ಸಾಯಿಮಂದಿರ ಆಡಳಿತ ಮಂಡಳಿ ವಜಾಗೊಳಿಸಿ: ಮುತಾಲಿಕ್‌

KannadaprabhaNewsNetwork |  
Published : Nov 26, 2025, 02:15 AM IST
4554 | Kannada Prabha

ಸಾರಾಂಶ

ಸಾಯಿ ಮಂದಿರದ ಅಧ್ಯಕ್ಷ ಮಹಾದೇವ ಮಾಶ್ಯಾಳ ಅವರಿಂದ ಮಂದಿರದ ಪಾವಿತ್ರ್ಯತೆ ಹಾಳಾಗುತ್ತಿದೆ. ಅವರ ಭ್ರಷ್ಟ ಆಡಳಿತದ ಕುರಿತು ಸಾಕಷ್ಟು ದಾಖಲೆ ಸಂಗ್ರಹಿಸಲಾಗಿದೆ. ಭಕ್ತರು ನೀಡಿರುವ ದೇಣಿಗೆ ಹಣ ದುರುಪಯೋಗ ಆಗುತ್ತಿದ್ದು, ಮೇಲ್ನೋಟಕ್ಕಷ್ಟೇ ಮಂದಿರದಲ್ಲಿ ಉತ್ಸವ, ಪೂಜೆ ನಡೆಯುತ್ತಿವೆ.

ಹುಬ್ಬಳ್ಳಿ:ಇಲ್ಲಿನ ಹಳೇಕೋರ್ಟ್ ವೃತ್ತದ ಬಳಿಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅವ್ಯವಹಾರ, ದುರಾಡಳಿತ, ಅನಾಚಾರ ನಡೆಯುತ್ತಿದ್ದು, ಈಗಿರುವ ಆಡಳಿತ ಮಂಡಳಿ ವಜಾಗೊಳಿಸಬೇಕು. ತಾತ್ಕಾಲಿಕವಾಗಿ ಆಡಳಿತಾಧಿಕಾರಿ ನೇಮಿಸಬೇಕು. ಬಳಿಕ ಹೊಸ ಆಡಳಿತ ಮಂಡಳಿ ರಚಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಯಿ ಮಂದಿರದ ಅಧ್ಯಕ್ಷ ಮಹಾದೇವ ಮಾಶ್ಯಾಳ ಅವರಿಂದ ಮಂದಿರದ ಪಾವಿತ್ರ್ಯತೆ ಹಾಳಾಗುತ್ತಿದೆ. ಅವರ ಭ್ರಷ್ಟ ಆಡಳಿತದ ಕುರಿತು ಸಾಕಷ್ಟು ದಾಖಲೆ ಸಂಗ್ರಹಿಸಲಾಗಿದೆ. ಭಕ್ತರು ನೀಡಿರುವ ದೇಣಿಗೆ ಹಣ ದುರುಪಯೋಗ ಆಗುತ್ತಿದ್ದು, ಮೇಲ್ನೋಟಕ್ಕಷ್ಟೇ ಮಂದಿರದಲ್ಲಿ ಉತ್ಸವ, ಪೂಜೆ ನಡೆಯುತ್ತಿವೆ. ಒಳಗೊಳಗೆ ಭಾರೀ ದರೋಡೆ ನಡೆದಿದೆ. ಈ ಕುರಿತು ಜಿಲ್ಲಾಧಿಕಾರಿ, ಆದಾಯ ತೆರಿಗೆ ಇಲಾಖೆಗೂ ದೂರು ನೀಡಿದ್ದೇವೆ. ಸಮಿತಿ ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.ಹಿಂದೆ ಇದ್ದ ಸಾಯಿಬಾಬಾ ಅವರ ಮಾರ್ಬಲ್ ಮೂರ್ತಿ ಹಾಳಾಗಿದೆ ಎಂದು, ಇಟಲಿಯಿಂದ ಹೊಸ ಮೂರ್ತಿ ತಂದು ಪ್ರತಿಷ್ಠಾಪಿಸಿದ್ದೇವೆ ಎನ್ನುತ್ತಿದ್ದಾರೆ. ಎಲ್ಲಿಂದ, ಎಷ್ಟು ಹಣಕ್ಕೆ, ಯಾವಾಗ ತಂದಿದ್ದಾರೆ? ಎನ್ನುವ ಕುರಿತು ತನಿಖೆ ನಡೆಯಬೇಕು. ಮಂದಿರಕ್ಕೆ ದಾನ ಮಾಡಿದ ಗೋವುಗಳನ್ನು ಮಾರಾಟ ಮಾಡಿದ್ದು, ಅದರ ದಾಖಲೆ ಕೂಡ ಇಲ್ಲ. ಪಾಲಿಕೆಯಿಂದ ಅನುಮತಿ ಪಡೆಯದೇ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಅಲ್ಲಿ ಮಂದಿರಕ್ಕೆ ಸಂಬಂಧವಿಲ್ಲದ, ಠರಾವು ಸಹ ಇಲ್ಲದೆ ಟೇಬಲ್‌ ಟೆನ್ನಿಸ್‌ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ನ. 29ರಂದು ಉಪ ನೋಂದಣಾಧಿಕಾರಿಗಳು ಆರೋಪದ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಆ ವೇಳೆ ಸತ್ಯಕ್ಕೆ ದೂರವಾದ ವರದಿಯೇನಾದರೂ ನೀಡಿದರೆ, ದಾಖಲೆ ಸಮೇತ ಅಂಥ ಅಧಿಕಾರಿಗಳ ವಿರುದ್ಧವೂ ಹೋರಾಟ ನಡೆಯಲಿದೆ. ಎರಡು ದಿನಗಳಲ್ಲಿ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಿದ್ದೇವೆ ಎಂದರು.ಧಾರ್ಮಿಕ ಸ್ಥಳದಲ್ಲಿ ಆಗುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಈಗಿನ ಅಧ್ಯಕ್ಷರು ಮಾಡುತ್ತಿರುವ ಭ್ರಷ್ಟಾಚಾರದ ಧೋರಣೆ ಖಂಡನೀಯ. ಮಂದಿರದ ಭಕ್ತರಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಹಾಗೂ ಮಂದಿರದ ಶುದ್ಧೀಕರಣಕ್ಕಾಗಿ ಈ ಹೋರಾಟ ಕೈಗೊಂಡಿದ್ದೇವೆ ಎಂದರು.

