ಕ್ಷೌರ ಅಸ್ಪೃಶ್ಯತೆ: ಆರೋಪಿಗಳ ಬಂಧಕ್ಕೆ ಮೀನಮೇಷ

KannadaprabhaNewsNetwork |  
Published : Nov 04, 2024, 12:32 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕು ಕಾಲುವೆಹಳ್ಳಿಯಲ್ಲಿ ಕ್ಷೌರ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಮಾದಿಗ ಸಮುದಾಯದ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ನೆಪ ಮಾತ್ರಕ್ಕೆ ಒಬ್ಬನನ್ನು ಬಂಧಿಸಿ ಪ್ರಮುಖ ಆರೋಪಿಗಳ ಹುಡುಕುವಲ್ಲಿ ಪೊಲೀಸರು ಮೀನ ಮೇಷ ಎಣಿಸುತ್ತಿದ್ದಾರೆಂದು ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ. ಎಚ್. ಪ್ರಕಾಶ್ ಬೀರಾವರ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗಚಳ್ಳಕೆರೆ ತಾಲೂಕು ಕಾಲುವೆಹಳ್ಳಿಯಲ್ಲಿ ಕ್ಷೌರ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಮಾದಿಗ ಸಮುದಾಯದ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ನೆಪ ಮಾತ್ರಕ್ಕೆ ಒಬ್ಬನನ್ನು ಬಂಧಿಸಿ ಪ್ರಮುಖ ಆರೋಪಿಗಳ ಹುಡುಕುವಲ್ಲಿ ಪೊಲೀಸರು ಮೀನ ಮೇಷ ಎಣಿಸುತ್ತಿದ್ದಾರೆಂದು ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ. ಎಚ್. ಪ್ರಕಾಶ್ ಬೀರಾವರ ಆರೋಪಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖ ನಾಲ್ವರು ಆರೋಪಿಗಳ ಬಂಧಿಸದೇ ಇರುವುದು ಅಚ್ಚರಿ ತರಿಸಿದೆ. ಇನ್ನೆರಡು ದಿನಗಳಲ್ಲಿ ಪತ್ತೆ ಹಚ್ಚಿ ಬಂಧಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.ಅನೇಕ ವರ್ಷಗಳಿಂದಲೂ ಕಾಲುವೆಹಳ್ಳಿಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಏಳು ನೂರು ಮಂದಿ ನಾಯಕ ಜನಾಂಗದವರಿದ್ದು, ಕೇವಲ 25 ಜನ ಮಾದಿಗರಿದ್ದಾರೆ. ಕ್ಷೌರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾದಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಪ್ರಕರಣ ದಾಖಲಾಗಿ ಎಂಟು ದಿನಗಳಾಗಿದ್ದರೂ ಪ್ರಮುಖ ಆರೋಪಿಗಳನ್ನು ಇನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷೌರಿಕನೊಬ್ಬನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಆರೋಪಿಗಳ ಬಂಧಿಸುವಲ್ಲಿ ನಿಧಾನ ಪ್ರವೃತ್ತಿ ತೋರಿಸುತ್ತಿರುವ ಚಳ್ಳಕೆರೆ ಡಿವೈಎಸ್ಪಿ, ವೃತ್ತ ನಿರೀಕ್ಷಕ ಅವರನ್ನು ಕೂಡಲೆ ಅಮಾನತ್ತುಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಮಾದಿಗರನ್ನು ಕರೆಸಿ ಚಿತ್ರದುರ್ಗದಲ್ಲಿ ಬೃಹತ್ ಹೋರಾಟ ನಡೆಸಲಾಗುವುದೆಂದರು.

ಮಾದಿಗರನ್ನು ನಾವು ಸಂಬಳಕ್ಕಿಟ್ಟುಕೊಂಡಿದ್ದೇವೆ. ಅವರುಗಳಿಗೆ ನೀವು ಯಾವುದೇ ಕಾರಣಕ್ಕೂ ಕ್ಷೌರ ಮಾಡಬಾರದೆಂದು ಬೆದರಿಕೆ ಹಾಕುತ್ತಿರುವ ನಾಯಕ ಜನಾಂಗದ ನಾಲ್ವರನ್ನು ಮೊದಲು ಬಂಧಿಸಬೇಕು. ಕೆಲವು ಆರ್ ಎಸ್ ಎಸ್ ನವರು, ರೈತರ ಮುಖಂಡರುಗಳು ಚಿತ್ರದುರ್ಗಕ್ಕೆ ಬಂದು ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಅವರ ಊರುಗಳಲ್ಲಿಯೇ ಅಸ್ಪೃ ಶ್ಯತೆ ಜೀವಂತವಾಗಿದೆ. ಪ್ರಮುಖ ನಾಲ್ವರನ್ನು ಬಂಧಿಸದಂತೆ ರಾಜಕೀಯ ಒತ್ತಡವಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲವೆಂದು ಪ್ರಕಾಶ್ ಬೀರಾವರ ಆರೋಪಿಸಿದರು.

ದಲಿತ ಮುಖಂಡ ಚಿಕ್ಕಗೊಂಡನಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಸಮನ್ವಯ ಸಮಿತಿ ರಚಿಸಿ ಕಾಲುವೆಹಳ್ಳಿಯಲ್ಲಿ ಸಹೋದರತ್ವ ಬೆಸೆಯುವ ಕೆಲಸವಾಗಬೇಕು. ಮಾದಿಗರು ಮತ್ತು ನಾಯಕ ಜನಾಂಗದರು ಅಣ್ಣ-ತಮ್ಮಂದಿರಂತೆ ಬದುಕುವುದು ನಮಗೆ ಬೇಕಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗಿದ್ದರೂ ಇನ್ನು ಮಾದಿಗರ ಮೇಲಿನ ಅಸ್ಪೃಶ್ಯತೆ ನಿಂತಿಲ್ಲ ಎನ್ನುವುದೇ ನಮಗೆ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ಸಂಘಟನೆ ಒಕ್ಕೂಟದ ಉಪಾಧ್ಯಕ್ಷ ಕೆ. ರಾಜಣ್ಣ ಮಾತನಾಡಿ, ಸಹೋದರ ಸಮಾಜದಿಂದಲೇ ನಮ್ಮ ಮೇಲೆ ಅಸ್ಪೃಶ್ಯತೆ ನಡೆಯುವುದಾದರೆ ಇನ್ನು ಸವರ್ಣಿಯರು ಮಾದಿಗರನ್ನು ಅಸ್ಪೃಶ್ಯರನ್ನಾಗಿ ಕಾಣದಿರುತ್ತಾರೆಯೇ ಎಂದು ಪ್ರಶ್ನಿಸಿದರು? ದಲಿತ ಮುಖಂಡರುಗಳಾದ ಎಂ.ಆರ್. ಶಿವರಾಜ್, ಜೆ.ಜೆ. ಹಟ್ಟಿ ಶಿವಣ್ಣ, ಬಂಗಾರಪ್ಪ, ಪ್ರಕಾಶ್ ಜಿ.ಎಂ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!