ಅದ್ಧೂರಿಯಾಗಿ ನಡೆದ ಶ್ರೀವೀರಭದ್ರೇಶ್ವರ ರಥೋತ್ಸವ

KannadaprabhaNewsNetwork |  
Published : Nov 26, 2025, 02:15 AM IST
ಹಳೇ ಹುಬ್ಬಳ್ಳಿಯ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಾಕಲಾಗಿದ್ದ ಅಗ್ನಿಕುಂಡದಲ್ಲಿ ಪುರವಂತರು ಅಗ್ನಿಹಾಯ್ದರು.(ಚಿತ್ರ: ಈರಪ್ಪ ನಾಯ್ಕರ್) | Kannada Prabha

ಸಾರಾಂಶ

ಶ್ರೀವೀರಭದ್ರ ದೇವರ ಭವ್ಯ ಪಲ್ಲಕ್ಕಿ ಮೆರವಣಿಗೆಗೆ ಉದ್ಯಮಿ ಉದಯಕುಮಾರ ಪುರಾಣಿ ಚಾಲನೆ ನೀಡಿದರು. ಕರಡಿ ಮಜಲು, ಡೊಳ್ಳು, ನಂದಿಕೋಲು, ವೀರಗಾಸೆ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರಗು ತಂದವು.

ಹುಬ್ಬಳ್ಳಿ:

ಹಳೇಹುಬ್ಬಳ್ಳಿಯ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ಅದ್ಧೂರಿಯಾಗಿ ನೆರವೇರಿತು.

ಬೆಳಗ್ಗೆ ದೇವಸ್ಥಾನದ ಮುಂಭಾಗದಿಂದ ನಡೆದ ಶ್ರೀವೀರಭದ್ರ ದೇವರ ಭವ್ಯ ಪಲ್ಲಕ್ಕಿ ಮೆರವಣಿಗೆಗೆ ಉದ್ಯಮಿ ಉದಯಕುಮಾರ ಪುರಾಣಿ ಚಾಲನೆ ನೀಡಿದರು. ಕರಡಿ ಮಜಲು, ಡೊಳ್ಳು, ನಂದಿಕೋಲು, ವೀರಗಾಸೆ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರಗು ತಂದವು. ಅಕ್ಕಿ ಹೊಂಡ, ದುರ್ಗದ ಬೈಲ್, ಅಕ್ಕಿಪೇಟೆ, ಜಂಗ್ಲಿಪೇಟೆ, ಹಿರೇಪೇಟ, ಗೋಡ್ಕೆ ಓಣಿ ಮೂಲಕ ಸಾಗಿ ಮರಳಿ ದೇವಸ್ಥಾನಕ್ಕೆ ಬಂದಿತು. ಬಳಿಕ ಪಲ್ಲಕ್ಕಿಯನ್ನು ಅಗ್ನಿಯಲ್ಲಿ ಹಾಯುವ ಮೂಲಕ ದೇವಸ್ಥಾನದ ಒಳಗೆ ಕೊಂಡೊಯ್ಯಲಾಯಿತು.

ಅಗ್ನಿ ಹಾಯ್ದು ಭಕ್ತರು:

ಶ್ರೀವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಅಗ್ನಿಕುಂಡ ಸಿದ್ಧಗೊಳಿಸಲಾಗಿತ್ತು. ಈ ವೇಳೆ ಪುರವಂತರು ಅಗ್ನಿಹಾಯ್ದರು. ಇವರೊಂದಿಗೆ ನೂರಾರು ಭಕ್ತರು ಉದ್ಯೋಗ, ಸಂತಾನ, ಆಸ್ತಿ, ಸಂಪತ್ತು ಹಾಗೂ ಆರೋಗ್ಯ ಸೇರಿದಂತೆ ಹಲಾವಾರು ಇಷ್ಟಾರ್ಥಗಳನ್ನು ಈಡೇರಿಸುವಂತೆ ಅಗ್ನಿಕುಂಡ ಹಾಯ್ದು ಹರಕೆ ತೀರಿಸಿದರು. ಅಲ್ಲದೆ ಪುರವಂತರ ನೇತೃತ್ವದಲ್ಲಿ ವಿಧಿ-ವಿಧಾನದ ಮೂಲಕ ಭಕ್ತರು ತಮ್ಮ ನಾಲಿಗೆ, ಕೆನ್ನೆ, ಕೈ ಭಾಗ ಸೇರಿದಂತೆ ದೇಹದ ವಿವಿಧ ಕಡೆಗಳಲ್ಲಿ ಶಸ್ತ್ರ ಚುಚ್ಚಿಕೊಂಡು ಭಕ್ತಿ ಪರಾಕಾಷ್ಠೆ ಮೆರೆದರು.

ಅದ್ಧೂರಿ ರಥೋತ್ಸವ:

ಸಂಜೆ ನಡೆದ ಅದ್ಧೂರಿ ರಥೋತ್ಸವಕ್ಕೆ ಶ್ರೀಸಿದ್ಧಾರೂಢಸ್ವಾಮಿಯವರ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಚನ್ನವೀರ ಮುಂಗರವಾಡಿ ಚಾಲನೆ ನೀಡಿದರು. ಈ ವೇಳೆ ದೇವಸ್ಥಾನದ ಟ್ರಸ್ಟ್ ಕಮಿಟಿ ಗೌರವಾಧ್ಯಕ್ಷ ನಾಗಯ್ಯ ಚರಂತಿಮಠ, ಕಮಿಟಿ ಅಧ್ಯಕ್ಷ ಚಂದ್ರಶೇಖರ ಮಟ್ಟಿ, ಉಪಾಧ್ಯಕ್ಷ ಎಸ್.ಎಂ. ರುದ್ರಯ್ಯ, ಬಸವರಾಜ ಕಲ್ಯಾಣಶೆಟ್ಟರ್, ಚಂದ್ರಶೇಖರ ಪಾಟೀಲ, ಈರಣ್ಣ ಬಲೂಚಿಗಿ, ಶಿವಯೋಗಿ ವಿಭೂತಿಮಠ, ಬಸವರಾಜ ಚಿಕ್ಕಮಠ, ರವಿ ನಾಯ್ಕ, ಚಂದ್ರಶೇಖರ ಪಾಟೀಲ, ದೇವಸ್ಥಾನದ ಪ್ರಧಾನ ಅರ್ಚಕ ಸೋಮಯ್ಯ ಶಾಸ್ತ್ರೀ ಸೇರಿದಂತೆ ಧಾರವಾಡ, ಗದಗ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಸುತ್ತಮುತ್ತಲಿನ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ವಾಟರ್‌ ಬಾಟಲ್‌ ತಯಾರಿಸಲು ಬೆಂಗಳೂರು ಜಲಮಂಡಳಿ ಸಿದ್ಧತೆ: ಶೀಘ್ರ ಮಾರುಕಟ್ಟೆಗೆ ಲಭ್ಯ
ತಾಯಿಯಿಂದಲೇ 3 ದಿನದ ಶಿಶು ಉಸಿರುಗಟ್ಟಿಸಿ ಕೊಲೆ