ಶರಾವತಿ ಪಂಪ್ಡ್ ಸ್ಟೋರೇಜ್ ಹಣ ಹೊಡೆಯುವ ಯೋಜನೆ: ಮಾಜಿ ಸಚಿವ ಹೆಚ್.ಹಾಲಪ್ಪ

KannadaprabhaNewsNetwork | Published : Sep 13, 2024 1:37 AM

ಸಾರಾಂಶ

ಶರಾವತಿ ನದಿನೀರು ಒಯ್ಯುವ ಯೋಜನೆಯಿಂದ ದೊಡ್ಡ ಪ್ರಮಾಣದಲ್ಲಿ ಪರಿಸರ ಹಾನಿಯಾಗುತ್ತದೆ. ಯೋಜನೆ ಅವೈಜ್ಞಾನಿಕ ಎನ್ನುವುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು ಎಂದು ಮಾಜಿ ಸಚಿವ ಹೆಚ್.ಹಾಲಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ದೂರದ ಬೆಂಗಳೂರಿಗೆ ಶರಾವತಿ ನದಿನೀರು ಒಯ್ಯುವ ಯೋಜನೆ ಬಗ್ಗೆ ಚುನಾಯಿತ ಪ್ರತಿನಿಧಿಗಳು ಅಡ್ಡಗೋಡೆ ಮೇಲೆ ದೀಪ ಇರಿಸಿದಂತೆ ಮಾತನಾಡದೆ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಮಾಜಿ ಸಚಿವ ಹೆಚ್.ಹಾಲಪ್ಪ ಹೇಳಿದರು.

ಶರಾವತಿ ನದಿ ಉಳಿಸಿ ಹೋರಾಟ ಸಮಿತಿ ವತಿಯಿಂದ ಗುರುವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾಗಿದ್ದ ಹಕ್ಕೊತ್ತಾಯದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಯೋಜನೆಯಿಂದ ದೊಡ್ಡ ಪ್ರಮಾಣದಲ್ಲಿ ಪರಿಸರಹಾನಿಯಾಗುತ್ತದೆ. ಯೋಜನೆ ಅವೈಜ್ಞಾನಿಕ ಎನ್ನುವುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಣ ಹೊಡೆಯುವ ಇನ್ನೊಂದು ಯೋಜನೆಯಾಗಿದ್ದು, ಎಲ್ಲಾ ಪಕ್ಷಗಳು ಇದರಲ್ಲಿ ಆಯಾ ಕಾಲಕ್ಕೆ ಸೇರಿಕೊಂಡಿರುತ್ತವೆ. ಸುಮಾರು ಎಂಟು ಸಾವಿರ ಕೋಟಿ ರೂ. ಯೋಜನೆ ಈಗಾಗಲೆ ಟೆಂಡರ್ ಹಂತಕ್ಕೆ ಬಂದಿದೆ. ಎರಡು ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲು ಸುಮಾರು ೨೪೦೦ ಮೆ.ವ್ಯಾ. ವಿದ್ಯುತ್ ಬಳಕೆ ಮಾಡಿಕೊಳ್ಳುವ ಅತ್ಯಂತ ಅವೈಜ್ಞಾನಿಕ ಯೋಜನೆ ಇದಾಗಿದೆ. ಎರಡೂ ಯೋಜನೆ ಕೈಬಿಡುವಂತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುವ ಜೊತೆಗೆ ಸಂದರ್ಭ ಬಂದರೆ ಕಾನೂನು ಹೋರಾಟಕ್ಕೆ ಸಹ ಮುಂದಾಗಬೇಕು ಎಂದು ಹೇಳಿದರು.

ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಳಿ ಮಾತನಾಡಿ, ಯೋಜನೆಯ ಕುರಿತು ಸರ್ಕಾರ ಸ್ಥಳೀಯರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಬೇಕು. ಶರಾವತಿ ನದಿ ಮೇಲೆ ಮತ್ತೆ ದೌರ್ಜನ್ಯ ನಡೆಸುವುದಿಲ್ಲವೆಂದು ಸರ್ಕಾರ ಲಿಖಿತವಾಗಿ ಜ್ಞಾಪನಾಪತ್ರದಲ್ಲಿ ತಿಳಿಸಿ ಕೊಡಬೇಕು ಎಂದು ಒತ್ತಾಯಿಸಿದರಲ್ಲದೆ ಶರಾವತಿ ನದಿ ತಿರುವು ಮತ್ತು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಯಾವುದೇ ಕಾರಣಕ್ಕೂ ನಾವು ಜಾರಿಗೆ ತರಲು ಬಿಡುವುದಿಲ್ಲ. ಒಂದೊಮ್ಮೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದೆ ಹೋದಲ್ಲಿ ಹೋರಾಟದ ಸ್ವರೂಪ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ಎಲ್ಲಿಯವರೆಗೆ ಯೋಜನೆ ಹಿಂದಕ್ಕೆ ಪಡೆಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರು ಒಗ್ಗಟ್ಟಾಗಿ ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವುದು ಮತ್ತು ಶರಾವತಿ ಪಂಪ್ಡ್ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದೇವೆ. ಅವೈಜ್ಞಾನಿಕ ಹಾಗೂ ಕಾರ್ಯಸಾಧುವಲ್ಲದ ಯೋಜನೆ ಯಾವುದೇ ಕಾರಣಕ್ಕೂ ಕೈಗೆತ್ತಿಕೊಳ್ಳಬಾರದು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಮಾತನಾಡಿ, ಪ್ರಾಣವನ್ನಾದರೂ ಕೊಡುತ್ತೇವೆ, ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಯೋಜನೆ ಕೈಬಿಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ದೊಡ್ಡ ಜನಾಭಿಪ್ರಾಯ ರೂಪಿಸುವ ಅಗತ್ಯವಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಜನರು ಈ ಹೋರಾಟಕ್ಕೆ ಕೈಜೋಡಿಸಬೇಕು. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನೇ ಈತನಕ ಬಗೆಹರಿಸದ ಸರ್ಕಾರ ಶರಾವತಿ ನದಿನೀರು ಒಯ್ಯಲು ಮುಂದಾಗಿರುವುದು ಸರಿಯಲ್ಲ. ಶರಾವತಿ ನದಿ ನೀರು ನಮ್ಮ ಹಕ್ಕು ಎಂದು ಹೇಳಿದರು.

ವಿದ್ಯುಚ್ಛಕ್ತಿ ತಾಂತ್ರಿಕ ಸಲಹೆಗಾರ ಶಂಕರ ಶರ್ಮ ಮಾತನಾಡಿದರು. ದಿನೇಶ್ ಶಿರವಾಳ, ರಮೇಶ್ ಕೆಳದಿ, ದೇವೇಂದ್ರಪ್ಪ, ಗಣೇಶಪ್ರಸಾದ್, ಪ್ರತಿಭಾ ಎಂ.ವಿ., ಸರೋಜ ರಾಘವೇಂದ್ರ, ಅಕ್ಷರ ಎಲ್.ವಿ. ಧನುಸ್, ರಮೇಶ್ ಎಚ್.ಎಸ್., ನಾರಾಯಣ ಮೂರ್ತಿ, ವಿನಾಯಕರಾವ್, ಮಂಜುನಾಥ ಜೇಡಿಕುಣಿ, ನಂದಾ ಗೊಜನೂರು, ಲತಾ ದಳವಾಯಿ, ಉಮಾಮಹೇಶ್ವರ ಇನ್ನಿತರರು ಹಾಜರಿದ್ದರು.

Share this article