ಶಿಕಾರಿಪುರ ದಸರಾ: ಮಾರಿಕಾಂಬಾ ದೇವಿಗೆ ಗಂಗಾಪೂಜೆ

KannadaprabhaNewsNetwork |  
Published : Sep 23, 2025, 01:03 AM IST
ಶ್ರೀ ಗಿಡ್ಡೇಶ್ವರ ಸ್ವಾಮಿ ಹಾಗೂ ಶಿರಸಿ ಮಾರಿಕಾಂಬಾ ದೇವಿಗೆ ಗಂಗಾಪೂಜೆ ನೆರವೇರಿಸಿ ಭಕ್ತರು ಶಾಸ್ತ್ರೋಕ್ತವಾಗಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. | Kannada Prabha

ಸಾರಾಂಶ

ನಾಡಹಬ್ಬ ದಸರಾಕ್ಕೆ ಪಟ್ಟಣದ ದೊಡ್ಡಕೇರಿಯಲ್ಲಿನ ಶ್ರೀ ಗಿಡ್ಡೇಶ್ವರ ಸ್ವಾಮಿ ಹಾಗೂ ಶಿರಸಿ ಮಾರಿಕಾಂಬಾ ದೇವಿಗೆ ಶಾಸ್ತ್ರೋಕ್ತವಾಗಿ ಗಂಗಾಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ವಾಪಸ್ ಕರೆತಂದು ಸಾಂಪ್ರದಾಯಿಕ ವಿಧಿವಿಧಾನದ ಮೂಲಕ ವಿಧ್ಯುಕ್ತವಾಗಿ ಸೋಮವಾರ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ನಾಡಹಬ್ಬ ದಸರಾಕ್ಕೆ ಪಟ್ಟಣದ ದೊಡ್ಡಕೇರಿಯಲ್ಲಿನ ಶ್ರೀ ಗಿಡ್ಡೇಶ್ವರ ಸ್ವಾಮಿ ಹಾಗೂ ಶಿರಸಿ ಮಾರಿಕಾಂಬಾ ದೇವಿಗೆ ಶಾಸ್ತ್ರೋಕ್ತವಾಗಿ ಗಂಗಾಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ವಾಪಸ್ ಕರೆತಂದು ಸಾಂಪ್ರದಾಯಿಕ ವಿಧಿವಿಧಾನದ ಮೂಲಕ ವಿಧ್ಯುಕ್ತವಾಗಿ ಸೋಮವಾರ ಚಾಲನೆ ನೀಡಲಾಯಿತು.

ಮಹಾಲಯ ಅಮಾವಾಸ್ಯೆಯ ನಂತರದಲ್ಲಿ ನಾಡಹಬ್ಬ ದಸರಾ ಕಾರ್ಯಕ್ರಮ ವಿಧ್ಯುಕ್ತವಾಗಿ ಆರಂಭಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಪಟ್ಟಣದ ಶ್ರೀ ಗಿಡ್ಡೆಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷವಾಗಿ ನವರಾತ್ರಿ ಆಚರಣೆಗೆ ಚಾಲನೆ ನೀಡಲಾಯಿತು. ಅಲಂಕೃತಗೊಂಡ ಶ್ರೀ ಗಿಡ್ಡೇಶ್ವರ ಸ್ವಾಮಿ ಹಾಗೂ ಶಿರಸಿ ಮಾರಿಕಾಂಬ ದೇವಿಯ ಪಲ್ಲಕ್ಕಿ ಬ್ರಾಹ್ಮೀ ಸಮಯದಲ್ಲಿ ಪಟ್ಟಣದ ಹುಚ್ಚರಾಯ ಸ್ವಾಮಿ ದೇವಸ್ಥಾನದ ಸಮೀಪದ ಪುಷ್ಕರಣಿಯಲ್ಲಿ ಹೊಳೆ ಪೂಜೆಗೆ (ಗಂಗೆ ಪೂಜೆ) ತೆರಳಿ ಶಾಸ್ತ್ರೋಕ್ತವಾಗಿ ಗಂಗೆ ಪೂಜೆ ನೆರವೇರಿದ ನಂತರ ಮಂಗಳ ವಾದ್ಯಗಳ ಸಹಿತ ರಾಜ ಬೀದಿ ಮೂಲಕ ಮೆರವಣಿಗೆಯಲ್ಲಿ ವಾಪಾಸ್‌ ದೇವಸ್ಥಾನಕ್ಕೆ ಕರೆತರಲಾಯಿತು.

ಈ ಸಂದರ್ಬದಲ್ಲಿ ದೇವರ ಹೊರೆಹೊತ್ತ ಕಾಯಿಕೋಲಿನವರು ದೀವಿಟಿಗೆಯನ್ನು ಹಿಡಿದುಕೊಂಡು, ಚೌರಿಯವರು ಚೌರಿಯನ್ನು ಬೀಸುತ್ತಾ, ಅಲಗಿನವರು ದೇವರ ಪಲ್ಲಕ್ಕಿ ಯನ್ನು ಹೊತ್ತುಕೊಂಡು,ಕೇಲನ್ನು ಹೊತ್ತ ಮಹಿಳೆಯರು ಕೇಲನ್ನು ತಲೆಯ ಮೇಲೆ ಇಟ್ಟುಕೊಂಡು ದೇವರ ಪಲ್ಲಕ್ಕಿ ಜತೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ಸಾರ್ವಜನಿಕ ಭಕ್ತಾದಿಗಳ ಕಣ್ಣಿಗೆ ಹಬ್ಬವನ್ನು ಉಂಟು ಮಾಡಿತ್ತು.

ಮೆರವಣಿಗೆಯ ಮೂಲಕ ವಾಪಸ್ ತೆರಳಿದ ನಂತರ ಗಿಡ್ಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗದ್ದಿಗೆ ಏರುವ ದೇವರ ಘಟಸ್ಥಾಪನೆ ಮಾಡಿ ದೀಪ ಹಾಕುವ ಕಾರ್ಯಕ್ರಮದ ಮೂಲಕ ನವರಾತ್ರಿಯ ಪ್ರತಿನಿತ್ಯ ದೇವಿಯ ಪುರಾಣ ವಾಚನಕ್ಕೆ ಚಾಲನೆ ನೀಡಲಾಯಿತು. ಸತತ 10 ರಾತ್ರಿ ವಿಶೇಷ ಅನ್ನಸಂತರ್ಪಣಾ ಕಾರ್ಯಕ್ರಮವು ಆಯೋಜಿಸಲಾಗಿದ್ದು, ಜಾತಿ, ಧರ್ಮ ಭೇದ ಇಲ್ಲದ ವೈಭವದ ದಸರಾ ಸೋಮವಾರ ಆರಂಭಗೊಂಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದಜಿ ರಾಮ್‌ ಜಿ: ಡಾ। ಸುಧಾಕರ್‌
ದೂರು ಕೊಡಲು ಹೋದವರ ಮೇಲೆಯೇ ಪೊಲೀಸರ ದರ್ಪ