ಶೆಟ್ಟರ್‌ ಮರಳಿ ಬಿಜೆಪಿಗೆ: ಆಪರೇಷನ್‌ ಹಸ್ತಕ್ಕೆ ಹಿನ್ನಡೆ?

KannadaprabhaNewsNetwork | Published : Jan 26, 2024 1:46 AM

ಸಾರಾಂಶ

ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಸದಾಶಿವ ಚೌಶೆಟ್ಟಿ ಸೇರಿದಂತೆ ಹಲವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಶಿವಾನಂದ ಗೊಂಬಿ ಹುಬ್ಬಳ್ಳಿ

ಕಾಂಗ್ರೆಸ್‌ ಸೇರಿ 9 ತಿಂಗಳಿಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿಗೆ ಮರಳಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ದೊಡ್ಡ ಶಾಕ್‌ ಆಗಿದೆ. ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದರೊಂದಿಗೆ ಉತ್ತರ ಕರ್ನಾಟಕ ಭಾಗದಲ್ಲಿ ನಡೆಸಲು ಉದ್ದೇಶಿಸಿದ್ದ "ಆಪರೇಷನ್‌ ಹಸ್ತ "ಕ್ಕೆ ಕೊಂಚ ಹಿನ್ನಡೆಯಾಗಿದೆ.

ಕಳೆದ ವಿಧಾನಸಭೆಯಲ್ಲಿ ಬಿಜೆಪಿಯೊಂದಿಗೆ ಮುನಿಸಿಕೊಂಡು ಶೆಟ್ಟರ್‌ ಕಾಂಗ್ರೆಸ್‌ ಸೇರಿದ್ದರು. ಕಾಂಗ್ರೆಸ್‌ಗೆ ಲಿಂಗಾಯತ ಸಮುದಾಯದ ದೊಡ್ಡ ಲೀಡರ್‌ ಸಿಕ್ಕಂತಾಗಿತ್ತು. ಅಂದುಕೊಂಡಂತೆ ಕಾಂಗ್ರೆಸ್‌ ಕೂಡ ಅತ್ಯಂತ ಗೌರವಯುತವಾಗಿಯೇ ಶೆಟ್ಟರ್‌ ಅವರನ್ನು ನಡೆಸಿಕೊಂಡಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಟಿಕೆಟ್‌ ಕೂಡ ಕೊಟ್ಟಿತ್ತು. ಆದರೆ ಅಲ್ಲಿ ಪರಾಭವಗೊಂಡಿದ್ದರು.ಆದರೆ ಪ್ರಮುಖ ಲಿಂಗಾಯತ ಸಮುದಾಯಕ್ಕೆ ಸೇರಿದ ದೊಡ್ಡ ಲೀಡರ್‌ ಆಗಿದ್ದ ಕಾರಣ ಅವರ ಕ್ಷೇತ್ರದಲ್ಲಿ ಸೋತರೂ ಸುತ್ತಮುತ್ತಲಿನ ಕ್ಷೇತ್ರಗಳ ಮೇಲೆ ಅವರ ಪ್ರಭಾವ ಜಾಸ್ತಿ ಇತ್ತು. ಹಾವೇರಿ, ಧಾರವಾಡ, ಕೊಪ್ಪಳ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಶೆಟ್ಟರ್‌ ಪ್ರಭಾವದಿಂದ ಬಿಜೆಪಿ ಅಭ್ಯರ್ಥಿಗಳು ಸೋತಿದ್ದು ಸುಳ್ಳಲ್ಲ.

ಆಪರೇಷನ್‌ ಹಸ್ತಕ್ಕೆ ಹಿನ್ನಡೆ: ಇವರು ಕಾಂಗ್ರೆಸ್‌ಗೆ ಬಂದಿದ್ದರಿಂದ ಕೈಪಡೆಗೆ ಲಾಭವಾಗಿದ್ದಂತೂ ಸತ್ಯ. ಹೀಗಾಗಿ ಸೋತರೂ ವಿಧಾನ ಪರಿಷತ್‌ ಸದಸ್ಯತ್ವ ನೀಡಿತ್ತು. ಜತೆಗೆ ಉತ್ತರ ಕರ್ನಾಟಕದ ಭಾಗದಲ್ಲಿ ಆಪರೇಷನ್‌ ಹಸ್ತ ಮಾಡುವ ಜವಾಬ್ದಾರಿ ಶೆಟ್ಟರ್‌ ಹೆಗಲಿಗೆ ಕೈಪಡೆ ಹಾಕಿತ್ತು ಎಂದು ಹೇಳಲಾಗಿದೆ.

