35 ಕೋಟಿ ರು. ವೆಚ್ಚದ ಹೊನ್ನೇಕೊಡಿಗೆ ಸೇತುವೆ ಕಾಮಗಾರಿ ಪ್ರಗತಿ । ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ತಾಲೂಕಿನ ರಸ್ತೆ, ದೇವಸ್ಥಾನ, ಸಮುದಾಯ ಭವನಗಳಿಗೆ ಒಟ್ಟು ₹6.41 ಕೋಟಿ ರು. ಮಂಜೂರಾಗಿದೆ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ತಿಳಿಸಿದರು.ಭಾನುವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶೆಟ್ಟಿಕೊಪ್ಪ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮುದಾಯ ಭವನಕ್ಕೆ 50 ಲಕ್ಷ ರು. ಮಂಜೂರಾಗಿದೆ. ಶೀಘ್ರದಲ್ಲೇ ಸಮುದಾಯದ ಕಾಮಗಾರಿ ಪ್ರಾರಂಭವಾಗಲಿದೆ. ತಾಲೂಕು ಭಾವಸಾರ ಕ್ಷತ್ರಿಯ ಸಮಾಜದವರಿಗೆ ಸಮುದಾಯ ಭವನ ನಿರ್ಮಿಸಲು ₹25 ಲಕ್ಷ ಅನುದಾನ ಮಂಜೂರು ಮಾಡಿಸಿದ್ದು. ಮುಂದೆ ಸಮುದಾಯ ಭವನಕ್ಕೆ ಹಣ ಕಡಿಮೆಯಾದರೆ ಮತ್ತೆ ಹಣ ಮಂಜೂರು ಮಾಡಿಸುತ್ತೇನೆ. ಸವಿತ ಸಮಾಜದವರು ಸಹ ಸಮುದಾಯ ಭವನಕ್ಕೆ ಬೇಡಿಕೆ ಇಟ್ಟಿದ್ದು ಅವರ ಸಮುದಾಯ ಭವನಕ್ಕೆ ₹25 ಲಕ್ಷ , ವಿಶ್ವ ಕರ್ಮ ಬ್ರಾಹ್ಮಣ ಸಮಾಜದವರು ಪಟ್ಟಣದ ಕಾಳಿಕಾಂಬ ದೇವಸ್ಥಾನ ನಿರ್ಮಿಸಲು ಮುಜರಾಯಿ ಇಲಾಖೆಯಿಂದ ₹10 ಲಕ್ಷ , ಕಳ್ಳಿಕೊಪ್ಪ ಆಂಜನೇಯ ದೇವಸ್ಥಾನ ನಿರ್ಮಿಸಲು ₹3 ಲಕ್ಷ , ಮೇದರ ಬೀದಿಯ ಅಂತರಘಟ್ಟಮ್ಮ ದೇವಸ್ಥಾನದ ಅಭಿವೃದ್ದಿಗೆ 3 ಲಕ್ಷ ಮಂಜೂರು ಮಾಡಿಸಿದ್ದೇನೆ. ಈ ಹಿಂದೆ ಅಂತರಘಟ್ಟಮ್ಮ ದೇವಸ್ಥಾನಕ್ಕೆ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದೇನೆ ಎಂದರು.
ರಸ್ತೆ ಅಗಲೀಕರಣಕ್ಕೆ 60 ಕೋಟಿ: ಪಟ್ಟಣದ ಬಸ್ಸು ನಿಲ್ದಾಣದಿಂದ ಪ್ರವಾಸಿ ಮಂದಿರವರೆಗೆ ರಸ್ತೆ ಅಗಲೀಕರಣಕ್ಕೆ ₹60 ಕೋಟಿ ಬೇಕಾಗಲಿದ್ದು ಈ ಅನುದಾನಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದೇನೆ. ಶೀಘ್ರ ಹಣ ಮಂಜೂರಾಗಲಿದೆ. ರಾಜ್ಯ ಪ್ರವಾಸೋದ್ಯಮ ನಿಗಮದ ಸಿ.ಎಸ್.ಆರ್. ಫಂಡ್ ನಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ₹25 ಲಕ್ಷ ನೀಡುತ್ತಿದ್ದೇವೆ.ಕಾಂಪೌಂಡು ಹಾಗೂ ಇತರ ಕಾಮಗಾರಿಗಳಿಗೆ ₹1 ಕೋಟಿ ಬೇಕಾಗಲಿದ್ದು ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಲ್ಲಿ ಬೇಡಿಕೆ ಇಟ್ಟಿದ್ದೇವೆ ಎಂದರು.