ಶರಣರ ಸಂದೇಶ, ಆದರ್ಶಗಳು ಇಂದಿಗೂ ಪ್ರಸ್ತುತ: ಕುಲಪತಿ ಪರಮಶಿವಮೂರ್ತಿ

KannadaprabhaNewsNetwork | Published : Feb 23, 2024 1:50 AM

ಸಾರಾಂಶ

ಮನುಷ್ಯತ್ವ, ಮಾನವೀಯ ಮೌಲ್ಯಗಳು, ಸಮಾಜವನ್ನು ಪ್ರೀತಿಸಿದವರು ಶರಣರು. ನಾವು ಶುದ್ಧವಾಗಿ ಇದ್ದರೆ ಸಮಾಜ ಶುದ್ಧವಾಗಿರುತ್ತದೆ ಎಂಬ ಕಲ್ಪನೆಯೊಂದಿಗೆ ಶರಣರು ನೀಡಿದ ಸಂದೇಶ, ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಹೇಳಿದರು.

ಮುಳಗುಂದ: ಮನುಷ್ಯತ್ವ, ಮಾನವೀಯ ಮೌಲ್ಯಗಳು, ಸಮಾಜವನ್ನು ಪ್ರೀತಿಸಿದವರು ಶರಣರು. ನಾವು ಶುದ್ಧವಾಗಿ ಇದ್ದರೆ ಸಮಾಜ ಶುದ್ಧವಾಗಿರುತ್ತದೆ ಎಂಬ ಕಲ್ಪನೆಯೊಂದಿಗೆ ಶರಣರು ನೀಡಿದ ಸಂದೇಶ, ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಹೇಳಿದರು.

ಪಟ್ಟಣದ ಆರಾಧ್ಯ ದೈವ ಕಾರಣಿಕ ಶಿಶು ಶ್ರೀಬಾಲಲೀಲಾ ಮಹಾಂತ ಶಿವಯೋಗಿಗಳ ೧೬೫ನೇ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ಜೀವನ ಪ್ರೀತಿ ಇರಬೇಕು. ಸಮಾಜಕ್ಕಾಗಿ ಬದುಕಬೇಕು ಎನ್ನುವ ಅಭಿಲಾಷೆ ಇರಬೇಕು. ಜೀವನ ಪ್ರೀತಿ ಇಲ್ಲ ಅಂದರೆ ಇಡೀ ಜೀವನ ನಿರಾಸೆದಾಯಕವಾಗುತ್ತದೆ. ಶರಣರು ನೀನು ಮಾಡುವ ಕೆಲಸವನ್ನು ಮೊದಲು ಪ್ರೀತಿಸು ಆಗ ನಿನ್ನ ಬದಕು ಹಸನಾಗುತ್ತದೆ ಎಂಬ ಸಂದೇಶವನ್ನು ಕೊಟ್ಟಿದ್ದಾರೆ. ಸಂಕಷ್ಟ, ಸಮಸ್ಯೆಗಳಿಗೆ ಶರಣರಲ್ಲಿ ಪರಿಹಾರವಿದೆ. ಶರಣ ಸಾಹಿತ್ಯ ಇಡೀ ಮನುಕುಲದ ಸಮಾನತೆ, ಮಹಿಳೆಯರ ಸಮಾನತೆ ಕುರಿತು ಜಾಗೃತಿ ಮೂಡಿಸಿ, ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಮಾಡಿದೆ. ಗಂಡು ಹೆಣ್ಣು ಇಬ್ಬರು ಸೇರಿ ಶಿವನನನ್ನು ಒಲಿಸಿಕೊಳ್ಳಬಹುದು ಎಂಬ ಸಂದೇಶವನ್ನು ಶರಣರು ಕೊಟ್ಟಿದ್ದಾರೆ ಎಂದರು.

ನದಿ ಇಂಗಳಗಾವಿ ಗುರುಲಿಂಗದೇವರ ಮಠದ ಸಿದ್ಧಲಿಂಗ ಸ್ವಾಮಿಗಳು ಬೆಳೆಯುವ ಭೂಮಿಯಲ್ಲೊಂದು ಪ್ರಳಯದ ಕಸಹುಟ್ಟಿ ವಿಷಯ ಕುರಿತು ಉಪನ್ಯಾಸ ನೀಡಿ, ಜಾತ್ರೆಗಳು ಕನಸನ್ನು ಬಿತ್ತುವ ಕೆಲಸವನ್ನು ಮಾಡುತ್ತವೆ. ಬದುಕಿನ ಒತ್ತಡವನ್ನ ಮರೆಸಿ, ನೋವು ಮರೆಸಿ ನಲಿವನ್ನ ಹೆಚ್ಚಿಸುವ ಯಾತ್ರೆಗಳಾಗಿವೆ. ಈ ಶರೀರ ಅನ್ನೋದು ಒಂದು ಭೂಮಿ. ಅಂತಹ ಶ್ರೇಷ್ಠವಾದ ದೇಹದಲ್ಲಿ ಅವಗುಣ ಅನ್ನುವ ಕಸ ಹುಟ್ಟುತ್ತೀವೆ. ಶರಣರು ಇಂಥಹ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಮನುಷ್ಯ ಶರೀರದಲ್ಲಿ ಏನೋ ಆಧ್ಯಾತ್ಮಿಕ ಬೀಜ ಬಿತ್ತಿ ಆಧ್ಯಾತ್ಮಿಕ ಗುಣಬೆಳೆಸಬೇಕೆಂದರೆ, ಮನುಷ್ಯನ ಸಂಸಾರದ ಜಂಜಾಟದಲ್ಲಿ ಅವಗುಣ ಎಂಬ ಕಸ ತಾನಾಗಿಯೇ ಹುಟ್ಟುತ್ತವೆ. ಶರಣರು ವಚನಗಳ ಮೂಲಕ ಬೀಜವನ್ನು ಗುರುಗಳು ಬಿತ್ತುತ್ತಾರಿ. ಆದರೆ ಅವು ಬೆಳೆಯೊದರೊಳಗೆ ಆಸೆ, ಆಮಿಷಗಳೆಂಬ ಇತ್ಯಾದಿ ಅವಗುಣಗಳು ಬೆಳೆದು ಬೀಡುತ್ತವೆ. ಶರಣರ ಆಧ್ಯಾತ್ಮದ ಚಿಂತನೆಗಳನ್ನು ಆಲಿಸಿದರೆ ನಿಮ್ಮ ಜೀವನ ಪಾವನವಾಗುತ್ತದೆ. ಮಹಾತ್ಮರ ನುಡಿಗಳು ಜ್ಯೋತಿರ್ಲಿಂಗದಂತೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಮರಗೋಡ ದುರುದುಂಡೇಶ್ವರ ಮಠದ ನೀಲಕಂಠ ಸ್ವಾಮಿಗಳು ಮಾತನಾಡಿ, ಜಾತ್ರೆಗಳಲ್ಲಿ ನಡೆಯುವ, ಉಪನ್ಯಾಸ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಇಂತಹ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಚಿಂತನೆಗಳು ಜಾತ್ರೆಗಳಲ್ಲಿ ನಡೆಯುತ್ತವೆ. ಮಹಾಂತ ಶಿವಯೋಗಗಳು ಮಹಾನ್ ಶರಣರು, ಮಹಾನ್ ಪವಾಡ ಪುರುಷರು ಮುಳಗುಂದದಲ್ಲಿ ಕುಳಿತು ಲಿಂಗದಲ್ಲಿ ಉಳವಿ ಜಾತ್ರೆಯನ್ನು ತಮ್ಮ ಭಕ್ತ ಗಣಕ್ಕೆ ತೋರಿಸಿದ ಮಹಾತ್ಮರು. ಈ ಕ್ಷೇತ್ರವನ್ನು ಪುಣ್ಯಕೇತ್ರವನ್ನಾಗಿ ಮಾಡಿದ ಮಹಾನ್ ತಪಸ್ವಿಗಳು ಶಿಶು ಮಹಾಂತರು. ಮಲ್ಲಿಕಾರ್ಜುನ ಶ್ರೀಗಳು ಅಷ್ಟೇ ಮಹಾನ್ ಶರಣರು ತಾವು ವಹಿಸಿದ ಮಠಗಳಲ್ಲಿ ಸಾಹಿತ್ಯಕವಾಗಿ, ಶೈಕ್ಷಣಿಕವಾಗಿ ಹಾಗೂ ಮಠಗಳ ಜೀರ್ಣೋದ್ಧಾರ ಮಾಡಿದ್ದಾರೆ. ಬಸವ ಪುರಾಣ ಮರು ಮುದ್ರಣ ಮಾಡಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಈ ವೇಳೆ ಸಮ್ಮುಖ ವಹಿಸಿದ ಗೋಕಾಕ ಶೂನ್ಯಸಂಪಾದನ ಮಠದ ಮುರಘೇಂದ್ರ ಸ್ವಾಮಿಗಳು ಮಾತನಾಡಿದರು. ನೇತೃತ್ವವನ್ನು ಮಲ್ಲಿಕಾರ್ಜುನ ಸ್ವಾಮಿಗಳು ವಹಿಸಿದ್ದರು.

ಅಧ್ಯಕ್ಷತೆಯನ್ನು ಡಾ. ಎಸ್.ಸಿ. ಚವಡಿ ವಹಿಸಿದ್ದರು. ಗೌರಮ್ಮ ಬಡ್ನಿ ಸೇರಿದಂತೆ ಜಾತ್ರ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಮುಖಂಡರು ಹಾಗೂ ಶ್ರೀಮಠದ ಭಕ್ತಾಧಿಗಳು ಇದ್ದರು.

Share this article