ಶಿವಮೊಗ್ಗ-ಬೆಂಗಳೂರು: ಇಂಡಿಗೋ ಕಾರ್‍ಯಾಚರಣೆ ಇಲ್ಲ

KannadaprabhaNewsNetwork |  
Published : May 02, 2026, 01:45 AM IST
ಪೊಟೊ: 01ಎಸ್‌ಎಂಜಿಕೆಪಿ05 | Kannada Prabha

ಸಾರಾಂಶ

ಬೆಂಗಳೂರು-ಶಿವಮೊಗ್ಗ ಮಧ್ಯೆ ನಿತ್ಯ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ ಸೇವೆ ಸ್ಥಗಿತಗೊಳಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಮಾರ್ಗಸೂಚಿ ಅನ್ವಯ ಕಾರ್ಯಾಚರಣೆಗೆ, ಪೈಲಟ್‌ಗಳ ಕೊರತೆ ಕಾರಣಕ್ಕೆ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸಂಚಾರ ಮೇ 1ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೆಂಗಳೂರು-ಶಿವಮೊಗ್ಗ ಮಧ್ಯೆ ನಿತ್ಯ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ ಸೇವೆ ಸ್ಥಗಿತಗೊಳಿಸಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಮಾರ್ಗಸೂಚಿ ಅನ್ವಯ ಕಾರ್ಯಾಚರಣೆಗೆ, ಪೈಲಟ್‌ಗಳ ಕೊರತೆ ಕಾರಣಕ್ಕೆ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸಂಚಾರ ಮೇ 1ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಇಂಡಿಗೊ ಸಂಸ್ಥೆ ನಿತ್ಯ ಶಿವಮೊಗ್ಗ-ಬೆಂಗಳೂರು ಮಧ್ಯೆ ವಿಮಾನ ಹಾರಾಟ ನಡೆಸುತ್ತಿತ್ತು. ಮೂರು ತಿಂಗಳ ಅವಧಿಗೆ (ಅಕ್ಟೋಬರ್) ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಸಂಸ್ಥೆ ತಿಳಿಸಿದೆ.

ಶಿವಮೊಗ್ಗ-ಬೆಂಗಳೂರು ನಡುವೆ ಹೆಚ್ಚಿನ ಜನದಟ್ಟಣೆ ಇರುವುದರಿಂದ ವಿಮಾನ ಹಾರಾಟ ನಿಲ್ಲಿಸದಂತೆ ಇಂಡಿಗೊ ಸಂಸ್ಥೆಗೆ ಸರ್ಕಾರ ಮನವಿ ಮಾಡಿತ್ತು. ಆದರೆ ಅದಕ್ಕೆ ಸಂಸ್ಥೆ ಒಪ್ಪಿಲ್ಲ. ಡಿಜಿಸಿಎ ಮಾರ್ಗಸೂಚಿ ಪಾಲನೆಗಾಗಿ ಬೆಂಗಳೂರು-ಶಿವಮೊಗ್ಗ ಮಾತ್ರವಲ್ಲ ಕಡಿಮೆ ದೂರದ ಮಾರ್ಗಗಳಲ್ಲಿ ಬಹಳಷ್ಟು ಕಡೆ ಶುಕ್ರವಾರದಿಂದ ಸಂಸ್ಥೆ ವಿಮಾನ ಹಾರಾಟ ನಿಲ್ಲಿಸುತ್ತಿದೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ 2025ರ ಜೂನ್ 12 ರಂದು ಏರ್‌ಇಂಡಿಯಾ ವಿಮಾನ (ಎಐ171) ಪತನದ ನಂತರ ವಿಮಾನಗಳ ಸುರಕ್ಷಿತ ಕಾರ್ಯಾಚರಣೆಗೆ ಡಿಜಿಸಿಎ ಕೆಲವು ನಿಯಮಾವಳಿ ರೂಪಿಸಿದೆ. ಅವುಗಳ ಅಳವಡಿಕೆಗೆ ಒಂದು ವರ್ಷದ ಕಾಲಾವಕಾಶ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗಿದೆ. ಆ ನಿಯಮಾವಳಿ ಪಾಲನೆಯಿಂದ ಇಂಡಿಗೊ ಸಂಸ್ಥೆಗೆ ಪೈಲಟ್‌ಗಳ ಕೊರತೆ ಆಗಿದೆ.

ಮಧ್ಯಪ್ರಾಚ್ಯ ಯುದ್ದದ ಹಿನ್ನೆಲೆ ಇಂಧನ ದರ ಏರಿಕೆಯಾಗಿದೆ. ವೈಮಾನಿಕ ಇಂಧನದ ಬೆಲೆ ಗಗನಕ್ಕೇರಿದೆ. ಭಾರತದ ಜನಪ್ರಿಯ ವಿಮಾನಯಾನ ಸಂಸ್ಥೆ ಇಂಡಿಗೋ ಏರ್‌ಲೈನ್ಸ್‌ಗೆ ಇದರಿಂದ ಭಾರಿ ಪೆಟ್ಟು ಬಿದ್ದಿದೆ.

