ಸೋಮರಡ್ಡಿ ಅಳವಂಡಿ ಕೊಪ್ಪಳ
ಎರಡು ಸಾವಿರ ಮನೆ ನಿರ್ಮಾಣ ಕೈಬಿಟ್ಟು ನಿವೇಶನ ನೀಡಲು ನಿರ್ಧರಿಸಲಾಯಿತು. ಅದರಲ್ಲಿ ಕೆಲವೊಂದಿಷ್ಟು ನಿರ್ಮಾಣ ಮಾಡಿದ ಮನೆ ಹಾಳು ಬಿದ್ದು, ಕೊಂಪೆಯಂತಾಗಿವೆ. ಅವುಗಳ ಸ್ಥಿತಿ ನೋಡುವಂತಿಲ್ಲ.
ಮನೆ ನಿರ್ಮಾಣ ಕೈಬಿಟ್ಟು,ನಿವೇಶವನ್ನೇನು ನೀಡಲು ನಿರ್ಧರಿಸಿ ಇದುವರೆಗೂ 1400 ನಿವೇಶನ ಹಂಚಿಕೆ ಮಾಡಲಾಗಿದೆ. ಉಳಿದ 600 ಹಂಚಿಕೆ ಮಾಡಬೇಕಾಗಿದೆ. ಆದರೆ, ಇವುಗಳ ಹಂಚಿಕೆಯಲ್ಲಿ ಭಾರಿ ಗೋಲ್ ಮಾಲ್ ಆಗಿದೆ. ನಗರ ನಿವಾಸಿಗಳಿಗೆ ಹಂಚಿಕೆ ಮಾಡಬೇಕಾಗಿರುವುದನ್ನು ಗ್ರಾಮೀಣ ವಾಸಿಗಳಿಗೂ ನೀಡಲಾಗಿದೆ. ಒಂದೇ ಕುಟುಂಬಕ್ಕೆ ನಾಲ್ಕಾರು ನಿವೇಶನ ನೀಡಲಾಗಿದೆ ಎನ್ನುವ ಆರೋಪ ಇದ್ದು, ಈ ಕುರಿತು ದಲಿತ ಸಂಘಟನೆಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ರಾಮಣ್ಣ ಕಂದಾರಿ ಹೇಳುತ್ತಾರೆ.ಕನ್ನಡಪ್ರಭ ವರದಿಗಳನ್ನಾಧರಿಸಿಯೇ ಸಮಗ್ರ ತನಿಖೆಗೆ ಆಗ್ರಹಿಸುತ್ತೇವೆ ಎನ್ನುತ್ತಾರೆ. ಅಗತ್ಯಬಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಕೊಪ್ಪಳ ನಗರದ ಪಾಲಿಗೆ ಇಷ್ಟೊಂದು ಮಹಾತ್ವಾಕಾಂಕ್ಷಿ ಯೋಜನೆ ಹಳ್ಳಹಿಡಿದಿರುವುದು ಮಾತ್ರ ದುರಂತವೇ ಸರಿ. ಸೂರಿಲ್ಲದವರ ಬಾಳಲ್ಲಿ ಬೆಳಕಾಗಬೇಕಾಗಿತ್ತು. ಆದರೆ, ಯೋಜನೆ ಹಳ್ಳ ಹಿಡಿದು, ಈಗಲೂ ಜಾಲಿ ಕಂಟಿ ಬೆಳೆದು ನಿಂತಿದ್ದು, ಕನಿಷ್ಠ ಸೌಕರ್ಯ ಇಲ್ಲ. ಆದರೆ, ಇದಕ್ಕೆ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಹಲವಾರು ಬಾರಿ ಕೊಪ್ಪಳ ನಗರಸಭೆಯಲ್ಲಿ ಲಕ್ಷಾಂತರ ಖರ್ಚು ಹಾಕಲಾಗಿದೆ. ಆದರೆ, ಅಲ್ಲಿ ಒಂದೇ ಒಂದು ಕಂಟಿ ತೆರವು ಮಾಡಿಲ್ಲ ಎನ್ನುವ ಆರೋಪವೂ ಇದೆ. ಹೀಗಾಗಿ, ಈ ಕುರಿತು ಸಮಗ್ರ ತನಿಖೆ ಮಾಡಿದರೆ ಅದೆಲ್ಲವೂ ಬೆಳಕಿಗೆ ಬರಲಿದೆ.
ಜಿಲ್ಲಾಧಿಕಾರಿಗಳೇ ಇತ್ತ ನೋಡಿಕೊಪ್ಪಳ ನಗರಸಭೆಯಲ್ಲಿ ಅಧ್ಯಕ್ಷರು, ಸದಸ್ಯರ ಅವಧಿ ಮುಗಿದಿರುವುದರಿಂದ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಈಗ ಆಡಳಿತಾಧಿಕಾರಿಗಳಾಗಿದ್ದಾರೆ. 2012 ರಿಂದ ಇಲ್ಲಿಯವರೆಗೂ ಹಿರೇಸಿಂದೋಗಿ ರಸ್ತೆಯಲ್ಲಿರುವ 2 ಸಾವಿರ ನಿವೇಶನಗಳ ಕರ್ಮಕಾಂಡದತ್ತ ಕಣ್ಣಾಡಿಸಬೇಕಾಗಿದೆ. ಏನೇನು ಆಗಿದೆ ಎನ್ನುವುದನ್ನು ಪರಿಶೀಲನೆ ಮಾಡಿ ಅದಕ್ಕೊಂದು ಮುಕ್ತಿ ನೀಡಬೇಕಾಗಿದೆ.