನಿಂತು ಶಾಂತಿ ನೆಲೆಸಲಿ, ಅಲ್ಲಿ ನೆಲೆಸಿರುವ ನಮ್ಮವರೆಲ್ಲ ಸುರಕ್ಷಿತವಾಗಿರಲಿ, ಮರಳಿ ಬರುವವರು ಸುರಕ್ಷಿತವಾಗಿ‌ ಮರಳಿ‌ ಬರಲಿ ಎಂದು ಪ್ರಾರ್ಥಿಸಿ ತಾಲೂಕಿನ ಮರೋಡಿ ಗ್ರಾಮದ ದೇವಸ್ಥಾನದಲ್ಲಿ ಶನಿವಾರ ಪೂಜೆ ನಡೆಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಇಸ್ರೇಲ್- ಹಮಾಸ್ ನಡುವಿನ ಯುದ್ಧ ನಿಂತು ಶಾಂತಿ ನೆಲೆಸಲಿ, ಅಲ್ಲಿ ನೆಲೆಸಿರುವ ನಮ್ಮವರೆಲ್ಲ ಸುರಕ್ಷಿತವಾಗಿರಲಿ, ಮರಳಿ ಬರುವವರು ಸುರಕ್ಷಿತವಾಗಿ‌ ಮರಳಿ‌ ಬರಲಿ ಎಂದು ಪ್ರಾರ್ಥಿಸಿ ತಾಲೂಕಿನ ಮರೋಡಿ ಗ್ರಾಮದ ದೇವಸ್ಥಾನದಲ್ಲಿ ಶನಿವಾರ ಪೂಜೆ ನಡೆಸಲಾಗಿದೆ. ಇದರಲ್ಲೇನು ವಿಶೇಷ ಎಂದೆನಿಸಬಹುದು. ಆದರೆ ಮರೋಡಿ ಎಂಬ ಪುಟ್ಟ ಗ್ರಾಮದಿಂದಲೇ ಸುಮಾರು 20ಕ್ಕೂ ಹೆಚ್ಚು ಯುವಕರು ಇಸ್ರೇಲಿನಲ್ಲಿ ಉದ್ಯೋಗದಲ್ಲಿದ್ದಾರೆ. ಅಲ್ಲದೆ ಮರೋಡಿ ಗ್ರಾಮದ ಸುತ್ತಲಿನ‌ ನಾರಾವಿ‌ ಕಡೆಗಳಿಂದ ಸೇರಿ ಸುಮಾರು 50 ಕ್ಕೂ ಹೆಚ್ಚು ಮಂದಿ ಅಲ್ಲಿ‌ ಕೆಲಸದಲ್ಲಿದ್ದಾರೆ. ಹೀಗಾಗಿ ಸುಮಾರು 70 ಕ್ಕೂ ಹೆಚ್ಚು‌ ಮಂದಿ ಯುವಕರ ಕುಟುಂಬಿಕರು, ಗ್ರಾಮಸ್ಥರೆಲ್ಲ ಸೇರಿ ಮರೋಡಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಂಗಪೂಜೆಯ ಸೇವೆಯೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ತಾಯ್ನಾಡಿನ ಜನರ ಕ್ಷೇಮ ಹಾಗೂ ಇಸ್ರೇಲ್‌ನಲ್ಲಿ ಶಾಂತಿ ನೆಲೆಸಲೆಂದು ದೇವಸ್ಥಾನದಲ್ಲಿ ದೀಪ ಹಚ್ಚಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸುಮಾರು‌‌ 18 ವರ್ಷಗಳ ಕಾಲ ಇಸ್ರೇಲ್‌ನಲ್ಲಿ‌ ಉದ್ಯೋಗಿಯಾಗಿದ್ದು ಪ್ರಸ್ತುತ ಮರೋಡಿಯಲ್ಲಿ‌ ವಾಸ್ತವ್ಯದಲ್ಲಿರುವ ಮರೋಡಿ ನಾರಾಯಣ ಪೂಜಾರಿ ಕುಟುಂಬಸ್ಥರಿಂದ ಪೂಜೆ ಪುನಸ್ಕಾರ ನೆರವೇರಿತು. ಪೂಜೆ ಬಗ್ಗೆ ಪ್ರತಿಕ್ರಿಯಿಸಿದ ನಾರಾಯಣ ಪೂಜಾರಿ, ಇಸ್ರೇಲ್‌ನಲ್ಲಿ ಉದ್ಯೋಗ ಕಂಡುಕೊಂಡಿರುವ ಮರೋಡಿ ಗ್ರಾಮದ ಮತ್ತು ಆಸುಪಾಸಿನ ಅನೇಕ ಜನರು ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಇಸ್ರೇಲ್‌ನಲ್ಲಿ ಯುದ್ಧ ನಿಲ್ಲಬೇಕು, ಸಾವು ನೋವು ಕಡಿಮೆ ಆಗಬೇಕು ಎಂದು ಊರವರು ಸೇರಿ ರಂಗ ಪೂಜೆ ಮಾಡಿದ್ದೇವೆ. ನಮ್ಮೂರಿನ ಹಲವರು ಇಸ್ರೇಲ್‌ನಲ್ಲಿದ್ದುಕೊಂಡು ತಾಯ್ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಹಾಗಾಗಿ ಆ ದೇಶದಲ್ಲಿ ಯುದ್ಧ ನಿಂತರೆ ನಮ್ಮ ದೇಶಕ್ಕೂ ಒಳ್ಳೇದು. ನಮ್ಮ ಊರಿಗೂ ಒಳ್ಳೇದು. ನಾವೂ ಇಸ್ರೇಲ್‌ನಲ್ಲಿ ದುಡಿದಿದ್ದೇವೆ, ನಮಗೂ ಆ ದೇಶದ ಮೇಲೆ ಅಭಿಮಾನವಿದೆ. ಆ ಕಾರಣಕ್ಕೋಸ್ಕರ ಶಾಂತಿ ನೆಲೆಸಲು ಪೂಜೆಯ ಮೂಲಕ ಪ್ರಾರ್ಥಿಸಿದ್ದೇವೆ ಎಂದಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