ಅದಕ್ಕೆ ತಕ್ಕಂತೆ ಶೆಟ್ಟರ್‌ ಕೂಡ ಪ್ರಯತ್ನ ನಡೆಸಿದ್ದರು. ಈ ಕಾರಣದಿಂದ ಶಿರಹಟ್ಟಿಯ ಮಾಜಿ ಶಾಸಕ ರಾಮಣ್ಣ ಲಮಾಣಿ, ಕುಂದಗೋಳ ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡರ, ತವನಪ್ಪ ಅಷ್ಟಗಿ ಸೇರಿದಂತೆ ಕೆಲ ಮಾಜಿ ಶಾಸಕರು, ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು. ಇದು ಲೋಕಸಭೆ ಚುನಾವಣೆವರೆಗೂ ನಡೆಯುತ್ತದೆ. ಇನ್ನು ಹಲವರು ಕಾಂಗ್ರೆಸ್‌ ಬರುತ್ತಾರೆ ನೋಡ್ತಾ ಇರಿ ಎಂದು ಶೆಟ್ಟರ್‌ ಅವರೇ ಬಹಿರಂಗವಾಗಿಯೇ ಹೇಳುತ್ತಿದ್ದರು. ಇದೀಗ ಶೆಟ್ಟರ್‌ ಬಿಜೆಪಿ ಸೇರಿದ್ದರಿಂದ "ಆಪರೇಷನ್‌ ಹಸ್ತ "ಕ್ಕೆ ಹಿನ್ನಡೆಯಾದಂತಾಗಿದೆ ಎಂಬುದು ಮಾತ್ರ ಸ್ಪಷ್ಟ.

ಮುನೇನಕೊಪ್ಪ ಗುಸು ಗುಸುಗೆ ಬ್ರೇಕ್‌: ಇತ್ತೀಚಿಗಷ್ಟೇ ತಮ್ಮ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೂಡ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಗುಸು ಗುಸು ಶುರುವಾಗಿತ್ತು. ಬಹುಶಃ ಶೆಟ್ಟರ್‌ ಕಾಂಗ್ರೆಸ್‌ನಲ್ಲಿಯೇ ಇದ್ದರೆ ಮುನೇನಕೊಪ್ಪ ಬರುವ ಸಾಧ್ಯತೆ ಇತ್ತು. ಆದರೆ ಇದೀಗ ಶೆಟ್ಟರ್‌ ಮರಳಿ ಬಿಜೆಪಿ ಸೇರಿರುವುದರಿಂದ ಮುನೇನಕೊಪ್ಪ ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ವದಂತಿಗೂ ಇತಿಶ್ರೀ ಹಾಡಿದಂತಾಗಿದೆ.

ಹಿಡಿದಿಟ್ಟುಕೊಳ್ಳಲು ಕೈ ಯತ್ನ: ಶೆಟ್ಟರ್‌ ಮಧ್ಯಸ್ಥಿಕೆಯಲ್ಲಿ ಸೇರ್ಪಡೆಯಾಗಿರುವವರು ಕಥೆಯೇನು? ಎಂಬ ಪ್ರಶ್ನೆ ಉದ್ಭವವಾಗಿದೆ. ಚಿಕ್ಕನಗೌಡರ ಅವರು ಶೆಟ್ಟರ್‌, ಡಿ.ಕೆ. ಶಿವಕುಮಾರ ಸಮ್ಮುಖದಲ್ಲೇ ಕಾಂಗ್ರೆಸ್‌ ಸೇರಿದ್ದರು. ಇವರು ಸೇರ್ಪಡೆಯಾಗಿ ಕೆಲ ದಿನಗಳಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದರು. ಯಡಿಯೂರಪ್ಪ ಸಂಬಂಧಿಯೂ ಆಗಿದ್ದ ಚಿಕ್ಕನಗೌಡರ ನಾನು ಕಾಂಗ್ರೆಸ್‌ ಸೇರಿಲ್ಲ. ಬಿಜೆಪಿಯಲ್ಲೂ ಇಲ್ಲ. ಪಕ್ಷೇತರನಾಗಿ ಸ್ಪರ್ಧಿಸಿದ್ದೆ ಎರಡು ಪಕ್ಷಗಳೊಂದಿಗೆ ಅಂತರ ಕಾಯ್ದುಕೊಂಡಿದ್ದೇನೆ ಎಂದು ತಿಳಿಸಿದ್ದರು. ಇದೀಗ ಅವರು ಕೂಡ ಬಿಜೆಪಿಗೆ ಮರಳಿ ಸೇರುವ ಸಾಧ್ಯತೆಯಿದೆ.

ಇನ್ನು ಕಳೆದ ಅಕ್ಟೋಬರ್‌ನಲ್ಲಷ್ಟೇ ಕಾಂಗ್ರೆಸ್‌ ಸೇರಿದ್ದ ಮಾಜಿ ಶಾಸಕ ರಾಮಣ್ಣ ಲಮಾಣಿ ಮತ್ತೆ ಬಿಜೆಪಿ ಸೇರುತ್ತಾರೆಯೇ? ಅಥವಾ ಕಾಂಗ್ರೆಸ್‌ನಲ್ಲೇ ಉಳಿಯುತ್ತಾರೋ? ಎಂಬುದು ಇದೀಗ ಉದ್ಭವವಾಗಿರುವ ಪ್ರಶ್ನೆ. ಶೆಟ್ಟರ್‌ರೊಂದಿಗೆ ಕಾಂಗ್ರೆಸ್‌ ಸೇರಿದ್ದ ತವನಪ್ಪ ಅಷ್ಟಗಿ ಸೇರಿದಂತೆ ಉಳಿದವರ ಕಥೆಯೇನು? ಎಂಬುದು ಕಾರ್ಯಕರ್ತರಲ್ಲಿ ಕಾಡುತ್ತಿದೆ. ಈ ನಡುವೆ ಶೆಟ್ಟರ್‌ ಅವರೊಂದಿಗೆ ಅವರ ಮಧ್ಯಸ್ಥಿಕೆಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾದ ಮುಖಂಡರನ್ನು ಕಾಂಗ್ರೆಸ್‌ನಲ್ಲೇ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್‌ ಯತ್ನ ನಡೆಸಿದೆ. ಇದಕ್ಕಾಗಿ ಆಯಾ ಭಾಗದ ಮುಖಂಡರನ್ನು ಕಳುಹಿಸಿ ಮಾತುಕತೆ ಕೂಡ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಶೆಟ್ಟರ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವುದು ಭಾರೀ ಸಂಚಲನವನ್ನುಂಟು ಮಾಡಿರುವುದಂತೂ ಸತ್ಯ.

ಬೆಂಬಲಿಗರೆಲ್ಲ ಮರಳಿ ಗೂಡಿಗೆ..!: ಇನ್ನು ಶೆಟ್ಟರ್‌ ಅವರೊಂದಿಗೆ ಕಾಂಗ್ರೆಸ್‌ ಸೇರಿದ್ದ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಸದಾಶಿವ ಚೌಶೆಟ್ಟಿ ಸೇರಿದಂತೆ ಹಲವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಕಲಬುರ್ಗಿ ಸೇರಿದಂತೆ ಹಲವರು ಬಿಜೆಪಿ ಬಾವುಟ ಹಿಡಿದು ಜೈ ಅಂದಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್‌ ತೊರೆದಿಲ್ಲ. ತೊರೆಯಲಿದ್ದಾರೆ ಎಂದು ಹೇಳಲಾಗಿದೆ.

9 ತಿಂಗಳು 8 ದಿನ: ಜಗದೀಶ ಶೆಟ್ಟರ್‌ 9 ತಿಂಗಳು ಎಂಟು ದಿನಕ್ಕೆ ಸರಿಯಾಗಿ ಕಾಂಗ್ರೆಸ್‌ ತೊರೆದಿದ್ದಾರೆ. ಕಳೆದ ವಿಧಾನಸಭೆ ಹೊಸ್ತಿಲಲ್ಲಿ ಅಂದರೆ ಏ. 17ರಂದು ಬಿಜೆಪಿಯೊಂದಿಗೆ ಮುನಿಸಿಕೊಂಡು ಕಾಂಗ್ರೆಸ್‌ ಸೇರಿದ್ದರು. ಇದೀಗ ಜ. 25ಕ್ಕೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಬರೋಬ್ಬರಿ 9 ತಿಂಗಳು 8 ದಿನದಲ್ಲಿ ಕಾಂಗ್ರೆಸ್‌ ತೊರೆದಂತಾಗಿದೆ.

Share this article