ಕನ್ನಡಪ್ರಭ ವಾರ್ತೆ ಮೂಲ್ಕಿ
ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕುಂಭಾಭಿಷೇಕ ನಾಗಮಂಡಲ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ, ಕೊಡಮಣಿತ್ತಾಯ ಅಂದರೆ ತುಂಬಿದ ಕೊಡದಲ್ಲಿ ಸಂಪತ್ತನ್ನು ಎತ್ತಿ ಹಿಡಿದ ದೈವ. ಸಂಪತ್ತು ಅಂದರೆ ಕೇವಲ ಹಣವಲ್ಲ, ಜನರ ಭಕ್ತಿ ಭಾವ, ಸತ್ಯ ತುಂಬಿರುವ ಸಂಪತ್ತು. ಅದು ಶಿಬರೂರಿನಲ್ಲಿ ಕಾಣಸಿಗುತ್ತದೆ. ಇಂತಹ ಶ್ರದ್ಧಾಕೇಂದ್ರ ಬೇರೆಲ್ಲೂ ಕಾಣಸಿಗದು ಎಂದರು. ಶ್ರೀ ಕ್ಷೇತ್ರ ಕರಿಂಜೆ ಮುಕ್ತಾನಂದ ಸ್ವಾಮೀಜಿ ಅವರು ಮಾತನಾಡಿ, ಇಲ್ಲಿನ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ನಮ್ಮೊಳಗಿನ ಸ್ವಾರ್ಥ, ಮದ, ಮತ್ಸರ, ಅಸೂಯೆ ಎನ್ನುವ ವಿಷವನ್ನು ಕಳೆದುಕೊಂಡು ಸಾತ್ವಿಕರಾಗೋಣ ಎಂದು ಹೇಳಿದರು.ಉಪನ್ಯಾಸ ನೀಡಿದ ಕ್ಯಾಫ್ಸ್ ಫೌಂಡೇಶನ್ ಸಂಸ್ಥಾಪಕ ಸಿಎಫ್‌ಸಿಎ ಚಂದ್ರಶೇಖರ ಶೆಟ್ಟಿ, ನಾವು ನಮ್ಮನ್ನು ನಂಬಬೇಕು, ನಮ್ಮಲ್ಲಿ ಭಯ ಇರಬಾರದು, ಅಳುಕು ಇರಬಾರದು. ಯುವಜನತೆ ಯಾವುದನ್ನೂ ತಮ್ಮಿಂದ ಆಗುವುದಿಲ್ಲ ಎಂದುಕೊಳ್ಳಬಾರದು. ಆಗಿಯೇ ಆಗುತ್ತದೆ ಎಂಬ ಛಲ ಇದ್ದರೆ ನಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ನಾವು ನಮ್ಮ ಫೌಂಡೇಶನ್ ಮೂಲಕ ಏಕಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ. ಪ್ಲಾಸ್ಟಿಕ್ ಭೂಮಿಗೆ ಎಸೆಯಬೇಡಿ ಇದರಿಂದ ಪ್ರಾಣಿಗಳು ಸಾಯುತ್ತವೆ. ನಾವು ಪಾಪಕರ್ಮ ಎಸಗಿದಂತಾಗುತ್ತದೆ ಎಂದರು.
ಸುದರ್ಶನ್ ಎಸ್.ವಿ. ಪ್ರಾರ್ಥಿಸಿದರು. ಗಿರೀಶ್ ಶೆಟ್ಟಿ ಸ್ವಾಗತಿಸಿದರು. ಶಿವಾನಂದ ಶೆಟ್ಟಿ ಪಡುಮನೆ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಂದೀಪ್ ದೇವಾಡಿಗ ಪುತ್ತೂರುರವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ಮಧ್ಯಾಹ್ನ ಸಸಿಹಿತ್ಲು ಯುವಕ ಯುವತಿ ಮಂಡಲದವರಿಂದ ಜನಪದ ನೃತ್ಯ ವೈಭವ, ಸಂಜೆ ದೇಂದೊಟ್ಟುಗುತ್ತು ಸುರೇಶ್ ಎಲ್. ಶೆಟ್ಟಿ ಮತ್ತು ಬಳಗದಿಂದ ಭಕ್ತಿಗೀತೆ, ದೀನ್ ರಾಜ್ ಕಳವಾರು ಸಾರಥ್ಯದಲ್ಲಿ ಏಕಕಾಲದಲ್ಲಿ ಸಹಸ್ರ ಭಜಕರಿಂದ ಕುಣಿತ ಭಜನೆ, ರಾತ್ರಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.