ಕನ್ನಡಪ್ರಭ ವಾರ್ತೆ ಮದ್ದೂರು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ತಾಲೂಕಿನ ಕುದರಗುಂಡಿ ಗ್ರಾಮದ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ನಾಗೇಶ್ ನಿವಾಸದಲ್ಲಿ ಭಾನುವಾರ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ಚೆಲುವರಾಜು ಅವರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಎನ್ನುವುದು ದೂರಾಗಿದೆ. ಈ ಹಿನ್ನೆಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಮುಂದಿನ ಒಂದು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದರು.ನಗರ, ಪಟ್ಟಣ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳಲಿ ಸ್ವಚ್ಛತೆಗೆ ವಿಶೇಷ ವಹಿಸುತ್ತಿರುವುದರಿಂದ ಡೆಂಘೀ ನಿಯಂತ್ರಣದಲ್ಲಿದೆ. ಆದರೂ ಸಹ ರೋಗ ಉಲ್ಬಣ ಗೊಳ್ಳದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಶೀಘ್ರದಲ್ಲಿಯೇ ತಾಲೂಕು ಕೇಂದ್ರದ ಎಲ್ಲಾ ಆಸ್ಪತ್ರೆಗಳಲ್ಲಿ ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ತರಲಾಗುವುದು. ಅಲ್ಲದೇ, ರಾಜ್ಯದ 75 ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ಘಟಕ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಘಟಕಗಳನ್ನು ಹಂತ ಹಂತವಾಗಿ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಮಾಡಲಾಗುವುದು ಸಚಿವ ಭರವಸೆ ನೀಡಿದರು.ಈ ವೇಳೆ ರೈತ ಮುಖಂಡ ಕುದರಗುಂಡಿ ನಾಗರಾಜು, ಕಬ್ಬಾರೆ ರಾಘವೇಂದ್ರ, ಕೀರ್ತಿ, ನಿತ್ಯಾನಂದ, ನಯನ, ಇಂದೂ, ಧ್ರುವ ಕುಮಾರ್ ಇದ್ದರು.
ಸಿಎಂ ರಾಜೀನಾಮೆ ಕೇಳುವ ನೈತಿಕ ಹಕ್ಕು ವಿಪಕ್ಷಗಳಿಗಿಲ್ಲ: ದಿನೇಶ್ ಗುಂಡೂರಾವ್ಮದ್ದೂರು:
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕ ಹಕ್ಕು ವಿಪಕ್ಷಗಳಿಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಸಲು ವಿಪಕ್ಷ ನಾಯಕರು ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಷಡ್ಯಂತ್ರ ನಡೆಸುತ್ತಿದ್ದಾರೆ. ಅವರ ಈ ಯತ್ನ ಫಲಿಸುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಮತ್ತು ಸಂಪುಟದ ಸಚಿವರುಗಳು ಜೊತೆಗಿದ್ದೇವೆ. ಸಿದ್ದರಾಮಯ್ಯ ನಾಯಕತ್ವದಲ್ಲಿ ಪಕ್ಷ ಸುಭದ್ರವಾಗಿದೆ. ಮುಂದಿನ ಚುನಾವಣೆಗಳಲ್ಲೂ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಾಕಷ್ಟು ಎಫ್‌ಐಆರ್‌ಗಳು ದಾಖಲಾಗಿವೆ. ಇಂಥವರು ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕ ಹಕ್ಕು ಉಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.