ವಿಜಿಎ- ಒಪ್ಪಂದ ಮುಕ್ತಾಯ:

ಬೆಂಗಳೂರು- ಶಿವಮೊಗ್ಗ ಮಾರ್ಗವು ಉಡಾನ್ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರವೆ ವಯೋಬಲಿಟಿ ಗ್ಯಾಪ್ ಫಂಡಿಂಗ್ ಒಪ್ಪಂದದ ಮೂಲಕ ನೆರವು ನೀಡುತ್ತಿತ್ತು. ಪ್ರತಿ ಟಿಕೆಟ್‌ಗೆ 500 ರು. ಸಹಾಯಧನವನ್ನು ರಾಜ್ಯ ಸರ್ಕಾರ ಒದಗಿಸುತ್ತಿತ್ತು. ಈ ಒಪ್ಪಂದವು 2025ರ ಆಗಸ್ಟ್‌ನಲ್ಲಿ ಮುಕ್ತಾಯಗೊಂಡಿತ್ತು. ಇದರಿಂದ ಇಂಡಿಗೊ ಸಂಸ್ಥೆಗೆ ನಷ್ಟವಾಗಿತ್ತು. ಆದರು 2026ರ ಏ.30ರವರೆಗೆ ಸೇವೆ ಮುಂದುವರೆದಿತ್ತು.

ಬೆಂಗಳೂರು- ಶಿವಮೊಗ್ಗ- ಬೆಂಗಳೂರು ಮಾರ್ಗದ ರದ್ದತಿ ತಾತ್ಕಾಲಿಕ.ಆದರೆ ಸಮಸ್ಯೆಗಳೆಲ್ಲ ಪರಿಹಾರವಾಗಿ ಸೇವೆ ಪುನಾರಂಭ ಆಗುವುದಕ್ಕೆ ಯಾವುದೇ ಕಾಲಮಿತಿ ಘೋಷಣೆ ಆಗಿಲ್ಲ. ಇದರ ಬೆನ್ನಿಗೆ ಇತರೆ ವಿಮಾನಯಾನ ಸಂಸ್ಥೆಗಳ ಜತೆಗೆ ಚರ್ಚೆ ಆರಂಭವಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸದ್ಯ ಸ್ಟಾರ್ ಏರ್ ಸಂಸ್ಥೆ ಹೈದರಾಬಾದ್, ಗೋವಾ ಹಾಗೂ ತಿರುಪತಿಗೆ, ಸ್ಪೈಸ್ ಜೆಟ್ ಸಂಸ್ಥೆ ಶಿವಮೊಗ್ಗದಿಂದ ಹೈದರಾಬಾದ್, ಚೆನ್ನೈಗೆ ನಿತ್ಯ ವಿಮಾನ ಓಡಾಟ ನಡೆಸುತ್ತಿವೆ.ಇನ್ನಷ್ಟು ಪ್ರಮುಖ ಸ್ಥಳಗಳಿಗೆ ವಿಮಾನಯಾನ ಆರಂಭವಾಗುವ ನಿರೀಕ್ಷೆ ಇತ್ತು. ಆದರೆ ಈಗ ಜನಪ್ರಿಯ ಮಾರ್ಗವಾಗಿದ್ದ ಬೆಂಗಳೂರಿಗೆ ವಿಮಾನಯಾನ ಸೇವೆ ಸ್ಥಗಿತವಾಗಿರುವುದು ಚರ್ಚೆಗೆ ಕಾರಣವಾಗಿದೆ.

ಪ್ರತಿ ದಿನವು ಈ ವಿಮಾನ ಬಹುತೇಕ ಭರ್ತಿಯಾಗಿಯೇ ತೆರಳುತ್ತಿತ್ತು. ಶಿವಮೊಗ್ಗ ವಿಮಾನ ನಿಲ್ದಾಣದ ಮಟ್ಟಿಗೆ ಈ ವಿಮಾನ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ವಿಮಾನವಾಗಿತ್ತು. 2026ರ ಮೇ 1 ರಿಂದ ಶಿವಮೊಗ್ಗ - ಬೆಂಗಳೂರು ನಡುವೆ ವಿಮಾನಯಾನ ಸೇವೆ ಸ್ಥಗಿತಗೊಳಿಸಿದೆ.

ಇಂಡಿಗೋ ವಿಮಾನ ನಿಲ್ದಾಣದ ಹಿನ್ನೆಲೆ

2023ರ ಫೆ.27 ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಯಿತು. ಆದರೆ ನಾಗರಿಕ ವಿಮಾನ ಸೇವೆ ಆರಂಭವಾಗಿದ್ದು ಆಗಸ್ಟ್ ತಿಂಗಳಲ್ಲಿ. ಆ.31 ರಿಂದ ಬೆಂಗಳೂರು - ಶಿವಮೊಗ್ಗ ಇಂಡಿಗೋ ವಿಮಾಯಾನ ಸೇವೆ ಶುರುವಾಯಿತು. ಅಂದು ಬೆಳಗ್ಗೆ 9.50 ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಆಯಿತು. ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್ ನೀಡಲಾಗಿತ್ತು. ಈ ಬೆಳವಣಿಗೆ ಕಂಡು ಶಿವಮೊಗ್ಗದ ಜನ ಪುಳಕಿತರಾಗಿದ್ದರು.ಇಂಡಿಗೋ ವಿಮಾನಯಾನ ಸಂಸ್ಥೆಯ ಎಟಿಆರ್ ಮಾದರಿಯ ವಿಮಾನ ಶಿವಮೊಗ್ಗ - ಬೆಂಗಳೂರು ಮಧ್ಯೆ ನಿತ್ಯ ಹಾರಾಟ ಮಾಡುತ್ತಿತ್ತು. 72 ಸೀಟುಗಳಿದ್ದ ವಿಮಾನ ಇದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಸ್ಕಾಂ ಗ್ರಾಹಕರಿಗೆ 91 ಪೈಸೆ ದರ ಹೆಚ್ಚಳದ ಶಾಕ್‌
ಅನಿಲ ದರ ಏರಿಕೆ ಸಂಘಟಿತ ಲೂಟಿ: ಸಿಎಂ