ಅಣ್ಣಪ್ಪ ದೀವಟಗಿ, ಮಹಾಂತೇಶ ಟೊಂಗಳಿ, ಆನಂದ ಲದ್ವಾ, ಕಲಾವತಿ ದತ್ತವಾಡ ಇದ್ದರು.‘ಆರೋಪ ಸತ್ಯಕ್ಕೆ ದೂರ’‘ಮಂದಿರದ ಹೆಸರಲ್ಲಿದ್ದ ಹಣವನ್ನು ಚೆಕ್‌ ಮೂಲಕವೇ ಮಂದಿರದ ಅಭಿವೃದ್ಧಿ ಕಾರ್ಯಕ್ಕೇ ಬಳಸಲಾಗಿದೆ. ಭಕ್ತರು ನೀಡುವ ಹಣ ಮಂದಿರದ ಖಾತೆಗೆ ಜಮಾ ಆಗುತ್ತಿದೆ. ಮುತಾಲಿಕ್‌ ಅವರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸಾಯಿ ಸದ್ಭಕ್ತ ಮಂಡಳಿ ಪ್ರಕಟಣೆ ತಿಳಿಸಿದೆ.

ಮಂದಿರದ ಹಣಕಾಸು ಹಾಗೂ ಅಭಿವೃದ್ಧಿ ವ್ಯವಹಾರದ ಕುರಿತು ಪ್ರತಿವರ್ಷ ಲೆಕ್ಕಪರಿಶೋಧನೆ ನಡೆಯುತ್ತದೆ. ಎಲ್ಲವೂ ಪಾರದರ್ಶಕವಾಗಿದ್ದು, ಲೆಕ್ಕಪತ್ರಗಳನ್ನು ಪರಿಶೀಲಿಸಬಹುದು. ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷ ಟಿ.ಎಸ್‌. ಮೋಹನಕುಮಾರ ಅವರು, ಅನಗತ್ಯವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಮಾಶ್ಯಾಳ ಅವರ ಸದಸ್ಯತ್ವ ರದ್ದಾಗಿದ್ದು, ಅದನ್ನು ಉಪನೋಂದಣಾಧಿಕಾರಿಗೆ ಹೇಳದೆ ತಮ್ಮದೇ ತಂಡ ಕಟ್ಟಿಕೊಂಡು ನಿಯಮ ಉಲ್ಲಂಘಿಸಿ ಅಧ್ಯಕ್ಷರಾಗಿದ್ದಾರೆ.ಟಿ.ಎಸ್‌. ಮೋಹನಕುಮಾರ, ಮಾಜಿ ಅಧ್ಯಕ್ಷ, ಶಿರಡಿ ಸಾಯಿ ಸದ್ಭಕ್ತ ಮಂಡಳಿ

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