ಕನ್ನಡಪ್ರಭ ವಾರ್ತೆ ಉಡುಪಿ ಇಲ್ಲಿನ ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವದ ದುರ್ಗಾಷ್ಟಮಿ ಪರ್ವಕಾಲದಲ್ಲಿ ಭಾನುವಾರ, ಗಾಯತ್ರಿ ಧ್ಯಾನಪೀಠದಲ್ಲಿ ವೇದ ಮಾತೆ ಶ್ರೀ ಗಾಯತ್ರಿ ದೇವಿಯ ನೂತನ ಶಿಲಾಮಯ ಗುಡಿಗೆ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಅವರು ಶಿಲಾ ಮುಹೂರ್ತ ನೆರವೇರಿಸಿದರು. ವೇ.ಮೂ. ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ವೇ.ಮೂ. ನಾರಾಯಣ ತಂತ್ರಿಗಳ ಪೌರೋಹಿತ್ಯದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ದೇವಿಗೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಮತ್ತು ನಾಗರಾಜ ಆಚಾರ್ಯ ಹಾಗೂ ಮುಂಬಯಿಯ ಸಂತೋಷ್ ಜನ್ನ ಅವರ ಸೇವಾರ್ಥವಾಗಿ ಜೋಡಿ ಚಂಡಿಕಾಯಾಗ ಸಮರ್ಪಿಸಲ್ಪಟ್ಟಿತು. ರೋಹಿಣಿ ಶೆಟ್ಟಿಗಾರ್, ಲಾವಣ್ಯಾ, ಪ್ರಾಪ್ತಿ, ರಕ್ಷಿತಾ ಮತ್ತು ಪ್ರಿತುಲ್ ಕುಮಾರ್ ಅವರ ಸೇವಾರ್ಥವಾಗಿ ತುಲಾಭಾರ ಸೇವೆ ನೆರವೇರಿತು. ಸಂಜೀವ ಪೂಜಾರಿ ಬೈಲೂರು ಹಾಗೂ ರಕ್ಷಿತಾ ಮತ್ತು ಪ್ರಿತುಲ್ ಕುಮಾರ್ ಅವರ ಸೇವಾರ್ಥವಾಗಿ ದುರ್ಗಾನಮಸ್ಕಾರ ಪೂಜೆ ನಡೆಯಿತು. ಅರ್ಚಕ ಅನೀಶ್ ಭಟ್ ಪೂಜಾ ವಿಧಿವಿಧಾನ ನಡೆಸಿದರು. ವಿವಿಧ ನೃತ್ಯಾರ್ಥಿಗಳು ದೇವಿಗೆ ನೃತ್ಯಸೇವೆ ಸಮರ್ಪಿಸಿದರು. ನೃತ್ಯ ವೈಭವ, ಕುಣಿತ ಭಜನೆಗಳು ಜರುಗಿದವು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ. ಉತ್ತರಾಯಣದಲ್ಲಿ ಗಾಯತ್ರಿದೇವಿ ಪ್ರತಿಷ್ಠೆ ಗಾಯತ್ರಿ ದೇವಿಯನ್ನು ‘ವೇದ ಮಾತೆ’ ಎಂದು ಕರೆಯಲಾಗುತ್ತದೆ. ಆಕೆಯನ್ನು ಪುರುಷ ಮತ್ತು ಸ್ತ್ರೀರೂಪಗಳೆರಡರಲ್ಲಿಯೂ ಪೂಜಿಸುವವರಿದ್ದಾರೆ. ಎಲ್ಲದಕ್ಕೂ ವೇದವೇ ಮೂಲ. ವೇದದಿಂದಲೇ ಎಲ್ಲವನ್ನೂ ತಿಳಿದುಕೊಳ್ಳಲಾಗಿದೆ. ಆದ್ದರಿಂದ ಕ್ಷೇತ್ರದಲ್ಲಿ ಸಾನ್ನಿಧ್ಯರಾಗಿರುವ ಕಪಿಲ ಮಹರ್ಷಿಗಳನ್ನು ಅನುಗ್ರಹಿಸಿದ ಗಾಯತ್ರಿ ದೇವಿಗೂ ಸ್ಥಾನ ಸಂಕಲ್ಪಿಸಿ ಶಿಲಾನ್ಯಾಸ ನೆರವೇರಿಸಲಾಗಿದೆ. ಈ ಸಾನ್ನಿಧ್ಯವು ಉತ್ತರಾಯಣದಲ್ಲಿ ಪ್ರತಿಷ್ಠಾಪನೆಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಹೇಳಿದರು.