ಶರನ್ನವರಾತ್ರಿ ವ್ರತದಿಂದ ಮನಸ್ಸಿಗೆ ಆನಂದ: ಸ್ವರ್ಣವಲ್ಲೀ ಶ್ರೀ

KannadaprabhaNewsNetwork | Published : Oct 16, 2024 12:39 AM

ಸಾರಾಂಶ

ಶರನ್ನವರಾತ್ರಿ ವ್ರತದ ಅನುಷ್ಠಾನದಲ್ಲಿ ಒಂದಿಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಶಾಸ್ತ್ರದಲ್ಲಿ ಹೇಳಿದ ಕ್ರಮದಂತೆ ವ್ರತವನ್ನು ಆಚರಿಸಿದರೆ ಅದರಿಂದ ಯಾವುದೇ ನಷ್ಟ, ಆರೋಗ್ಯಕ್ಕೆ ತೊಂದರೆ ಆಗುವುದಿಲ್ಲ.

ಶಿರಸಿ: ಶರನ್ನವರಾತ್ರಿಯಂತಹ ವ್ರತ ಆಚರಿಸಿದರೆ ಅದೇ ಒಂದು ತಪಸ್ಸಾಗುತ್ತದೆ. ಇಂತಹ ವ್ರತವನ್ನು ಆಚರಿಸುವುದರಿಂದ ಮನಸ್ಸಿಗೆ ಆನಂದದ ಅನುಭವ ಆಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಸೋಂದಾ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ವಿಜಯದಶಮಿ ಹಿನ್ನೆಲೆ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು.

ದೀರ್ಘಕಾಲ ನಡೆಯುವ ಒಂದು ವ್ರತ ಶರನ್ನವರಾತ್ರಿ. ಇಂದು ಅನೇಕ ವ್ರತಗಳು ಕೈಬಿಟ್ಟು ಹೋಗಿವೆ. ಆದರೆ, ಇಷ್ಟು ದೀರ್ಘಕಾಲದ ಒಂದು ವ್ರತ ಇಂದಿಗೂ ಉಳಿದುಕೊಂಡಿದೆ. ವ್ರತಾನುಷ್ಠಾನದಿಂದ ಸಾತ್ವಿಕ ಆನಂದವಾಗುತ್ತದೆ. ಮನೆಗಳಲ್ಲಿ ಶರನ್ನವರಾತ್ರಿ ಉತ್ಸವ ಬಹಳ ಕಡಿಮೆ ಆಗುತ್ತಿದೆ. ಅದರಲ್ಲೂ ಒಂಬತ್ತು ದಿನಗಳ ಕಾಲ ಮಾಡುವವರು ತುಂಬಾ ಕಡಿಮೆ ಎಂದರು.

ವ್ರತದ ಅನುಷ್ಠಾನದಲ್ಲಿ ಒಂದಿಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಶಾಸ್ತ್ರದಲ್ಲಿ ಹೇಳಿದ ಕ್ರಮದಂತೆ ವ್ರತವನ್ನು ಆಚರಿಸಿದರೆ ಅದರಿಂದ ಯಾವುದೇ ನಷ್ಟ, ಆರೋಗ್ಯಕ್ಕೆ ತೊಂದರೆ ಆಗುವುದಿಲ್ಲ. ಅದರಿಂದ ಒಳ್ಳೆಯದೇ ಆಗುತ್ತದೆ. ಈ ರೀತಿ ವ್ರತವನ್ನು ಆಚರಿಸಿದರೆ ಒಂದು ತಪ್ಪಸ್ಸಾಗುತ್ತದೆ. ಇಂತಹ ವ್ರತವನ್ನು ಆಚರಿಸುವುದರಿಂದ ಮನಸ್ಸಿಗೆ ಆನಂದದ ಅನುಭವ ಆಗುತ್ತದೆ ಎಂದರು. ವ್ರತಾನುನುಷ್ಠಾನವೆಂಬ ತಪಸ್ಸಿನ ಮುಕ್ತಾಯದಲ್ಲಿ ಒಂದು ವಿಶೇಷವಾದ ಆನಂದ ದೊರೆಯುತ್ತದೆ. ಅದ್ಭುತವಾದ ಆನಂದದ ಅನುಭವವನ್ನು ಕೊಡುವ ವ್ರತಾನುಷ್ಠಾನವೆಂಬ ತಪಸ್ಸಿನ ಆಚರಣೆ ಕಮ್ಮಿ ಆದರೆ ಇಂದು ತುಂಬಾ ಅಪಾಯಗಳಿವೆ. ಭೋಗ ವಿಷಯದ ಮೇಲಿರುವ ಆಕರ್ಷಣೆ ಮನಸ್ಸಿನಲ್ಲಿ ಹೆಚ್ಚಾಗುತ್ತದೆ. ದುರ್ವ್ಯಸನಗಳು ಅಂಟಿಕೊಳ್ಳುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ವ್ರತಾನುಷ್ಠಾನದಿಂದ ದೊರೆಯುವಂತಹ ಸಾತ್ವಿಕವಾದ ಆನಂದದ ಕಡೆಗೆ ಗಮನವನ್ನು ಇರಿಸಿ ಅನುಷ್ಠಾನದಲ್ಲಿ ತೊಡಗಬೇಕು. ಆಗ ಬುದ್ಧಿ ಪ್ರಸನ್ನಗೊಳ್ಳುತ್ತದೆ ಎಂದರು.

ಮನುಷ್ಯನು ವ್ಯಸನಗಳಿಗೆ ಒಳಗಾದರೆ ಮನಸ್ಸಿನ ಮತ್ತು ಕುಟುಂಬದ ನೆಮ್ಮದಿ ಹಾಳಾಗುತ್ತದೆ. ಆರೋಗ್ಯ ಕೆಡುತ್ತದೆ, ಆರ್ಥಿಕವಾಗಿ ನಷ್ಟವಾಗುತ್ತದೆ. ಮನುಷ್ಯನು ವ್ಯಸನದಿಂದ ಹೊರಬರಲು ಇಂತಹ ವ್ರತ ನಿಯಮವನ್ನು ಆಚರಿಸಬೇಕು. ಅಲ್ಲಿ ಆನಂದ ಇರುವುದನ್ನು ಕಂಡುಕೊಳ್ಳಬೇಕು. ವ್ರತದ ಅನುಷ್ಠಾನದಿಂದ ಇಂತಹ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂದರು.

ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದಕ್ಕೂ ಮುನ್ನ ಶ್ರೀದೇವರಲ್ಲಿ ಹಿರಿಯ ಗುರುಗಳು ಸ್ವರಚಿತ ಶ್ಲೋಕದೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಒಂಬತ್ತು ದಿನದ ಶರನ್ನವರಾತ್ರಿ ಉತ್ಸವದಲ್ಲಿ ಮಾತೆ ರಾಜರಾಜೇಶ್ವರಿ ದೇವರಿಗೆ ವಿಶೇಷ ಅಲಂಕಾರ, ಮಹಾಪೂಜೆ, ವಿವಿಧ ಧಾರ್ಮಿಕ ಕಾರ್ಯಗಳು, ಪಾರಾಯಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Share this article