ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ನಗರದಲ್ಲಿ ರೇಷ್ಮೆನೂಲು ಬಿಚ್ಚಣಿಕೆಯಿಂದ ಮೊದಲೇ ಪಟ್ಟಣದಲ್ಲಿ ಶುಚಿತ್ವದ ಕೊರತೆ ಜೊತೆಗೆ ಹೋಟೆಲ್ ಮಾಲೀಕರು ಘನ ತಾಜ್ಯ ವಸ್ತುಗಳನ್ನು ರಸ್ತೆಗೆ ಎಸೆಯುವ ಮೂಲಕ ಹಾಗೂ ಚಿಕನ್, ಮಟನ್ ವ್ಯಾಪಾರಿಗಳು ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಪರಿಣಾಮ ಮಾರುಕಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ.
ಇದರಿಂದ ಶಾಲಾ, ಕಾಲೇಜಿಗೆ ತೆರಳುವ ಮಕ್ಕಳು, ಮಹಿಳೆಯರು, ಬೆಳಗಿನ ಸಮಯದಲ್ಲಿ ವಾಯು ವಿಹಾರಕ್ಕೆ ಬರುವ ವಯೋ ವೃದ್ಧರು ನಾಯಿಗಳ ಕಾಟಕ್ಕೆ ಭಯಭೀತರಾಗಿದ್ದಾರೆ. ವಿಪರ್ಯಾಸವೆಂದರೆ ಗ್ರಾಮೀಣ ಪ್ರದೇಶಕ್ಕಿಂತ ನಗರದಲ್ಲಿಯೇ ನಾಯಿ ಕಚ್ಚಿದ ಪ್ರಕರಣಗಳು ಹೆಚ್ಚಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಇಡೀ ತಾಲೂಕಿನಲ್ಲಿ ಇಲ್ಲಿವರೆಗೂ 546 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 62 ಪ್ರಕರಣ ಹಾಗೂ ಬಶೆಟ್ಟಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 42 ನಾಯಿ ಕಡಿತ ಪ್ರಕರಣಗಳೂ ದಾಖಲಾಗಿವೆಯೆಂದು ತಾಲೂಕು ಆರೋಗ್ಯಾಧಿಕಾರಿಗಳು ‘ಕನ್ನಡಪ್ರಭ’ಗೆ ಮಾಹಿತಿ ನೀಡಿದ್ದಾರೆ. ನಗರಸಭೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಬೀದಿ ನಾಯಿಗಳ ಆರ್ಭಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲದೇ ಹೋದರೆ ನಗರದಲ್ಲಿ ಬೀದಿ ನಾಯಿ ಕಡಿತ ಪ್ರಕರಣಗಳು ಇನ್ನಷ್ಟು ಹೆಚ್ಚಾಗಿ ಅಮಾಯಕರು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ.ಕೋಟ್...................ಬೀದಿ ನಾಯಿಗಳನ್ನು ಕೊಲ್ಲುವಂತಿಲ್ಲ. ಆಗಾಗಿ ನಗರದಲ್ಲಿರುವ ಚಿಕನ್, ಮಟನ್ ಅಂಗಡಿ ಮಾಲೀಕರಿಗೆ ನಗರಸಭೆಯಿಂದ ನೋಟಿಸ್ ಕೊಟ್ಟು ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದಂತೆ ಸೂಚಿಸಿದ್ದೇವೆ. ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಹೆಣ್ಣು ನಾಯಿಗಳಿಗೂ ಸಂತಾನಹರಣ ಚಿಕಿತ್ಸೆ ಬಗ್ಗೆಯು ನಗರಸಭೆ ಚಿಂತನೆ ನಡೆಸಿದೆ.ಮಂಜುನಾಥ್, ನಗರಸಭೆ ಆಯುಕ್ತರು. ಶಿಡ್ಲಘಟ್ಟ,