ಉಡುಪಿ: ಉಡುಪಿ ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಕ್ರೀಡಾ ಸಂಕೀರ್ಣ, ಶಿಕ್ಷಣ ಸಂಸ್ಥೆಗಳು ಮತ್ತಿತರ ಪ್ರದೇಶಗಳಲ್ಲಿ 4405 ಬೀದಿ ನಾಯಿಗಳನ್ನು ಗುರುತಿಸಲಾಗಿದೆ. ಈ ಪ್ರತಿಯೊಂದು ಸಂಸ್ಥೆಗಳು ಈ ನಾಯಿಗಳ ನಿರ್ವಹಣೆಯ ಜವಾಬ್ದಾರಿಯನ್ನು ನೋಡಿಕೊಳ್ಳಲು ನೋಡೆಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬೀದಿ ನಾಯಿಗಳು ಹಾಗೂ ಬೀಡಾಡಿ ದನಗಳ ನಿಯಂತ್ರಣಕ್ಕೆ ಸವೋಚ್ಛ ನ್ಯಾಯಾಲಯವು ನಿರ್ದೇಶನ ನೀಡಿದ್ದು, ಅದರಂತೆ ಬೀಡಾಡಿ ಪ್ರಾಣಿಗಳ ಆಶ್ರಯಕ್ಕೆ ಅಗತ್ಯವಿರುವ ಆಶ್ರಯ ತಾಣಗಳನ್ನು ಸಂಬಂಧಪಟ್ಟ ಸಂಸ್ಥೆಗಳು ಕೂಡಲೇ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೆಲವು ಸಂಸ್ಥೆಗಳು ಬೀಡಾಡಿ ಪ್ರಾಣಿಗಳ ನಿಯಂತ್ರಣಕ್ಕೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡದೇ ಇರುವುದು ಕಂಡಬಂದಿದ್ದು, ತಕ್ಷಣ ನೇಮಕ ಮಾಡಬೇಕು ಎಂದು ತಿಳಿಸಿದರು.ರೇಬೀಸ್ ಕಾಯಿಲೆ, ಸಂಶಯಾಸ್ಪದ, ರೋಗ ಪೀಡಿತ ಅಥವಾ ಆಕ್ರಮಣಕಾರಿ ನಡತೆ ಇರುವ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಬಿಡಬೇಕು, ಅದಕ್ಕಾಗಿ ಕೆಲವು ತಾಲೂಕಿನಲ್ಲಿಯೂ ಆಶ್ರಯ ತಾಣಗಳ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಬಾಕಿ ಇರುವ ಬ್ರಹ್ಮಾವರ ಮತ್ತು ಹೆಬ್ರಿ ತಾಲೂಕುಗಳಲ್ಲಿಯೂ ವಾರದ ಒಳಗಾಗಿ ಭೂಮಿ ಗುರುತಿಸಿ, ನಿಯಮ ಅನ್ವಯ ಆಹಾರ, ನೀರು, ನೆರಳು, ಪಶು ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸುವಂತಹ ಆಶ್ರಯ ತಾಣಗಳನ್ನು ನಿರ್ಮಾಣ ಮಾಡಬೇಕು ಎಂದು ಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೀಡಾಡಿ ನಾಯಿಗಳ ನಿರ್ವಹಣೆಗೆ ಯಾರಾದರೂ ದಾನಿಗಳು ಮುಂದೆ ಬಂದಲ್ಲಿ ದತ್ತು ಕಾರ್ಯಕ್ರಮದಡಿ ಅವರ ಸಹಕಾರ ಪಡೆಯಬೇಕು. ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಕ್ರಮಗಳನ್ನು ರೂಪಿಸಬೇಕು ಎಂದರು.ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ, ಪೌರಾಯುಕ್ತ ಮಹಾಂತೇಶ್ ಹಂಗರಗಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಾಲೂಕು ತಹಸೀಲ್ದಾರ್‌ಗಳು, ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.