ಹಾವುಗಳ ಬಗೆಗಿನ ಮೂಢನಂಬಿಕೆ ಬಿಟ್ಟು ರಕ್ಷಣೆ ಮಾಡಿ: ಎಸ್ಪಿ ಲಕ್ಷ್ಮಣ ನಿಂಬರಗಿ

KannadaprabhaNewsNetwork |  
Published : Jul 17, 2026, 02:45 AM IST
ಬಿಎಲ್‌ಡಿಇ ಸಂಸ್ಥೆಯಲ್ಲಿ ವಿಶ್ವ ಹಾವುಗಳ ದಿನಾಚರಣೆ | Kannada Prabha

ಸಾರಾಂಶ

ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಬಿಎಲ್‌ಡಿಇ ಸಂಸ್ಥೆಯಲ್ಲಿ ವಿಶ್ವ ಹಾವುಗಳ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಹಾವುಗಳ ಬಗ್ಗೆ ಇರುವ ಮೂಢನಂಬಿಕೆಗಳನ್ನು ತೊರೆದು ಅವುಗಳನ್ನು ರಕ್ಷಿಸುವ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಎಂಜನಿಯರಿಂಗ್ ಕಾಲೇಜಿನಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ವಿಜಯಪುರ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಹಾವುಗಳ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳಿಗೆ ಹಾವುಗಳ ಕುರಿತು ಜಾಗೃತಿ ಮತ್ತು ಹಾವು ರಕ್ಷಕರಿಗೆ ಸ್ನೇಕ್ ಕ್ಯಾಚಿಂಗ್ ಕಿಟ್ ಹಾಗೂ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ, ಕಾಡು ಪ್ರಾಣಿಗಳು ಹಾಗೂ ವನ್ಯಜೀವಿಗಳೊಂದಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಅವುಗಳ ಸ್ವಾಭಾವಿಕ ವಾಸಸ್ಥಳ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು. ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮತ್ತು ವನ್ಯಜೀವಿ ಖ್ಯಾತ ಛಾಯಾಗ್ರಾಹಕ ಧ್ರುವ.ಎಂ. ಪಾಟೀಲ ಮಾತನಾಡಿ, ಹಾವುಗಳ ನಾನಾ ಪ್ರಭೇದಗಳು, ಅವುಗಳ ಪರಿಸರದಲ್ಲಿನ ಪಾತ್ರ, ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ಹಾವುಗಳ ಮಹತ್ವ ಹಾಗೂ ಹಾವುಗಳ ಬಗ್ಗೆ ಜನರಲ್ಲಿ ಮೂಡಿಸಬೇಕಿರುವ ವೈಜ್ಞಾನಿಕ ಅರಿವಿನ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ. ಡೀಮ್ಡ್ ವಿವಿ ಸಮಕುಲಾಧಿಪತಿ ಡಾ.ವೈ.ಎಂ. ಜಯರಾಜ, ಕುಲಪತಿ ಡಾ.ಅರುಣ ಇನಾಮದಾರ, ಬಿಎಲ್ಡಿಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜೀವ ಬೆಂಟೂರ, ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ ಪಿ, ವಿಜಯಪುರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರುದ್ರಪ್ಪ ಕಬಾಡಗಿ, ವಲಯ ಅರಣ್ಯಾಧಿಕಾರಿ ಸಂತೋಷ ಅಜೂರ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಅರಣ್ಯಾಧಿಕಾರಿ ಧನರಾಜ ಮಜಗೊಂಡ, ಡಾ.ಮುರುಗೇಶ ಪಟ್ಟಣಶೆಟ್ಟಿ ಇತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳೊಂದಿಗೆ ಸಂವಾದ:

ತಾಂತ್ರಿಕ ಅಧಿವೇಶನದಲ್ಲಿ ಡಾ.ಅಶೋಕ ಬಿ.ಎನ್, ಬಾಗಲಕೋಟೆ ಅರಣ್ಯ ಇಲಾಖೆ ಅರಣ್ಯ ರಕ್ಷಕ ಬಸನಗೌಡ ಬಗಲಿ ಅವರು ಹಾವುಗಳ ಗುರುತಿಸುವಿಕೆ, ವಿಷಕಾರಿ ಮತ್ತು ವಿಷರಹಿತ ಹಾವುಗಳ ಲಕ್ಷಣಗಳು, ಹಾವು ಕಚ್ಚಿದಾಗ ಅನುಸರಿಸಬೇಕಾದ ಪ್ರಥಮ ಚಿಕಿತ್ಸೆ, ಸುರಕ್ಷಿತ ರಕ್ಷಣೆ ವಿಧಾನಗಳು ಹಾಗೂ ಹಾವು ಸಂರಕ್ಷಣೆ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ಅಲ್ಲದೇ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು. ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ಪಬ್ಲಿಕ್ ಸ್ಕೂಲ್, ಎಸಿಟಿ ಶಾರದಾ ಪಬ್ಲಿಕ್ ಸ್ಕೂಲ್ ಹಾಗೂ ವೇದ ಅಕಾಡೆಮಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಹಾವುಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಬಿ.ಎಲ್.ಡಿ.ಇ. ಡೀಮ್ಡ್ ವಿವಿ ವತಿಯಿಂದ ಜಿಲ್ಲೆಯ ಹಾವು ರಕ್ಷಕರಿಗೆ ಸ್ನೇಕ್ ಕ್ಯಾಚಿಂಗ್ ಕಿಟ್‌ಗಳನ್ನು ವಿತರಿಸಲಾಯಿತು. ಬಿ.ಎಲ್.ಡಿ.ಇ. ಆಸ್ಪತ್ರೆ ವತಿಯಿಂದ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಮಿಕಲ್‌ ಮಿಶ್ರಿತ ಹಾಲು ಪೂರೈಕೆ ತಡೆಯಲು ಆಗ್ರಹಿಸಿ ಡಿಸಿಗೆ ಮನವಿ
ದೇವರಹಿಪ್ಪರಗಿ ಮಳೆಗಾಗಿ ಪ್ರಾರ್ಥನೆ, ಜಲಾಭಿಷೇಕ