ಹೊಸಪೇಟೆ: ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ಬಳ್ಳದಿಂದ ಅಳೆದಿರುವ ವಿಜಯನಗರ ಸಾಮ್ರಾಜ್ಯದ ಹಂಪಿಯ ಕಲ್ಲು, ಮಣ್ಣುಗಳನ್ನು ಪರೀಕ್ಷಿಸದೇ, ಸಾಣಿಸದೇ ಎಲ್ಲೂ ಸಾಗಾಟ ಮಾಡುವಂತಿಲ್ಲ. ಇನ್ನು ಉತ್ಖನನ ನಡೆಸದೇ ಹಂಪಿಯಲ್ಲಿ ಏನೂ ಮಾಡುವಂತಿಲ್ಲ. ಹಾಗಿದ್ದರೂ ಭಾರತೀಯ ಪುರಾತತ್ವ ಇಲಾಖೆಯಿಂದಲೇ ಹಂಪಿಯಲ್ಲಿ ಮಣ್ಣು ತೆಗೆದು ರಸ್ತೆಗೆ ಚೆಲ್ಲಲಾಗುತ್ತಿದೆ ಎಂಬ ಆರೋಪ ಈಗ ಬಲವಾಗಿ ಕೇಳಿಬಂದಿದೆ.
ಹಂಪಿಯ ಪಟ್ಟಣದ ಯಲ್ಲಮ್ಮ ಪ್ರದೇಶದಲ್ಲಿ ಮಣ್ಣು ಅಗೆದು ಹಜಾರ ದೇವಾಲಯದಿಂದ ನೆಲಸ್ತರದ ಶಿವ ದೇಗುಲದ ವರೆಗಿನ ಒಳ ರಸ್ತೆಯಲ್ಲಿ ಹಾಕಲಾಗುತ್ತಿದೆ. ಈ ಮಣ್ಣಿನಲ್ಲಿ ಅಮೂಲ್ಯ ವಸ್ತುಗಳು, ಪುರಾತತ್ವಕ್ಕೆ ಸಂಬಂಧಿಸಿದ ವಸ್ತುಗಳು, ಮುತ್ತುಗಳು ಇದ್ದರೇ ಏನು ಗತಿ? ಇಂತಹ ಅಚಾತುರ್ಯ ನಡೆಯಬಾರದು. ಹಂಪಿಯಲ್ಲಿ ಉತ್ಖನನ ನಡೆಸಿ, ಪರಿಶೀಲಿಸಬೇಕು. ಈ ಹಿಂದೆ ಕಮಲಾಪುರದ ಐಬಿ ಪ್ರದೇಶದ ಆವರಣದಲ್ಲಿ ಕುದುರೆಗಳ ಅವಶೇಷಗಳು ದೊರೆತಿದ್ದವು. ಆಗ ಮಣ್ಣು ಅಗೆಯುವುದನ್ನು ಬಿಟ್ಟು ಉತ್ಖನನ ನಡೆಸಲಾಗಿತ್ತು. ಈಗ ಪಟ್ಟಣದ ಯಲ್ಲಮ್ಮ ಪ್ರದೇಶದಲ್ಲಿ ಮಣ್ಣು ಅಗೆದು, ಟ್ರ್ಯಾಕ್ಟರ್‌ನಲ್ಲಿ ತುಂಬಿ ರಸ್ತೆಗೆ ಎಸೆಯಲಾಗುತ್ತಿದೆ. ಐತಿಹಾಸಿಕ ಪ್ರದೇಶದ ಮಣ್ಣು, ಕಲ್ಲುಗಳು ಕೂಡ ಬಹುಮುಖ್ಯ. ಇದೆಲ್ಲ ತಿಳಿದ ಪುರಾತತ್ವ ಇಲಾಖೆ ವತಿಯಿಂದಲೇ ಹೀಗೇ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸ್ಮಾರಕಪ್ರಿಯರು ಪ್ರಶ್ನಿಸುತ್ತಿದ್ದಾರೆ.ಹಂಪಿಯಲ್ಲಿ ಈ ಹಿಂದೆ ಉತ್ಖನನ ನಡೆಸಿ ಶಾಸನ, ಮೂರ್ತಿ, ಚಿನ್ನಲೇಪಿತ ವಸ್ತುಗಳು, ಮುತ್ತುಗಳು ಕೂಡ ದೊರೆತಿವೆ. ಆಗ ಪುರಾತತ್ವ ಇಲಾಖೆಯಿಂದ ನಿರಂತರ ಉತ್ಖನನ ನಡೆಸಿ, ಪರೀಕ್ಷಿಸಿ ಸೂಕ್ಷ್ಮವಾಗಿ ಹೆಜ್ಜೆ ಇಡಲಾಗುತ್ತಿತ್ತು. ಆದರೆ, ಈಗ ಹಂಪಿ ಬರೀ ಪ್ರವಾಸೋದ್ಯಮದ ದೃಷ್ಟಿಕೋನದೊಂದಿಗೆ ನೋಡಲಾಗುತ್ತಿದೆ. ಐತಿಹಾಸಿಕ ಪ್ರದೇಶದ ಪ್ರತಿ ಸ್ಮಾರಕಗಳನ್ನು ಕಾಪಾಡುವುದು ಬಹುಮುಖ್ಯ. ಜತೆಗೆ ನೆಲದಲ್ಲಿ ಹುದುಗಿರುವ ಅವಶೇಷಗಳು ಕೂಡ ಅಷ್ಟೇ ಮುಖ್ಯ. ಆದರೆ, ಈಗ ಮಣ್ಣು ಪರೀಕ್ಷಿಸದೇ, ಸಾಣಿಸದೇ ಸಾಗಾಟ ಮಾಡುತ್ತಿರುವುದು ಸರಿಯಲ್ಲ ಎಂದು ಸ್ಮಾರಕಪ್ರಿಯ ಧನಂಜಯ ದೂರಿದರು.